ಸುಮಾರು 34 ವರ್ಷದ ಜುನಾಲಿ ಅಪಾಂಗ್ ತಯಾರಿಸುವುದರಲ್ಲಿ ನಿಪುಣರು. "ಕೆಲವೊಮ್ಮೆ ನಾನು ಒಂದು ದಿನದಲ್ಲಿ 30 ಲೀಟರುಗಳಿಗಿಂತ ಹೆಚ್ಚು ಅಪಾಂಗ್ ತಯಾರಿಸುತ್ತೇನೆ" ಎಂದು ಅವರು ಹೇಳುತ್ತಾರೆ. ಈ ಪ್ರದೇಶದ ಇತರ ತಯಾರಕರು ವಾರದಲ್ಲಿ ಕೆಲವೇ ಕೆಲವು ಲೀಟರುಗಳನ್ನಷ್ಟೇ ತಯಾರಿಸಬಲ್ಲರು. ಯಾವುದೇ ಯಂತ್ರದ ಸಹಾಯವಿಲ್ಲದೆ ಈ ಬಿಯರ್ ತಯಾರಾಗುತ್ತದೆ.
ಜುನಾಲಿ ಕಿ ಭಟ್ಟಿ ಎಂಬುದು ಅಸ್ಸಾಂನ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಮಜುಲಿ ದ್ವೀಪದ ಗಢಮೂರ್ ಪಟ್ಟಣದ ಸಮೀಪದಲ್ಲಿರುವ ಅವರ ಮೂರು ಕೋಣೆಗಳ ಮನೆ ಮತ್ತು ಹಿತ್ತಲು. ಈ ಮನೆಯು ಒಂದು ಸಣ್ಣ ಕೊಳದ ಪಕ್ಕದಲ್ಲಿದೆ, ಇದು ಬೃಹತ್ ನದಿಯಾದ ಬ್ರಹ್ಮಪುತ್ರದ ಪ್ರವಾಹದಿಂದ ಉಂಟಾದ ಕೊಳ.
ಅಂದು ಬೆಳಗಿನ 6 ಗಂಟೆಗೆ ನಾವು ಭೇಟಿಗೆಂದು ಹೋದಾಗ ಅವರಾಗಲೇ ಎದ್ದು ತಮ್ಮ ಕೆಲಸ ಆರಂಭಿಸಿದ್ದರು. ಭಾರತದ ಪೂರ್ವ ಭಾಗದಲ್ಲಿ ಆಗಲೇ ಮೇಲಕ್ಕೇರಿದ್ದ. ಜುನಾಲಿ ಬಿಯರ್ ತಯಾರಿಯ ಪ್ರಕ್ರಿಯೆಯ ಭಾಗವಾಗಿ ತಮ್ಮ ಹಿತ್ತಲಿನಲ್ಲಿದ್ದ ಒಲೆಗೆ ಬೆಂಕಿ ಹಚ್ಚುತ್ತಿದ್ದರು. ಅವರ ಕೆಲಸಕ್ಕೆ ಸಂಬಂಧಿಸಿದ ಸಲಕರಣೆಗಳು ಮನೆಯೊಳಗಿದ್ದವು.
ಅಪಾಂಗ್ ಹೆಸರಿನ ಈ ಕಚ್ಚಾ ವಸ್ತುಗಳನ್ನು ಹುದುಗಿಸಿ ತಯಾರಿಸಲಾಗುವ ಪಾನೀಯವನ್ನು ಅಸ್ಸಾಂನ ಮಿಸಿಂಗ್ ಬುಡಕಟ್ಟು ಜನಾಂಗದವರು ತಯಾರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ಊಟದೊಂದಿಗೆ ಸೇವಿಸಲಾಗುತ್ತದೆ ಮತ್ತು ಮಿಸಿಂಗ್ ಸಮುದಾಯದ ಭರತ್ ಚಂಡಿ ಹೇಳುವಂತೆ, "ನಾವು ಮಿಸಿಂಗ್ ಜನರು ಅಪಾಂಗ್ ಇಲ್ಲದ ಹಬ್ಬ ಅಥವಾ ಇತ್ಯಾದಿ ಆಚರಣೆಗಳನ್ನು ಕಲ್ಪಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ." ಚಂಡಿ ಗರ್ಮೂರ್ ಮಾರುಕಟ್ಟೆಯಲ್ಲಿರುವ ಮನೆ-ಶೈಲಿಯ ಆಹಾರವನ್ನು ಒದಗಿಸುವ ಧಾಬಾ 'ಮಜುಲಿ ಕಿಚನ್'ನ ಮಾಲೀಕರು.
ಅಕ್ಕಿ ಮತ್ತು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಈ ತಿಳಿ ಕೆನೆ ಬಣ್ಣದ ಬಿಯರನ್ನು ಜುನಾಲಿ ಅವರಂತಹ ಮಿಸಿಂಗ್ ಮಹಿಳೆಯರು ವಿಶೇಷವಾಗಿ ತಯಾರಿಸುತ್ತಾರೆ. ಸಿದ್ಧಪಡಿಸಿದ ನಂತರ, ಅದನ್ನು ಗಢಮೂರ್ನ ಅಂಗಡಿಗಳು ಮತ್ತು ಹೋಟೆಲ್ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜುನಾಲಿ ನಗುತ್ತಾ, “ಗಂಡಸರಿಗೆ ಇದನ್ನು ತಯಾರಿಸುವುದರಲ್ಲಿ ಆಸಕ್ತಿಯಿಲ್ಲ. ಅವರ ದೃಷ್ಟಿಯಲ್ಲಿ ಇದೊಂದು ಕಷ್ಟದ ಕೆಲಸ. ಗಿಡಮೂಲಿಕೆಗಳು ಮತ್ತು ಎಲೆಗಳನ್ನು ಸಂಗ್ರಹಿಸುವುದರಲ್ಲೇ ಅವರು ದಣಿದು ಬಿಡುತ್ತಾರೆ" ಎನ್ನುತ್ತಾರೆ.






















