ಒಂದು ದಿನ ಬಾಲಾಜಿ ಹಟ್ಟಗಲೆ ಕಬ್ಬನ್ನು ಕತ್ತರಿಸುತ್ತಿದ್ದರು. ಮರುದಿನ ಅವರು ಕಾಣಲೇ ಇಲ್ಲ. ಆ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂಬುದು ಅವರ ಹೆತ್ತವರ ಆಶಯ. “ಅಸ್ಥಿರತೆ ನಮ್ಮನ್ನು ಸಾಯಿಸುತ್ತಿದೆ,” ಎನ್ನುತ್ತಾರೆ ಅವರ ತಂದೆ ಬಾಬಾಸಾಹೇಬ್ ಹಟ್ಟಗಲೆ. ಜುಲೈ ತಿಂಗಳ ಮೋಡಕವಿದ ಅಪರಾಹ್ನ. ಇಟ್ಟಿಗೆಯಿಂದ ಮಾಡಿದ ಒಂಟಿ ಕೊಠಡಿಯ ಮನೆಯ ಮೇಲೆ ಕಪ್ಪನೆ ಮೋಡ ಆವರಿಸಿತ್ತು, ಬಾಬಾಸಾಹೇಬ ಅವರ ಧ್ವನಿಯಲ್ಲಿ ಹತಾಶ ಭಾವನೆ ಪ್ರತಿಫಲಿಸುವಂತೆ ಮಾಡಿತ್ತು, ಅವರು ಹೇಳಿದ್ದು: “ಆತ ಬದುಕಿದಾನೋ ಇಲ್ಲ ಸತ್ತಿದ್ದಾನೋ ಎಂಬುದನ್ನು ತಿಳಿಯಬೇಕಷ್ಟೆ,”
ಅದು 2020ರ ನವೆಂಬರ್ ತಿಂಗಳು, ಬಾಬಾಸಾಹೇಬ್ ಮತ್ತು ಅವರ ಪತ್ನಿ ಸಂಗೀತ 22 ವರ್ಷದ ತಮ್ಮ ಮಗನನ್ನು ಕಂಡಿದ್ದು ಅದೇ ಕೊನೆ. ಬಾಲಾಜಿ ಕರ್ನಾಟಕದ ಬೆಳಗಾವಿ (ಬೆಳಗಾಂ) ಜಿಲ್ಲೆಯಲ್ಲಿರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಕಾದಿವಾಡ್ಗಾವ್ನಿಂದ ಹೊರಟಿದ್ದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ಪಶ್ಚಿಮ ಭಾಗದಲ್ಲಿ ಕಬ್ಬು ಕತ್ತರಿಸಲು ಮರಾಠವಾಡ ವಲಯದಿಂದ ವರ್ಷದ ಆರು ತಿಂಗಳ ಅವಧಿಗೆ ನುರಿತ ಲಕ್ಷಾಂತರ ಕಾರ್ಮಿಕರು ವಲಸೆ ಹೋಗುತ್ತಿದ್ದು ಅದರಲ್ಲಿ ಅವರೂ ಒಬ್ಬರು, ಪ್ರತಿ ವರ್ಷ ದೀಪಾವಳಿ ಹಬ್ಬ ಮುಗಿದ ನಂತರ ಕೆಲಸಗಾರರು ಗ್ರಾಮವನ್ನು ತೊರೆಯುತ್ತಿದ್ದರು ಮತ್ತು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಹಿಂದಿರುಗುತ್ತಿದ್ದರು. ಆದರೆ ಬಾಲಾಜಿ ಈ ವರ್ಷ ಹಿಂದಿರುಗಲೇ ಇಲ್ಲ.
ಬಾಲಾಜಿಯ ಹೆತ್ತವರು ಕಳೆದ ಎರಡು ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದು, ಆದರೆ ಬಾಲಾಜಿ ಮಾತ್ರ ಇದೇ ಮೊದಲ ಬಾರಿಗೆ ಕೆಲಸಕ್ಕಾಗಿ ಮನೆಯನ್ನು ತೊರೆದಿರುವುದು.” ನನ್ನ ಪತ್ನಿ ಮತ್ತು ನಾನು ಕಳೆದ 20 ವರ್ಷಗಳಿಂದ ವಲಸೆ ಹೋಗುತ್ತಿದ್ದೇವೆ. [ಇಬ್ಬರೂ ಸೇರಿ] ಒಂದು ಋತುವಿನಲ್ಲಿ 60,000-70,000ರೂ ಗಳಿಸುತ್ತಿದ್ದೆವು,” ಎನ್ನುತ್ತಾರೆ ಬಾಬಾಸಾಹೇಬ್.
ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತೋಟ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸ ಸಿಗುವುದು ಕುಟುಂಬಕ್ಕೆ ಕಷ್ಟವಾಗಿದೆ. “2020ರ ಮಾರ್ಚ್ ನಿಂದ ನವೆಂಬರ್ ವರೆಗೆ ನಮಗೆ ಯಾವುದೇ ಹಣ ಗಳಿಸುವುದು ಕಷ್ಟವಾಗಿತ್ತು,” ಎನ್ನುತ್ತಾರೆ ಬಾಬಾಸಾಹೇಬ್. ಕೋವಿಡ್19 ಕಾಣಿಸಿಕೊಳ್ಳುವುದಕ್ಕೆ ಮುನ್ನ ಬಾಬಾಸಾಹೇಬ್ ಬೀಡ್ನ ವಾದ್ವಾನಿ ಗ್ರಾಮಕ್ಕೆ ಹಿಂದಿರುಗಿದಾಗ ವಾರದಲ್ಲಿ 2-3 ದಿನ ಕೆಲಸ ಮಾಡಿ ದಿನಕ್ಕೆ 300 ರೂ. ಗಳಿಸುತ್ತಿದ್ದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮತ್ತೆ ವಲಸೆ ಹೋಗುವ ಸಮಯ ಬಂದಾಗ ಬಾಬಾಸಾಹೇಬ್ ಮತ್ತು ಸಂಗೀತಾ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನಿಸಿದರು, ಏಕೆಂದರೆ ಬಾಬಾಸಾಹೇಬ್ ಅವರ ದೊಡ್ಡಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಪೂರ್ಣ ಅವಧಿಯ ಆರೈಕೆ ಬೇಕಾಗಿತ್ತು. ”ಆದರೆ ನಮ್ಮ,”ಬದುಕು ಸಾಗಬೇಕಾದರೆ ನಾವು ಏನಾದರೂ ಮಾಡಬೇಕಾಗಿತ್ತು,” ಎಂದು ಹೇಳಿದ ಬಾಬಾ ಸಾಹೇಬ್, “ಆದ್ದರಿಂದ ನಮ್ಮ ಬದಲಿಗೆ ಮಗನ್ನು ಕಳುಹಿಸಿದೆವು,” ಎಂದರು,









