ರಾತ್ರಿ ಬೆಳಗಾಗುವುದರಲ್ಲಿ ತಾಯಿಬಾಯಿ ಘುಳೆ ಕಳೆದುಕೊಂಡಿದ್ದು ಒಂದು ಲಕ್ಷ ರೂಪಾಯಿಗಳ ಆದಾಯ.
ಅಂದು 42 ವರ್ಷದ ತಾಯಿಬಾಯಿ ಮತ್ತು ಆಕೆಯ ಕುರಿಗಳು ತಮ್ಮ ಗ್ರಾಮದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಭಲ್ವಾನಿಯ ಶಿವಾರ್ ಎನ್ನುವ ಊರಿನಲ್ಲಿದ್ದರು. ಆ ದಿನ ಅಲ್ಲಿ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು. “ಸಂಜೆ ಐದರ ನಂತರ ಶುರುವಾದ ಮಳೆ ಹನ್ನೆರಡರ ನಂತರ ಜೋರಾಗಿ ಸುರಿಯತೊಡಗಿತು” ಎನ್ನುತ್ತಾರೆ ಧಂಗರ್ ಸಮುದಾಯದವರಾದ ತಾಯಿಬಾಯಿ. ಆಗಷ್ಟೇ ಹೊಲ ಉಳುಮೆ ಮಾಡಿದ್ದ ಕಾರಣ ಗದ್ದೆ ಕೆಸರುಮಯವಾಯಿತು. ಕುರಿಗಳ ಕಾಲುಗಳು ಕೆಸರಿನಲ್ಲಿ ಹೂತಿದ್ದವು. ಸುಮಾರು 200ರಷ್ಟಿದ್ದ ಅವರ ಕುರಿಗಳು ಗದ್ದೆಯಿಂದ ಹೊರಬರಲಾರದೆ ಒದ್ದಾಡತೊಡಗಿದವು.
“ಅವತ್ತು ಇಡೀ ರಾತ್ತಿ ಗದ್ದೆಯ ಕೆಸರಿನಲ್ಲೇ ನಮ್ಮ ಜಾನುವಾರುಗಳೊಡನೆ ಕುಳಿತಿದ್ದೆವು. ಸುರಿವ ಮಳೆ ನಮ್ಮನ್ನು ಒದ್ದೆಮುದ್ದಯಾಗಿಸಿತ್ತು.” ಎನ್ನುತ್ತಾರೆ ತಾಯಿಬಾಯಿ. ಅವರು 2021ರ ಡಿಸೆಂಬರ್ ತಿಂಗಳಿನಲ್ಲಿ ಅಹಮದ್ ನಗರದಲ್ಲಿ ಸುರಿದ ಭಾರೀ ಮಳೆಯನ್ನು ಅವರು ನೆನಪಿಸಿಕೊಳ್ಳುತ್ತಿದ್ದರು.
“ಹಿಂದೆಯೂ ಇಂತಹ ಭಯಾನಕ ಮಳೆ ನೋಡಿದ್ದೆವು. ಆದರೆ ಆಗೆಲ್ಲ ಇಷ್ಟು ನಷ್ಟಕ್ಕೆ ಒಳಗಾಗಿರಲಿಲ್ಲ” ಎನ್ನುತ್ತಾರೆ ತಾಯಿಬಾಯಿ. ಧವಳಪುರಿ ಎನ್ನುವ ಗ್ರಾಮದ ಪಶುಪಾಲಕರಾದ ಇವರು ಎಂಟು ಕುರಿ ಮತ್ತು ಒಂದು ಹೆಣ್ಣು ಆಡನ್ನು ಕಳೆದುಕೊಂಡಿದ್ದಾರೆ. “ನಾವು ಅವುಗಳ ಜೀವ ಉಳಿಸುವುದನ್ನು ಬಯಸಿದ್ದೆವು.”
ಡಿಸೆಂಬರ್ 2, 2021ರಂದು ಸತಾರಾದಲ್ಲಿ 100 ಮಿ.ಮೀ ಮಳೆಯಾಗಿದ್ದು, ಆ ಜಿಲ್ಲೆಯ ಹೆಚ್ಚಿನ ತಾಲ್ಲೂಕುಗಳಲ್ಲಿ ಸುಮಾರು 100 ಮಿ.ಮೀ ಮಳೆಯಾಗಿದೆ.









