ಝಾರಿಯದಲ್ಲಿನ ನಮ್ಮ ಮನೆಯಲ್ಲಿ 4-5 ತಿಂಗಳು ಕರೆಂಟ್ ಇದ್ದಿರಲಿಲ್ಲ. ನಾನು, ನನ್ನ ಅಕ್ಕ ಮತ್ತು ತಮ್ಮ ಒಂದಷ್ಟು ಹೊತ್ತು ಟಾರ್ಚ್ ಬೆಳಕಿನಲ್ಲಿ ಓದುತ್ತಿದ್ದೆವು. ಆದರೆ ಅದು ಹೆಚ್ಚೆಂದರೆ 30 – 45 ನಿಮಿಷಗಳ ಕಾಲ ಮಾತ್ರ ಉರಿಯುತ್ತಿತ್ತು. ನಂತರ ಅದಕ್ಕೆ ಚಾರ್ಜ್ ಮಾಡಬೇಕಿತ್ತು.”
ಸೋಮವಾರಿ ಬಾಸ್ಕೆ 13 ವರ್ಷದ ಸಂತಾಲ್ ಆದಿವಾಸಿ ಬಾಲಕಿಯಾಗಿದ್ದು, ಭಾಟಿನ್ ಮಿಡಲ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೇಗಾದರೂ ಮಾಡಿ ಅವಳು ತನ್ನ ಓದನ್ನು ಮುಂದುವರೆಸುವ ಕನಸು ಕಾಣುತ್ತಿದ್ದಾಳೆ: "ನಾನು ಓದಲು ಬಯಸುತ್ತೇನೆ. ಅದೊಂದೇ ನನಗಿರುವ ಕನಸು."
ಝರಿಯಾ ಗ್ರಾಮವು ಜಾದುಗೋಡಾ ವಿಭಾಗಲ್ಲಿದ್ದು 1,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿನ ಸಾಕ್ಷರತಾ ಪ್ರಮಾಣವು ಶೇಕಡಾ 59ರಷ್ಟಿದೆ, ಇದು ಜಾರ್ಖಂಡ್ ರಾಜ್ಯದ ಸಾಕ್ಷರತಾ ಪ್ರಮಾಣಕ್ಕಿಂತ (66.41 ಶೇಕಡಾ) ಕಡಿಮೆಯಾಗಿದೆ. ಪೂರ್ವ ಸಿಂಗ್ಭೂಮ್ನಲ್ಲಿರುವ ಈ ಹಳ್ಳಿಯಲ್ಲಿ ಕೇವಲ ಪ್ರಾಥಮಿಕ ಶಾಲೆಯಷ್ಟೇ ಇದೆ, ಹೀಗಾಗಿ ಸೋಮವಾರಿ ತನ್ನ ಮನೆಯಿಂದ ನಾಲ್ಕು ಕಿಲೋಮೀಟರ್ ದೂರ ಹೋಗಬೇಕಾಗುತ್ತದೆ.
ಈ ವರದಿಗಾರ ಹತ್ತಿರದ ಖಾಡಿಯಾ ಕೊಚಾ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದಾಗ,ಸೋಮವಾರಿ ಸಬರ್ ಭಾಷೆಯಿಂದ ಹಿಂದಿಗೆ ಅನುವಾದ ಸಹಾಯ ಮಾಡಿದಳು ಮತ್ತು ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಎನ್ನುವ ಈ ಪ್ರದೇಶದ ಸಬರ್ ಆದಿವಾಸಿಗಳೊಂದಿಗೆ ಮಾತನಾಡಲು ವರದಿಗಾರನಿಗೆ ಸಹಾಯ ಮಾಡಿದಳು. ಸಂತಾಲಿ ಭಾಷೆಯಲ್ಲದೆ ಸಬರ್, ಹೋ, ಹಿಂದಿ ಮತ್ತು ಬಂಗಾಳಿ ಭಾಷೆಗಳನ್ನು ಸಹ ಸೋಮವಾರಿ ಮಾತನಾಡುತ್ತಾಳೆ.







