ಗೊಂಡಿಯಾದ ಮಹಿಳಾ ಕಾರ್ಮಿಕರ ಕುರಿತಾದ ಈ ವರದಿಯನ್ನು ಮೊದಲಿಗೆ ಜನವರಿ 27, 2007ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು, ಆದರೆ ಅದರ ನಂತರವೂ ಅವರ ಸ್ಥಿತಿಯು ಹೆಚ್ಚು ಸುಧಾರಿಸಿಲ್ಲ. ಮೇ 1, ಅಂತರಾಷ್ಟ್ರೀಯ ಕಾರ್ಮಿಕರ ದಿನದಂದು, ನಾವು ಮಹಿಳೆಯರ ಗೌರವಾರ್ಥವಾಗಿ ಇದನ್ನು ಮರುಪ್ರಕಟಿಸುತ್ತಿದ್ದೇವೆ
ರೇವಂತಬಾಯಿ ಕಾಂಬಳೆ ತನ್ನ ಆರು ವರ್ಷದ ಮಗನ ಜೊತೆ ಹಲವು ತಿಂಗಳಿಂದ ಮಾತನಾಡಿಲ್ಲ. ಆದರೆ, ಅವರಿಬ್ಬರೂ ತಿರೋರಾದಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧಿಬಾಯಿ ನಾಗಪುರೆಯ ಕತೆಯೂ ಹೀಗೆಯೇ ಇದೆಯಾದರೂ ಅವರು ಎಚ್ಚರವಾಗಿದ್ದರೆ ಹಿರಿಯ ಮಗನನ್ನು ಭೇಟಿ ಮಾಡಬಹುದು. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಈ ಭಾಗದ ನೂರಾರು ಇಂತಹ ಮಹಿಳೆಯರಲ್ಲಿ ಈ ಇಬ್ಬರು ಮಹಿಳೆಯರು ಕೂಡಾ ಸೇರಿದ್ದಾರೆ, ಅವರು ದಿನಕ್ಕೆ ಕೇವಲ ನಾಲ್ಕು ಗಂಟೆಗಳನ್ನು ಮನೆಯಲ್ಲಿ ಕಳೆಯುತ್ತಾರೆ ಮತ್ತು ದಿನಕ್ಕೆ ಕೇವಲ 30 ರೂ ಗಳಿಸುವ ಸಲುವಾಗಿ ಪ್ರತಿ ವಾರ 1,000 ಕಿಲೋಮೀಟರ್ಗಳಿಗಿಂತ ಹೆಚ್ಚು ಕಾಲವನ್ನು ಪ್ರಯಾಣದಲ್ಲಿ ಕಳೆಯುತ್ತಾರೆ.
ನಾವು ಈ ಮಹಿಳೆಯರೊಂದಿಗೆ ಅವರ ಮನೆಯಿಂದ ರೈಲು ನಿಲ್ದಾಣದ ಕಡೆಗೆ ಹೋಗುವಾಗ ಬೆಳಗಿನ 6 ಗಂಟೆ. ಅವರಲ್ಲಿ ಹೆಚ್ಚಿನವರು ಈಗಾಗಲೇ ಎರಡು ಗಂಟೆಗಳ ಮೊದಲು ಎದ್ದು ತಯಾರಾಗಿ ಇಲ್ಲಿಗೆ ಬಂದಿದ್ದಾರೆ. "ನಾನು ಅಡುಗೆ, ಬಟ್ಟೆ ಒಗೆಯುವುದು, ಪೊರಕೆ ಮತ್ತು ಶುಚಿಗೊಳಿಸುವಿಕೆಯನ್ನು ಮುಗಿಸಿದ್ದೇನೆ" ಎಂದು ಬುಧಿಬಾಯಿ ಸಂತೋಷದಿಂದ ಹೇಳುತ್ತಾರೆ. "ಹಾಗಾಗಿ ಈಗ ನಾವು ಮಾತನಾಡಬಹುದು." ನಾವು ಅಲ್ಲಿಗೆ ತಲುಪಿದಾಗ, ಅವರ ಮನೆಯ ಇತರ ಸದಸ್ಯರು ಎದ್ದಿರಲಿಲ್ಲ. "ಪಾಪ, ದಣಿದಿದ್ದಾರೆ," ಅವರು ಹೇಳುತ್ತಾರೆ. ಹಾಗಿದ್ದರೆ ಬುಧಿಬಾಯಿ ದಣಿದಿಲ್ಲವೇ? "ಹೌದು ದಣಿದಿದ್ದೇನೆ, ಆದರೆ ಏನು ಮಾಡುವುದು? ನಮಗೆ ಬೇರೆ ಆಯ್ಕೆ ಇಲ್ಲ.”
ನಿಲ್ದಾಣದಲ್ಲಿ ಇನ್ನೂ ಅನೇಕ ಮಹಿಳೆಯರು ಇದ್ದರು, ಅವರಿಗೂ ಬೇರೆ ದಾರಿಯಿಲ್ಲ. ಅವರು ಒಂದು ವಿಷಯದಲ್ಲಿ ಅಸಾಮಾನ್ಯರು: ಅವರು ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರಲ್ಲ. ಅವರು ನಗರ ಪ್ರದೇಶಗಳ ಸ್ವತಂತ್ರ ಕಾರ್ಮಿಕರು, ಅವರು ಹಳ್ಳಿಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ. ಈ ಆವಿಷ್ಕಾರವು ಅವರ ಜೀವನದಲ್ಲಿ ಬಹುತೇಕ ಪ್ರತಿದಿನ ಅವರನ್ನು ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ತಹಸಿಲ್ ಪ್ರಧಾನ ಕಛೇರಿಯಾಗಿರುವ ಮುಫಾಸಿಲ್ ಪಟ್ಟಣದಿಂದ ತಿರೋರಾದಂತಹ ಹಳ್ಳಿಗಳಿಗೆ ಕರೆದೊಯ್ಯುತ್ತದೆ. ಏತನ್ಮಧ್ಯೆ, ಅವರು ದಿನಕ್ಕೆ 20 ಗಂಟೆಗಳ ಕಾಲದ ಸಮಯವನ್ನು ತಮ್ಮ ಮನೆಯಿಂದ ಹೊರಗೆ ಕಳೆಯುತ್ತಾರೆ. ಇವರಿಗೆ ವಾರದ ರಜೆ ಇಲ್ಲ, ತಿರೋರದಲ್ಲಿ ಕೆಲಸವೂ ಸಿಗುವುದಿಲ್ಲ. "ಬೀಡಿ ಉದ್ಯಮವು ಇಲ್ಲವಾದರೆ, ಅವರಿಗೆ ಇಲ್ಲಿ ಕೆಲಸ ಸಿಗುವುದು ಅಸಾಧ್ಯ" ಎಂದು ಗೊಂಡಿಯಾದ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹೇಂದ್ರ ವಾಲ್ಡೆ ಹೇಳುತ್ತಾರೆ.








