ಆಕೆಗೆ ಈಗಿನ್ನೂ 22 ವರ್ಷ. ಆದರೆ ಈಗಲೇ ದೇಹ ಮೂರ್ನಾಲ್ಕು ವರ್ಷಗಳ ಅನಾರೋಗ್ಯದಿಂದಾಗಿ ಜರ್ಜರಿತಗೊಂಡಿದೆ. 2021ರ ಬೇಸಗೆಯ ಬೆಳಗಿನ ಹೊತ್ತು ನೀರಿಗೆಂದು ಹೋಗಿದ್ದ ಮೀನು ಸರ್ದಾರ್ಗೆ ಮುಂದೆ ಬರಬಹುದಾದ ಅಪಾಯದ ಅರಿವೇ ಇದ್ದಿರಲಿಲ್ಲ. ಅಂದು ಅವರ ಊರಾದ ದಯಾಪುರದ ಕೆರೆಯ ಮುರಿದ ಮೆಟ್ಟಿಲಿನ ದಾರಿಯಲ್ಲಿ ನಡೆಯುವಾಗ ಆಕೆ ಮುಖ ಅಡಿಯಾಗಿ ಜಾರಿ ಬಿದ್ದಿದ್ದರು.
“ನನ್ನ ಎದೆ ಮತ್ತು ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು,” ಎಂದು ಆಕೆ ಬೆಂಗಾಲಿಯಲ್ಲಿ ನೆನಪಿಸಿಕೊಂಡರು. “ಯೋನಿಯಿಂದ ರಕ್ತ ಸೋರತೊಡಗಿತು. ಬಾತ್ರೂಮ್ ಹೋದಾಗ ಒಳಗಿನಿಂದ ಏನೊ ನೆಲದ ಮೇಲೆ ಬಿತ್ತು. ನನ್ನ ದೇಹದಿಂದ ಮಾಂಸದ ತುಣುಕಿನಂತಹದ್ದು ಹೊರಬಂದಿತ್ತು. ಅದನ್ನು ಹೊರತೆಗೆಯಲು ಪ್ರಯತ್ನಿಸಿದೆ ಆದರೆ ಪೂರ್ತಿಯಾಗಿ ತೆಗೆಯಲು ಸಾಧ್ಯವಾಗಲಿಲ್ಲ.”
ಹತ್ತಿರದ ಹಳ್ಳಿಯ ಖಾಸಗಿ ಕ್ಲಿನಿಕ್ಕಿಗೆ ಹೋದಾಗ ಗರ್ಭಪಾತವಾಗಿರುವುದನ್ನು ದೃಢಪಡಿಸಿದರು. ತನ್ನೆಲ್ಲ ನೋವುಗಳ ನಡುವೆಯೂ ತೆಳ್ಳಗೆ, ಉದ್ದಕ್ಕಿದ್ದ ಮೀನು ತನ್ನ ಮುಖದಲ್ಲೊಂದು ನಗುವನ್ನು ಧರಿಸಿದ್ದರು. ಅಂದಿನಿಂದಲೂ ಅವರು ಅನಿಯಮಿತ ಋತುಚಕ್ರದ ಸಮಸ್ಯೆ ಹಾಗೂ ದೈಹಿಕ ಮತ್ತು ಮಾನಸಿಕ ಸಂಕಟಗಳನ್ನು ಅನುಭವಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗೋಸಬಾ ಬ್ಲಾಕಿನಲ್ಲಿರುವ ಮೀನು ಅವರ ಊರು ಸುಮಾರು 5,000 ಜನಸಂಖ್ಯೆಯನ್ನು ಹೊಂದಿದೆ. ವಿಸ್ತಾರವಾದ ಭತ್ತದ ಗದ್ದೆಗಳು ಮತ್ತು ಸುಂದರಬನದ ಮ್ಯಾಂಗ್ರೋವ್ ಕಾಡುಗಳಿಂದ ಸಮೃದ್ಧವಾಗಿರುವ ಇದು ಗೋಸಬಾದ ಬೆರಳೆಣಿಕೆಯಷ್ಟು ಒಳಾಂಗಣ ಹಳ್ಳಿಗಳು ಮಾತ್ರ ರಸ್ತೆ ಸಂಪರ್ಕ ಹೊಂದಿವೆ.
ಮೀನು ಜಾರಿಬಿದ್ದ ನಂತರ ತಿಂಗಳಿಗೂ ಹೆಚ್ಚು ಕಾಲ ರಕ್ತಸ್ರಾವವಾಗುತ್ತಿತ್ತು. ಜೊತೆಗೆ ಅವರ ನೋವಿನ ದಾರಿ ಅಲ್ಲಿಗೇ ಮುಗಿಯಲಿಲ್ಲ. “ಶಶ್ರಿಕ್ ಶಂಪೊರ್ಕೋ ಎಟೊ ಬಾತಾ ಕೋರೆ [ಸಂಭೋಗದ ಸಮಯದಲ್ಲಿ ಬಹಳ ನೋವಾಗುತ್ತದೆ].” ಎನ್ನುತ್ತಾರಾಕೆ. “ದೇಹವೇ ಪುಡಿಯಾದಂತೆ ಅನ್ನಿಸುತ್ತಿರುತ್ತದೆ. ಮಲವಿಸರ್ಜೆನೆಗೆಂದು ಒತ್ತಡ ಹಾಕಿದಾಗ ಅಥವಾ ಭಾರ ಎತ್ತುವಾಗ ಗರ್ಭಕೋಶ ಕೆಳಜಾರುವುದು ಅನುಭವಕ್ಕೆ ಬರುತ್ತದೆ.”











