ಬಿಹಾರದ ದರ್ಭಂಗಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ, ಅಲ್ಲಿನ ಆರೋಗ್ಯ ಕಾರ್ಯಕರ್ತರು ಕಚೇರಿಯಲ್ಲಿ, ವಾರ್ಡ್ನ ಹಾಸಿಗೆಯ ಮೇಲೆ ಮತ್ತು ಕೆಲವೊಮ್ಮೆ ನೆಲದ ಮೇಲೂ ಮಲಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ.
ಅಂದು ಸೋಮವಾರ ಬೆಳಿಗ್ಗೆ ಸದರ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುತ್ತಿದ್ದಂತೆ ಸುನೀತಾ ದತ್ತ ತನ್ನ ಪತಿಯೊಂದಿಗೆ ಅಲ್ಲಿಗೆ ಬಂದರು. ಆದರೆ ಆಕ್ಸಿಲಿಯರಿ ನರ್ಸ್ ಮಿಡ್ವೈಫ್ (ಎಎನ್ಎಂ) ಸುನೀತಾರನ್ನು ಡೆಲಿವರಿ ವಾರ್ಡಿಗೆ ಕರೆದೊಯ್ಯುತ್ತಿದಂತೆಯೇ ಸುನಿತಾ, "ಇಸ್ಮೇ ಕೈಸಾ ಹೋಗಾ ಬಚ್ಚಾ, ಬಹುತ್ ಗಂದಗಿ ಹೇ ಇಧರ್ [ಇಲ್ಲಿ ಹೇಗೆ ಹೆರಿಗೆ ಮಾಡಿಸಿಕೊಳ್ಳುವುದು, ಈ ಸ್ಥಳ ಬಹಳ ಕೊಳಕಾಗಿದೆ]" ಎನ್ನುತ್ತಾ ಪತಿಯೊಡನೆ ಬಂದ ರಿಕ್ಷಾದಲ್ಲೇ ಮರಳಿದರು.
"ಇಂದು ಆಕೆಯ ಹೆರಿಗೆ ದಿನ - ಹೀಗಾಗಿ ನಾವು ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ" ಎಂದು ಪತಿ ಅಮರ್ ದತ್ತಾ ತನ್ನ ರಿಕ್ಷಾ ಹೊರಡುವಾಗ ಹೇಳಿದರು. ಈ ಹಿಂದೆ ಇದೇ ಪಿಎಚ್ಸಿಯಲ್ಲಿ ಸುನೀತಾ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಬಾರಿ, ತನ್ನ ನಾಲ್ಕನೇ ಮಗುವಿನ ಹೆರಿಗೆಗೆ, ಅವರು ಬೇರೆಡೆಗೆ ಹೋಗಲು ನಿರ್ಧರಿಸಿದ್ದಾರೆ.
ಬೆಳಗಿನ 11 ಗಂಟೆಯಾದರೂ ಸದರ್ನ ಪಿಎಚ್ಸಿಯ ಹೆರಿಗೆ ಕೋಣೆ ತನ್ನ ರಕ್ತದಿಂದ ಕೂಡಿದ ನೆಲವನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ವೀಪರ್ಗಾಗಿ ಕಾಯುತ್ತಿತ್ತು. ಅದು ಹಿಂದಿನ ದಿನದ ಹೆರಿಗೆಯಿಂದಾಗಿ ಕೊಳಕಾಗಿತ್ತು.
"ನನ್ನನ್ನು ಕರೆದುಕೊಂಡು ಹೋಗಲು ಬರಲಿರುವ ಗಂಡನಿಗಾಗಿ ಕಾಯ್ತಿದ್ದೇನೆ. ನೈಟ್ ಡ್ಯೂಟಿ ಇತ್ತು ಈಗ ಕೆಲಸ ಮುಗಿದು ಮನೆಗೆ ಹೊರಟಿದ್ದೇನೆ, ರಾತ್ರಿ ಯಾವುದೇ ರೋಗಿಗಳಿರಲಿಲ್ಲ ಆದ್ರೆ ಸೊಳ್ಳೆಗಳ ಕಾರಣಕ್ಕೆ ನಿದ್ರೆ ಬರಲಿಲ್ಲ" ಎಂದು 43 ವರ್ಷದ ಪುಷ್ಪಾ ದೇವಿ (43 ವರ್ಷ, ಹೆಸರು ಬದಲಿಸಲಾಗಿದೆ) ಹೇಳುತ್ತಾರೆ. ಪುಷ್ಪಾ ಬಿಹಾರದ ದರ್ಭಂಗಾ ಜಿಲ್ಲೆಯ ಸದರ್ ಟೌನ್ನ ಪಿಎಚ್ಸಿಯಲ್ಲಿ ಎಎನ್ಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಆಫೀಸಿನ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಕುರ್ಚಿಯ ಹಿಂದೆ ಒಂದು ಮೇಜಿತ್ತು ಅದರ ಮೇಲೆ ಅಲ್ಲಲ್ಲಿ ಕಾಗದಗಳು ಚದುರಿದಂತೆ ಬಿದ್ದಿದ್ದವು. ಜೊತೆಗೆ ಒಂದು ಮರದ ಮಂಚ ಕೂಡ ಇತ್ತು. ಪುಷ್ಪಾ ಸೊಳ್ಳೆಗಳೊಡನೆ ಬಡಿದಾಡುತ್ತಾ ರಾತ್ರಿ ಕಳೆದ ಮಂಚ ಅದೇ ಆಗಿತ್ತು.
ಒಂದು ಕಾಲದಲ್ಲಿ ಕೆನೆ ಬಣ್ಣವನ್ನು ಹೊಂದಿದ್ದ ಸೊಳ್ಳೆ ಪರದೆಯೊಂದು ಹಾಸಿಗೆಯ ಮೇಲೆ ತೂಗಾಡುತ್ತಿತ್ತಾದರೂ ಅದರಲ್ಲಿದ್ದ ತೂತುಗಳಿಂದ ಸೊಳ್ಳೆಯಂತಹ ಯಾವುದೇ ಕೀಟವೂ ಸುಲಭವಾಗಿ ಒಳಗೆ ಬರಬಹುದಿತ್ತು. ಮಂಚದಲ್ಲಿ ಹಾಸಿಗೆಯೊಡನೆ ದಿಂಬೊಂದನ್ನು ಮುಂದಿನ ರಾತ್ರಿ ಪಾಳಿಯ ಎಎನ್ಎಂ ಬಳಕೆಗೆಂದು ಮಡಚಿ ಇಡಲಾಗಿತ್ತು.







