“ನಾವು ಹೆಚ್ಚೆಚ್ಚು ಕೊಂಡಷ್ಟು, ಹೆಚ್ಚು ಹೆಚ್ಚು ಸಾಲದಲ್ಲಿ ಮುಳುಗುತ್ತೇವೆ” ನಮ್ಮೊಂದಿಗೆ ಮಾತನಾಡುತ್ತಿದ್ದವರು ತಮ್ಮದೇ ಸವೋರಾ ಆದಿವಾಸಿ ಸಮುದಾಯದ ಜನರು ಹೆಚ್ಚಿರುವ ಹಳ್ಳಿ ಖೈರಾದಲ್ಲಿನ 40ರ ಪ್ರಾಯದ ರೈತ ಮಹಿಳೆ ಕುನಾರಿ ಶಬರಿ.
“ತೆ ಗೋಬರಖಾತಾಚಾಸಾ ಹಲಾಚಾಸಾ (ದನದ ಗೊಬ್ಬರ ಮತ್ತು ನೇಗಿಲಿನಲ್ಲಿ ಉಳುವ ಬೇಸಾಯ) ನಮ್ಮದಾಗಿತ್ತು, ಈಗ ಯಾರೂ ಅದನ್ನು ಮಾಡುತ್ತಿಲ್ಲ.” ಎಂದರು. “ಈಗ ನಾವು ಎಲ್ಲದಕ್ಕೂ ಅಂಗಡಿಗೆ ಓಡುತ್ತೇವೆ. ಬೀಜ, ಕೀಟನಾಶಕ, ಗೊಬ್ಬರ. ಈಗ ಮೊದಲಿನ ಹಾಗಲ್ಲ, ನಾವು ತಿನ್ನುವುದನ್ನೂ ಕೊಂಡು ತಿನ್ನಬೇಕಾಗಿದೆ”
ಒರಿಸ್ಸಾದ ರಾಯಗಡ ಜಿಲ್ಲೆಯ ಪರಿಸರ ಸೂಕ್ಷ್ಮ ಘಟ್ಟ ಪ್ರದೇಶದಾದ್ಯಂತ ಹಬ್ಬುತ್ತಿರುವ, ಶ್ರೀಮಂತ ಜೀವವೈವಿಧ್ಯಕ್ಕೆ, ರೈತರ ಸಂಕಷ್ಟ ಮತ್ತು ಆಹಾರ ಭದ್ರತೆಗೆ (“ಒಡಿಶಾದಲ್ಲಿ ಹವಾಗುಣ ಬಿಕ್ಕಟ್ಟಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ”ಯನ್ನು ಓದಿ) ಹಾನಿ ಮಾಡುತ್ತಿರುವ ಈ ಹತ್ತಿ ಬೇಸಾಯವು ಜನರಿಗೆ ತಂದೊಡ್ಡಿದ ಈ ಪರಾವಲಂಬಿ ಜೀವನದ ಬಗ್ಗೆ ಕುನಾರಿಯವರು ಹೇಳುತ್ತಿದ್ದರು. ಹತ್ತಿಯನ್ನು ಮೊದಲು ಬೆಳೆದ ರಾಯಗಡದ ಗುಣುಪುರ ಬ್ಲಾಕಿನ ಆಗ್ನೇಯ ದಿಕ್ಕಿನ ಕಡೆಗೆ ಇಳಿದಂತೆ ಇದು ಸ್ಪಷ್ಟವಾಗಿ ಕಾಣುತ್ತದೆ. ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಈ ಭೂಮಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೆ ಒಂದೇ ಬೆಳೆ ಬರೀ ಹತ್ತಿಯೇ ಕಾಣುತ್ತದೆ. ಜೊತೆಗೆ ಸಂಕಷ್ಟವೂ ಕಾಣುತ್ತಿದೆ.
“12 ವರ್ಷಗಳ ಕೆಳಗೆ ಹತ್ತಿಯನ್ನು ಬೆಳೆಯಲು ಆರಂಭಿಸಿದೆವು. ಆದರೆ ಇವತ್ತು ಬೇರೆ ದಾರಿ ಇಲ್ಲದೆ ಅದನ್ನು ಬೆಳೆಯುತ್ತಿದ್ದೇವೆ” ಗುಣುಪುರ ಬ್ಲಾಕಿನಲ್ಲಿರುವ ಖೈರಾದಲ್ಲಿನ ಬಹುತೇಕ ಮಂದಿ ನಮಗೆ ಇದನ್ನೇ ಹೇಳಿದರು. ಈ ಭಾಗದ ಇನ್ನು ಕೆಲವರು ಹೇಳಿದ್ದೇನೆಂದರೆ, ಅವರು ಅತ್ತ ಹೆಚ್ಚು ಬಂಡವಾಳದ ಹತ್ತಿಯ ಕಡೆಗೆ ಸಾಗಿದಂತೆ, ಇತ್ತ ತಮ್ಮ ಸ್ವಂತ ಬೀಜಗಳನ್ನು ಮತ್ತು ದೇಶೀಯ ಬಹುಬೆಳೆ ಬೇಸಾಯ ವಿಧಾನಗಳನ್ನು ಕಳೆದುಕೊಳ್ಳುತ್ತಾ ಹೋದರು.
“ನಮಗೆ ಬೆಳೆಯಲು ನಮ್ಮದೇ ಬೆಳೆಗಳಿದ್ದವು ಮತ್ತು ನಮ್ಮದೇ ಆದ ಬೇಸಾಯ ಕ್ರಮವಿತ್ತು” ಸವೋರಾ ಸಮುದಾಯದ ಯುವ ರೈತ ಖೇತ್ರ ಶಬರ ನಿಟ್ಟುಸಿರುಬಿಟ್ಟರು. “ಆಂಧ್ರವಾಲಾಗಳು ಬಂದು, ಹತ್ತಿ ಬೆಳೆಯುವುದನ್ನು ಹೇಳಿಕೊಟ್ಟರು” ಹಣ ಮಾಡುವ ಆಸೆಯು ಹಳ್ಳಿಗರನ್ನು ಕಪ್ಪ ಅಥವಾ ಹತ್ತಿಯ ಕಡೆಗೆ ಸೆಳೆಯಿತು” ಎಂದು ಮುಂದುವರೆಸಿದರು ಇಲ್ಲಿಯ ಇನ್ನೋರ್ವ ರೈತ ಸಂತೋಷ ಕುಮಾರ ದಂಡಸೇನಾ. “ಮೊದಮೊದಲು ಖುಷಿಯೆನಿಸಿತು, ಹಣ ಮಾಡಿದೆವು. ಆದರೆ ಈಗ ಬರಿಯ ಸಂಕಟ ಮತ್ತು ನಷ್ಟ ಅಷ್ಟೆ.” ಎಂದರು. “ನಾವು ಹಾಳಾದೆವು, ಸಾಹುಕಾರರು (ಲೇವಾದೇವಿಯವರು) ಉದ್ದಾರವಾದರು.”
ನಾವು ಹಳ್ಳಿಯವರೊಡನೆ ಮಾತನಾಡುತ್ತಿರುವಾಗಲೆ ಕಡು ಹಸಿರು ಬಣ್ಣದ ಜಾನ್ ಡೀರೆ ಟ್ರಾಕ್ಟರುಗಳು ಹಳ್ಳಿರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದವು. ಬಿಟಿ ಹತ್ತಿಯ ಜಾಹೀರಾತುಳ್ಳ ಬೀಜ ಕಂಪನಿಯ ಒಡಿಯಾ ಭಾಷೆಯ ಪೋಸ್ಟರುಗಳನ್ನು ಅಲ್ಲಿನ ದೇವಾಲಯದ ಆವರಣದ ಹೊರಗೋಡೆಗಳ ಮೇಲೆ ಅಂಟಿಸಿದ್ದರು. ಹಳ್ಳಿಯ ಚೌಕಿಯ ಸುತ್ತ ಹೊಲದಲ್ಲಿ ಉಳುವ, ಬಿತ್ತುವ ಸಲಕರಣೆಗಳು ಬಿದ್ದುಕೊಂಡಿದ್ದವು.








