ಆಕೆಗಿನ್ನೂ 18 ವರ್ಷ ಆದರೆ, ಶಿವಾನಿ ಕುಮಾರಿ ತನ್ನ ಮದುವೆ ವಯಸ್ಸು ಮುಗಿಯುತ್ತಿದೆಯೆನ್ನುವ ಕಳವಳದಲ್ಲಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ತನ್ನ ಕುಟುಂಬವು ತನಗೆ ಮದುವೆ ಮಾಡಿಸದಂತೆ ತಡೆಯುವಲ್ಲಿ ಯಶಶ್ವಿಯಾಗಿದ್ದಾರೆ. ಆದರೆ ಈ ರೀತಿ ತನ್ನ ವಿವಾಹವನ್ನು ಬಹಳ ದಿನಗಳ ಕಾಳ ಮುಂದೂಡಲು ಸಾಧ್ಯವಿಲ್ಲವೆನ್ನುವುದು ಆಕೆ ಅಭಿಪ್ರಾಯ. "ಎಷ್ಟು ದಿನ ಹೀಗೇ ಮುಂದೂಡುತ್ತಾ ಹೋಗಲು ಸಾಧ್ಯ? ಒಂದು ದಿನ ಇದು ಕೊನೆಯಾಗಲೇಬೇಕು." ಎಂದು ಅವರು ಹೇಳುತ್ತಾರೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಆಕೆಯ ಗ್ರಾಮವಾದ ಗಂಗಸಾರದಲ್ಲಿ, ಹುಡುಗಿಯರು 10ನೇ ತರಗತಿ ತಲುಪುವ ಮೊದಲು ಅಥವಾ 17-18 ವರ್ಷದವರಾಗುವಷ್ಟರಲ್ಲಿ ಮದುವೆ ಮಾಡಲಾಗುತ್ತದೆ.
ಪ್ರಸ್ತುತ ಎರಡನೇ ವರ್ಷದ ಬಿಕಾಂ ಓದುತ್ತಿರುವ ಶಿವಾನಿ (ಈ ಲೇಖನದಲ್ಲಿ ಬರುವ ವ್ಯಕ್ತಿಗಳ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ) ಮದುವೆಯಿಂದ ತಪ್ಪಿಸಿಕೊಂಡು ಓದುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿಗೆ ಹೋಗುವುದು ಆಕೆಯ ಬಹಳ ಕಾಲದ ಆಸೆಯಾಗಿತ್ತು. ಆದರೆ ತಾನು ಕಾಲೇಜಿಗೆ ಹೋಗುವುದೆಂದರೆ ಏಕಾಂಗಿಯಾಗುವುದೆಂದು ಆಕೆ ಊಹಿಸಿರಲಿಲ್ಲ. “ಊರಿನ ಎಲ್ಲ ಸ್ನೇಹಿತೆಯರೂ ಮದುವೆಯಾಗಿದ್ದಾರೆ. ನನ್ನೊಂದಿಗೆ ಬೆಳೆದ ಮತ್ತು ಓದುತ್ತಿದ್ದ ಎಲ್ಲರೂ ಶಾಲೆ ಬಿಟ್ಟಿದ್ದಾರೆ.” ಎಂದು ಆಕೆ ಹೇಳುತ್ತಾರೆ. ಆಕೆ ಇದಿಷ್ಟನ್ನೂ ತನ್ನ ಪಕ್ಕದ ಮನೆಯ ಕುರಿಗಳನ್ನು ಕಟ್ಟುವ ಹಿತ್ತಲಿನಲ್ಲಿ ನಿಂತು ಹೇಳಿದ್ದು. ಏಕೆಂದರೆ ಆಕೆಗೆ ತನ್ನದೇ ಮನೆಯಲ್ಲಿ ಮುಕ್ತವಾಗಿ ಮಾತನಾಡುವುದು ಸಾಧ್ಯವಿರಲಿಲ್ಲ. “ಕೊರೋನಾ ಸಮಯದಲ್ಲಿ ನನಗಿದ್ದ ಒಬ್ಬಳೇ ಒಬ್ಬಳು ಸ್ನೇಹಿತೆ ಕೂಡ ಮದುವೆಯಾಗಿ ಹೋದಳು.” ಎಂದು ಆಕೆ ಮುಂದುವರೆದು ಹೇಳುತ್ತಾರೆ.
ತನ್ನ ಸಮುದಾಯದಲ್ಲಿ, ಹುಡುಗಿಯರು ಕಾಲೇಜಿಗೆ ಹೋಗುವ ಅವಕಾಶವನ್ನು ಅಪರೂಪವಾಗಿ ಪಡೆಯುತ್ತಾರೆ ಎಂದು ಅವರು ವಿವರಿಸುತ್ತಾರೆ. ಶಿವಾನಿ ರವಿದಾಸ್ ಸಮುದಾಯಕ್ಕೆ ಸೇರಿದವರು (ಚಮರ್ ಜಾತಿಯ ಉಪ-ಗುಂಪು), ಇದು ಮಹಾದಲಿತ್ ವರ್ಗಕ್ಕೆ ಸೇರುತ್ತದೆ. 2007ರಲ್ಲಿ ಬಿಹಾರ ಸರ್ಕಾರದಿಂದ 21 ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ನೀಡಲಾದ ಒಂದು ಸಾಮೂಹಿಕ ಪದವಾಗಿದೆ.
ಅವಿವಾಹಿತರಾಗಿರುವ ಕಾರಣಕ್ಕೆ ಎದುರಾಗುವ ಸಾಮಾಜಿಕ ಕಳಂಕ ಮತ್ತು ಮದುವೆಯಾಗುವಂತೆ ಕುಟುಂಬ, ನೆರೆಹೊರೆಯವರು ಮತ್ತು ಸಂಬಂಧಿಕರಿಂದ ನಿರಂತರ ಒತ್ತಡವು ಆಕೆಯ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿದೆ. "ಅಪ್ಪ ಶಿಕ್ಷಣ ಸಾಕು ಎನ್ನುತ್ತಾರೆ. ಆದರೆ ನನಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸಿದೆ. ನಾನು ಅಷ್ಟು ದೊಡ್ಡ ಕನಸು ಕಾಣಬಾರದೆನ್ನುವುದು ಅವರ ಅಭಿಪ್ರಾಯ. ನಾನು ಓದುವುದನ್ನು ಮುಂದುವರೆಸಿದರೆ ನನ್ನನ್ನು ಯಾರು ಮದುವೆಯಾಗುತ್ತಾರೆಂದು ಕೇಳುತ್ತಾರೆ" ಎಂದು ಅವರು ಹೇಳಿದರು. "ನಮ್ಮಲ್ಲಿ ಗಂಡು ಮಕ್ಕಳು ಕೂಡ ಬೇಗನೆ ಮದುವೆಯಾಗುತ್ತಾರೆ. ಕೆಲವೊಮ್ಮೆ ನಾನು ಕೂಡ ಮದುವೆಗೆ ಒಪ್ಪಿಕೊಳ್ಳುವುದೇ ಸರಿಯೇನೋ ಎನ್ನಿಸುತ್ತದೆ, ಆದರೆ ನಾನು ಇಲ್ಲಿಯವರೆಗೆ ಬಂದಾಗಿದೆ ಮತ್ತು ನನ್ನ ಕನಸನ್ನು ಈಡೇರಿಸಿಕೊಳ್ಳಲು ಹೋರಾಡಲು ಬಯಸುತ್ತೇನೆ."







