ಮಾಯಾ ಮಧ್ಯಾಹ್ನದ ವೇಳೆ ಹಳೆಯ ಅಲ್ಯೂಮಿನಿಯಂ ಪಾತ್ರೆಯಿಂದ ಅಳಿದುಳಿದ ಅನ್ನವನ್ನು ಊಟಕ್ಕೆ ಬಡಿಸಿಕೊಳ್ಳುತ್ತಿದ್ದರು. ಇದು ಅವರ ಪಾಲಿನ ದಿನದ ಏಕೈಕ ಊಟವಾಗಿತ್ತು. ಈಗ ಕಡಾಯಿಯಲ್ಲಿ ಅವರಿಗೆ ಮತ್ತು ಪತಿ ಶಿವ ಪಾಲಿಗೆ ಮಸೂರ್ ದಾಲ್ (ಬೇಳೆ ಕಾಳು) ಕೂಡ ಉಳಿದಿಲ್ಲ.
“ನಾವು ಒಂದೇ ಹೊತ್ತು ಊಟ ಮಾಡುತ್ತೇವೆ, ಆದರೆ ನಮ್ಮ ಮಕ್ಕಳಿಗೆ ಎರಡು ಬಾರಿ ಅಡುಗೆ ಮಾಡುತ್ತೇವೆ. ಆ ಮೂಲಕ ನಾವು ಅವರು ಸಾಕಾಗುವಷ್ಟು ತಿನ್ನುತ್ತಾರೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊಳ್ಳುತ್ತೇವೆ” ಎಂದು 23 ವರ್ಷದ ಮಾಯಾ ಹೇಳುತ್ತಾರೆ. "ಕೊರೊನಾ ಮಹಾಮಾರಿ ಶುರುವಾದಾಗಿನಿಂದ ನಾವು ಕಡಿಮೆ ಪ್ರಮಾಣದಲ್ಲಿ ರೇಷನ್ ಸಾಮಾನುಗಳನ್ನು ಖರೀದಿಸುತ್ತಿದ್ದೇವೆ" ಎಂದು 25 ವರ್ಷದ ಶಿವ, ತಮ್ಮ ಬಿದಿರಿನ ಗುಡಿಸಲಿನ ಹೊರಗೆ ಕುಳಿತು ಹೇಳುತ್ತಿದ್ದರು. ಅದರ ಗೋಡೆಗಳು ಮತ್ತು ಮೇಲ್ಛಾವಣಿಯು ಹಳೆಯ ಸೀರೆಗಳು ಮತ್ತು ಪ್ಲಾಸ್ಟಿಕ್ ಶೀಟ್ ಗಳಿಂದ ಮುಚ್ಚಲ್ಪಟ್ಟಿದೆ.
ಮಾರ್ಚ್ 2020ರಲ್ಲಿ ಕೊರೊನಾ ಸಂಬಂಧಿತ ಲಾಕ್ಡೌನ್ಗಳು ಪ್ರಾರಂಭವಾದಾಗಿನಿಂದ, ಮಾಯಾ ಮತ್ತು ಶಿವ ಗಂದಡೆ ಅವರು ಈಗ ತಮ್ಮನ್ನು ಮತ್ತು 2ರಿಂದ 7 ವರ್ಷದೊಳಗಿನ ತಮ್ಮ ನಾಲ್ಕು ಮಕ್ಕಳನ್ನು ಪೋಷಿಸಲು ಹೆಣಗಾಡುತ್ತಿದ್ದಾರೆ.
ಬಯಲು ಪ್ರದೇಶದಲ್ಲಿ ಅವರ ತಾತ್ಕಾಲಿಕ ಗುಡಿಸಲು ಬೀಡ್ ಜಿಲ್ಲೆಯ ಬೀಡ್ ತಾಲೂಕಿನ ಅವರ ನೆಲೆಗಳಿಗೆ ಸಮೀಪವಿರುವ ಗ್ರಾಮವಾದ ಪಂಢರ್ಯಾಚಿವಾಡಿಯಿಂದ ಸುಮಾರು 6ರಿಂದ 7 ಕಿಲೋಮೀಟರ್ ದೂರದಲ್ಲಿದೆ. ಮಳೆ ಬಂದಾಗ, ಬಣ್ಣಬಣ್ಣದ ರಂಧ್ರಗಳ ಗೋಡೆಗಳು ಮತ್ತು ಛಾವಣಿಯ ಮೂಲಕ ನೀರು ಜಿನುಗುತ್ತದೆ.
ಬಯಲಿನಲ್ಲಿರುವ 14 ಗುಡಿಸಲುಗಳು ಸಾಂಪ್ರದಾಯಿಕವಾಗಿ ಭಿಕ್ಷೆ ಬೇಡುವ ಅಲೆಮಾರಿ ಬುಡಕಟ್ಟು (ಮಹಾರಾಷ್ಟ್ರದಲ್ಲಿ ಒಬಿಸಿ ಎಂದು ಪಟ್ಟಿ ಮಾಡಲಾಗಿದೆ) ಮಸಣಜೋಗಿ ಸಮುದಾಯದ ಕುಟುಂಬಗಳಿಗೆ ನೆಲೆಯಾಗಿದೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಕೆಲಸ ಮತ್ತು ಕೂಲಿಗಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ರಾಜ್ಯದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವಲಸೆಹೋಗುತ್ತಾರೆ.













