ಹರಿಯಾಣದ ಸೋನಿಪತ್ ಜಿಲ್ಲೆಯ ಹರ್ಸಾನ ಕಲಾನ್ ಗ್ರಾಮದಲ್ಲಿ ಚಳಿಗಾಲದ ಮಧ್ಯಾಹ್ನಗಳಲ್ಲಿ, ತಮ್ಮ ಹೊಲದಲ್ಲಿನ ಕೆಲಸ ಮುಗಿದ ನಂತರ ಮತ್ತು ಮನೆಯ ಕಿರಿಯ ಸದಸ್ಯರು ತಮ್ಮ ಕೆಲಸಕ್ಕೆ ರಜೆಯಿರುವಾಗ, ಅಲ್ಲಿನ ಪುರುಷರು ಆಗಾಗ್ಗೆ ಚೌಪಾಲ್ (ಹಳ್ಳಿಯ ಚೌಕ) ಬಳಿ ಸೇರುತ್ತಾರೆ, ಅಲ್ಲಿ ಅವರು ನೆರಳಿನಲ್ಲಿ ಕುಳಿತು ಇಸ್ಪೀಟ್ ಆಡುತ್ತಾರೆ ಅಥವಾ ವಿಶ್ರಾಂತಿ ಪಡೆಯುತ್ತಾರೆ.
ಆದರೆ ಅಲ್ಲಿ ಮಹಿಳೆಯರನ್ನು ಕಾಣಲು ಸಾಧ್ಯವಿಲ್ಲ.
ಸ್ಥಳೀಯ ನಿವಾಸಿ ವಿಜಯ್ ಮಂಡಲ್ "ಮಹಿಳೆಯರು ಇಲ್ಲಿಗೆ ಏಕೆ ಬರಬೇಕು?" ಎಂದು ಕೇಳುತ್ತಾರೆ. "ಅವರಿಗೆ ಅವರ ಕೆಲಸದ ನಡುವೆ ಇದಕ್ಕೆಲ್ಲ ಸಮಯವಿರೋಲ್ಲ. ವೋ ಕ್ಯಾ ಕ್ಯಾರೆಂಗೆ ಇನ್ ಬಡೇ ಅದ್ಮಿಯೋನ್ ಕೆ ಸಾಥ್ ಬೈಟ್ ಕರ್? [ಈ ದೊಡ್ಡ ಮನುಷ್ಯರ ನಡುವೆ ಅವರು ಬಂದು ಕುಳಿತು ಏನು ಮಾಡಬೇಕಿದೆ?]"
ದೇಶದ ರಾಜಧಾನಿ ದೆಹಲಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಸುಮಾರು 5,000 ಜನಸಂಖ್ಯೆಯನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ, ಈ ಹಳ್ಳಿಯ ಮಹಿಳೆಯರು ಕಟ್ಟುನಿಟ್ಟಾಗಿ ಪರ್ದಾ ಪದ್ಧತಿಯನ್ನು ಅನುಸರಿಸುತ್ತಿದ್ದರು, ಎಂದರೆ ಅವರು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕಾಗಿತ್ತು.
"ಪುರುಷರು ಸೇರುವ ಸ್ಥಳಗಳನ್ನು ಮಹಿಳೆಯರು ನೋಡಬಾರದು" ಎಂದು ಮಂಡಲ್ ಹೇಳುತ್ತಾರೆ. ಹಳ್ಳಿಯ ನಡುವಿನಲ್ಲಿರುವ ಈ ಜಾಗವು ಪುರುಷರು ಸೇರುವ ಸ್ಥಳವಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ಪಂಚಾಯತ್ ಸಭೆಗಳನ್ನು ನಡೆಸಲಾಗುತ್ತದೆ. "ಆ ಕಾಲದಲ್ಲಿ ಮಹಿಳೆಯರು ಸಂಪ್ರದಾಯವನ್ನು ಗೌರವಿಸುತ್ತಿದ್ದರು" ಎಂದು ಹರ್ಸಾನ ಕಲಾನ್ ಮಾಜಿ ಪಂಚಾಯತ್ ಮುಖಂಡ ಸತೀಶ್ ಕುಮಾರ್ ಹೇಳುತ್ತಾರೆ.
"ಆ ಕಾಲದ ಹೆಂಗಸರಲ್ಲಿ ಒಂದು ಘನತೆ ಗೌರವದ ಭಾವವಿತ್ತು" ಎಂದು ಮಂಡಲ್ ಹೇಳುತ್ತಾರೆ, "ಅವರು ಒಂದು ವೇಳೆ ಚೌಪಲ್ ದಾರಿಯಲ್ಲಿ ನಡೆದು ಹೋಗಬೇಕಾಗಿ ಬಂದರೂ ಮುಖವನ್ನು ಸೆರಗಿನಿಂದ ಮರೆಮಾಚಿಕೊಳ್ಳುತ್ತಿದ್ದರು" ಎಂದು ನಗುತ್ತಾ ಹೇಳುತ್ತಾರೆ.
36 ವರ್ಷ ವಯಸ್ಸಿನ ಸೈರಾರಿಗೆ ಇದೇನೂ ಹೊಸತಲ್ಲ. ಕಳೆದ 16 ವರ್ಷಗಳಿಂದ ಎಂದರೆ ದೆಹಲಿಯ ಸಮೀಪವಿರುವ ತನ್ನ ಹಳ್ಳಿ ಮಜ್ರಾ ದಬಾಸ್ನಿಂದ ಇಪ್ಪತ್ತನೇ ವಯಸ್ಸಿನಲ್ಲಿ ಮದುವೆಯಾಗಿ ಈ ಊರಿನ ಸೊಸೆಯಾಗಿ ಇಲ್ಲಿಗೆ ಬಂದಾಗಿನಿಂದಲೂ ಈ ಹೆಚ್ಚಿನ ಆದೇಶಗಳನ್ನು ಅವರು ಅನುಸರಿಸುತ್ತಿದ್ದಾರೆ. ಪುರುಷರಿಗಿಂತ ಭಿನ್ನವಾಗಿ, ಅವರನ್ನು ಅವರ ಮೊದಲ ಹೆಸರಿನಿಂದ ಕರೆಯಲಾಗುತ್ತದೆ.
“ಒಂದು ವೇಳೆ ಮದುವೆಗೆ ಮೊದಲು ನಾನು ನನ್ನ ಗಂಡನನ್ನು ಭೇಟಿಯಾಗಿದ್ದಿದ್ದರೆ, ಈ ಮದುವೆಗೆ ನಾನು ಖಂಡಿತ ಒಪ್ಪಿಗೆ ನೀಡುತ್ತಿರಲಿಲ್ಲ. ಇಸ್ ಗಾಂವ್ ಮೆ ತೋ ಕತ್ತೆ ನಾ ಆತೀ [ಈ ಹಳ್ಳಿಗಂತೂ ಯಾವ ಕಾರಣಕ್ಕೂ ಬರಲು ಒಪ್ಪುತ್ತಿರಲಿಲ್ಲ]” ಎಂದು ಸೈರಾ ಹೇಳುತ್ತಾರೆ, ಹೊಲಿಗೆ ಯಂತ್ರದ ಸೂಜಿ ಮತ್ತು ಅವರು ಹೊಲಿಯುತ್ತಿರುವ ನೇರಳೆ ಬಣ್ಣದ ಬಟ್ಟೆಯ ನಡುವೆ ಅವರ ಕೈಗಳು ಸಮರ್ಥವಾಗಿ ಚಲಿಸುತ್ತಿದ್ದವು. (ಈ ವರದಿಯಲ್ಲಿ ಅವರ ಹೆಸರು, ಮತ್ತು ಅವರ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ಬದಲಾಯಿಸಲಾಗಿದೆ.)










