ಒಂದು ಒಳ್ಳೆಯ ನಿದ್ರೆಯಿಂದ ಕೂಡಿದ ರಾತ್ರಿಯೆನ್ನುವುದು ಶೀಲಾ ವಾಘ್ಮರೆಯವರ ಬದುಕಿನಿಂದ ದೂರವಾಗಿ ಬಹಳ ಕಾಲವಾಗಿದೆ.
"ನನಗೆ ರಾತ್ರಿ ಮಲಗಲು ಸಾಧ್ಯವಾಗುತ್ತಿಲ್ಲ... ಸರಿಯಾ ನಿದ್ರಿಸಿ ವರ್ಷಗಳೇ ಕಳೆದಿವೆ" ಎಂದು ನೆಲದ ಮೇಲೆ ಹರಡಿದ ಗೋಧಾಡಿಯ ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತಿದ್ದ 33 ವರ್ಷದ ಶೀಲಾ ಹೇಳುತ್ತಾರೆ, ಅವರ ಕೆಂಪಾಗಿದ್ದ ಕಣ್ಣುಗಳು ಆಳವಾದ ನೋವನ್ನು ಪ್ರತಿಫಲಿಸುತ್ತಿದ್ದವು. ಅವರು ತನ್ನ ನಿದ್ರೆಯಿಲ್ಲದ ರಾತ್ರಿಯ ಕುರಿತು ವಿವರಿಸತೊಡಗಿದಂತೆ ಒತ್ತರಿಸಿಕೊಂಡು ಬಂದ ಅಳುವಿಗೆ ದೇಹ ಕಂಪಿಸುತ್ತಿತ್ತು. ಅವರ ತನ್ನ ಅಳುವನ್ನು ಅಡಗಿಸಲು ಯತ್ನಿಸುತ್ತಿದ್ದರು. “ಇಡೀ ರಾತ್ರಿ ಅಳುತ್ತಾ ಕುಳಿತಿರುತ್ತೇನೆ... ಒಮ್ಮೊಮ್ಮೆ ಉಸಿರುಗಟ್ಟಿದಂತೆ ಭಾಸವಾಗುತ್ತದೆ.”
ಶೀಲಾ ಪ್ರಸ್ತುತ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬೀಡ್ ಪಟ್ಟಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಜೂರಿ ಘೋಡ್ಕಾ ಗ್ರಾಮದ ಹೊರವಲಯದಲ್ಲಿ ಎರಡು ಕೋಣೆಗಳ ಇಟ್ಟಿಗೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಮಲಗಿರುವ ಸಮಯದಲ್ಲಿ ಅವರ ನರಳುವಿಕೆಯಿಂದಾಗಿ, ಪತಿ ಮಾಣಿಕ್ ಮತ್ತು ಅವರ ಮೂವರು ಮಕ್ಕಳಾದ ಕಾರ್ತಿಕ್, ಬಾಬು ಮತ್ತು ರುತುಜಾ ಎಚ್ಚರಗೊಳ್ಳುತ್ತಾರೆಂದು ಹೇಳುತ್ತಾರೆ. "ನನ್ನ ಅಳು ಅವರ ನಿದ್ರೆಗೆ ಭಂಗ ತರುತ್ತದೆ. ನಂತರ ನಾನು ನನ್ನ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡು ಮಲಗಲು ಪ್ರಯತ್ನಿಸುತ್ತೇನೆ."
ಆದರೆ ನಿದ್ರೆ ಬರುವುದಿಲ್ಲ. ಮತ್ತು ಕಣ್ಣೀರು ನಿಲ್ಲುವುದಿಲ್ಲ.
"ನಾನು ಯಾವಾಗಲೂ ನೋವಿನಲ್ಲಿರುತ್ತೇನೆ, ಆತಂಕಕ್ಕೊಳಗಾಗುತ್ತೇನೆ" ಎಂದು ಶೀಲಾ ಹೇಳುತ್ತಾರೆ. ಒಂದು ಕ್ಷಣದ ಮೌನದ ನಂತರ, ಅವರು ಕಿರಿಕಿರಿಗೊಂಡಂತೆ ಕಾಣಿಸಿದರು. "ನನ್ನ ಪಿಶ್ವಿ (ಗರ್ಭಕೋಶ) ತೆಗೆದುಹಾಕಿದ ನಂತರ ಇದೆಲ್ಲ ಪ್ರಾರಂಭವಾಯಿತು. ಇದು ನನ್ನ ಬದುಕನ್ನು ಶಾಶ್ವತವಾಗಿ ಬದಲಾಯಿಸಿತು." 2008ರಲ್ಲಿ ಹಿಸ್ಟೆರೆಕ್ಟಮಿಗೆ ಒಳಗಾದಾಗ ಅವರಿಗೆ ಕೇವಲ 20 ವರ್ಷವಾಗಿತ್ತು. ಅಂದಿನಿಂದ, ಅವರು ಭಾವನೆಗಳಲ್ಲಿನ ಏರಿಳಿತ, ನಿದ್ರೆಯಿಲ್ಲದ ರಾತ್ರಿಗಳು, ವಿವರಿಸಲಾಗದ ಕಿರಿಕಿರಿ ಮತ್ತು ದೀರ್ಘಕಾಲದವರೆಗೆ ಮುಂದುವರಿಯುವ ದೈಹಿಕ ನೋವುಗಳನ್ನು ಅನುಭವಿಸುತ್ತಿದ್ದಾರೆ.















