ಮೂಕಾಂಬಿಕಾ ಅವರು ಯಕ್ಷಗಾನದ ನಡೆಗಳನ್ನು ಅನುಕರಿಸುತ್ತಿರುವುದನ್ನು ಒಂದು ಬಾರಿ ಅವರ ಅಜ್ಜ ನೋಡಿದರು. ಆಗ “ಅವರಿಗೆ ಕೋಪ ಬಂದು ನಂಗೆ ಬೈದರು,” ಎಂದು ಮೂಕಾಂಬಿಕಾ ನೆನಪು ಮಾಡಿಕೊಳ್ಳುತ್ತಾರೆ. ಕರಾವಳಿ ಕರ್ನಾಟಕ ಮತ್ತು ಕೇರಳದ ಕಾಸರಗೋಡಿನ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಈ ಜಾನಪದೀಯ ಪ್ರದರ್ಶನ ಕಲೆಯಲ್ಲಿ ಹೆಂಗಸರು ಕುಣಿಯುವಂತಿಲ್ಲ ಎಂದು ಯುವತಿಯಾಗಿದ್ದ ಇವರನ್ನು ಇವರ ಅಜ್ಜ ಪದೇ ಪದೇ ಎಚ್ಚರಿಸುತ್ತಿದ್ದರಂತೆ.
ಮೂಕಾಂಬಿಕಾ ವಾರಂಬಳ್ಳಿಯವರಿಗೆ ಈಗ 75 ವರ್ಷ ಪ್ರಾಯ. ಬಾಲ್ಯದಲ್ಲಿ ತಮ್ಮ ಊರಾದ ಉಡುಪಿ ಜಿಲ್ಲೆಯ ಮಾರ್ವಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಆಟಗಳು ಇವರನ್ನು ಯಕ್ಷಗಾನದ ಕಡೆಗೆ ಆಕರ್ಷಿತರಾಗುವಂತೆ ಮಾಡಿದ್ದವು. ಸಂಜೆ ಶುರುವಾದರೆ ಮಾರನೇ ದಿನ ಮುಂಜಾನೆ ವರೆಗೆ ನಡೆಯುತ್ತಿದ್ದ ಈ ಯಕ್ಷಗಾನ ಆಟಗಳನ್ನು ನೋಡಲು ಮನೆಯ ಮತ್ತು ನೆರೆಹೊರೆಯ ಹೆಂಗಸರ ಒಂದು ದೊಡ್ಡ ಗುಂಪಿನೊಂದಿಗೆ ತುಂಬಾ ದೂರ ನಡೆದುಕೊಂಡೇ ಹೋಗುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಮಾರನೇ ದಿನ ತಮ್ಮ ಗೆಳಯರನ್ನೆಲ್ಲಾ ಮನೆಯ ಅಂಗಳದಲ್ಲಿ ಗುಂಪು ಸೇರಿಸಿಕೊಂಡು, ಹೊದಿಕೆ ಮತ್ತು ಬೈರಾಸು ಸುತ್ತಿಕೊಂಡು ಹಿಂದಿನ ದಿನ ನೋಡಿದ ಪ್ರಸಂಗದ ಕುಣಿತಗಳನ್ನು ಕುಣಿಯುತ್ತಿದ್ದರಂತೆ.
“ಮನೆಯಲ್ಲಿ ಅಜ್ಜ ಇಲ್ಲದಿದ್ದಾಗ ಮಾತ್ರ ಮನೆಯ ಮುಂದಿನ ಅಂಗಳದಲ್ಲಿ ನಾವು ಅಭಿನಯಿಸುತ್ತಿದ್ದೆವು. ಹೆಣ್ಣು ಮಕ್ಕಳು ಯಕ್ಷಗಾನ ಮಾಡಬಾರದು ಎಂದು ಅವರು ನಂಬಿದ್ದರು,” ಎಂದು ಮೂಕಾಂಬಿಕಾ ಹೇಳುತ್ತಾರೆ.
ಯಕ್ಷಗಾನ ಪದದ ಅರ್ಥ ‘ದೇವತೆಗಳ ಹಾಡು’ ಎಂದು. ಇದನ್ನು ಕರಾವಳಿ ಕರ್ನಾಟಕ, ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಎಲ್ಲೆಡೆ ಶತಮಾನಗಳಿಂದ ಪ್ರದರ್ಶಿಸಲಾಗುತ್ತಿದೆ. ಸಂಗೀತ, ಕುಣಿತ, ಸಂಭಾಷಣೆ, ಮತ್ತು ಕಥೆ ಹೇಳುವ ಕ್ರಮ- ಇವೆಲ್ಲವೂ ಒಟ್ಟು ಸೇರಿದ ಪ್ರದರ್ಶನ ಕಲೆಯಾದ ಯಕ್ಷಗಾನದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳ ಕತೆಗಳನ್ನು ಆಡಿ ತೋರಿಸಲಾಗುತ್ತದೆ. ಈ ಪ್ರದೇಶಗಳ ಪ್ರಸಿದ್ಧ ದೇವಾಲಯಗಳು ತಮ್ಮದೇ ಆದ ಯಕ್ಷಗಾನ ಮೇಳಗಳನ್ನು ನಡೆಸುತ್ತವೆ.
ದೈಹಿಕವಾಗಿ ಹೆಚ್ಚಿನ ಶಕ್ತಿಯ ಅಗತ್ಯ ಇರುವ ಈ ಕಲೆಯನ್ನು ಸ್ಥಳೀಯವಾಗಿ ʼಗಂಡು ಕಲೆ’ ಎಂದು ಕರೆಯುತ್ತಾರೆ. ಇದರ ಅರ್ಥ ಗಂಡಸರು ಮಾತ್ರ ಕುಣಿಯುವ ಕುಣಿತ ಎಂದು. ಇದರಲ್ಲಿ ಎತ್ತರ ಎತ್ತರಕ್ಕೆ ಜಿಗಿಯಬೇಕು, ಗಿರಕಿ ಹೊಡೆಯಬೇಕು. ಹಾಗಾಗಿ ಇದಕ್ಕೆ ಕೇವಲ ಚಾತುರ್ಯ ಮಾತ್ರವಲ್ಲ, ದೈಹಿಕ ಸದೃಢತೆಯೂ ಬೇಕು. ಇವೆಲ್ಲವೂ ಗಂಡಸರಿಗೆ ಮಾತ್ರ ಸಾಧ್ಯ ಎಂದು ನಂಬಿಕೊಂಡು ಬರಲಾಗಿದೆ. ಸ್ತ್ರೀವೇಷಗಳನ್ನೂ ಪುರುಷರೇ ಮಾಡುತ್ತಿದ್ದರು.
“ಪ್ರೇಕ್ಷಕರಿಗೆ ಪ್ರಸಂಗ ಮತ್ತು ಕಥೆ ಮೊದಲೇ ಗೊತ್ತಿರುತ್ತದೆ. ಆದರೆ ಪ್ರತೀ ಪ್ರದರ್ಶನದಲ್ಲೂ ಅವರು ಪ್ರಸಂಗವನ್ನು ಹೊಸದಾದ ದೃಷ್ಟಿಕೋನದಿಂದ ನೋಡುತ್ತಾರೆ. ಪ್ರತೀ ಬಾರಿ ಅವರು ತಮ್ಮ ಅನುಭವನನ್ನು ಪುನರಾವರ್ತಿಸಿಕೊಳ್ಳುತ್ತಾರೆ. ಒಬ್ಬ ಕಲಾವಿದ ತಮಗೆ ಕೊಟ್ಟ ಪಾತ್ರವನ್ನು ಹೇಗೆ ವಿಭಿನ್ನವಾಗಿ ನಿರ್ವಹಿಸುತ್ತಾನೆ ಎಂಬುದು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ,” ಎಂದು ಹಿರಿಯ ಯಕ್ಷಗಾನ ಕಲಾವಿದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜೀ ಅಧ್ಯಕ್ಷ ಎಂ.ಎಲ್ ಸಾಮಗ ಹೇಳುತ್ತಾರೆ.














