ಅವರ ಮನೆಗೆ ಹೊರಟ ನಾವು ದಾರಿಯಲ್ಲಿ, ಒಂದು ಜಂಕ್ಷನ್ ತಲುಪಿದೆವು. "ರೈತರು ಮತ್ತು ಕಾರ್ಮಿಕರು ಕಷ್ಟಲ್ಲಿದ್ದಾರೆ. ಸಾಮ್-ದಾಮ್-ದಂಡ್-ಭೇದ್ ಹೀಗೆ ನಾಲ್ಕೂ ಬಗೆಯಲ್ಲೂ ಪೆಟ್ಟು ತಿನ್ನುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. (ಕ್ರಿ.ಪೂ. ಮೂರನೇ ಶತಮಾನದಲ್ಲಿ ಬದುಕಿದ್ದ ಭಾರತೀಯ ಗುರು, ತಂತ್ರಜ್ಞ ಮತ್ತು ರಾಜ ಸಲಹೆಗಾರ ಹಾಗೂ ಚಾಣಕ್ಯ ಎಂದೂ ಗುರುತಿಸಲ್ಪಟ್ಟ ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ಹೇಳಿದ ಸಾಮ, ದಾನ, ದಂಡ – ಭೇದ ಎನ್ನುವ ನಾಲ್ಕು ನಿಯಮಗಳನ್ನು ಇಲ್ಲಿ ಕೃಷ್ಣ ಉಲ್ಲೇಖಿಸುತ್ತಿದ್ದಾರೆ.)
ಆದರೆ ಕೃಷ್ಣ ಹೆಚ್ಚು ಹೆಚ್ಚು ಆಧುನಿಕ ಚಾಣಕ್ಯನ ಕುರಿತಾಗಿಯೇ ಮಾತನಾಡಿದರು!
"ಆಡಳಿತ ಪಕ್ಷ (ಬಿಜೆಪಿ) ಯಾವುದೇ ರೀತಿಯಲ್ಲಿ ದೆಹಲಿ ಗಡಿಯಲ್ಲಿನ 700ಕ್ಕೂ ಹೆಚ್ಚಿನ ರೈತರ ಸಾವಿನ ವಿಷಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ" ಎಂದು ಅವರು 2020ರಲ್ಲಿ ಐತಿಹಾಸಿಕ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಹೇಳುತ್ತಾರೆ. ಅಲ್ಲದೆ ಅವರು ಬಹಳಷ್ಟು ಸತಾಯಿಸಿ ಒಂದು ವರ್ಷದ ನಂತರ ಹಿಂತೆಗೆದುಕೊಂಡ ಕೃಷಿ ಕಾಯ್ದೆಯ ವಿಷಯದಲ್ಲೂ ಬಿಜೆಪಿಯನ್ನು ಖಂಡಿಸುತ್ತಾರೆ.
"ಲಖಿಂಪುರ್ ಖೇರಿಯಲ್ಲಿ ತೇನಿ (ಬಿಜೆಪಿ ನಾಯಕನ ಮಗ) ರೈತರನ್ನು ಹೇಗೆ ಕೊಂದ ಎನ್ನುವುದು ನೆನಪಿದೆಯೇ? ಯೇ ಮಾರ್ನೆ ಮೇನ್ ಕಂಜೂಸಿ ನಹೀ ಕರ್ತೇ. (ಕೊಲೆಯ ವಿಷಯಕ್ಕೆ ಬಂದಾಗ ಅವರು ಜಿಪುಣತನ ತೋರಿಸುವವರಲ್ಲ). ಉತ್ತರ ಪ್ರದೇಶದಲ್ಲಿ ನಡೆದ 2021ರ ಈ ಘಟನೆ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ತನ್ನದೇ ಪಕ್ಷದ ಸಂಸದ ಹಾಗೂ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಅಂಶವು ಇಲ್ಲಿನ ಕೃಷ್ಣ ಅವರಂತಹ ಜನರಿಗೆ ಇಷ್ಟವಾಗಿಲ್ಲ. "ಸಾಕ್ಷಿ ಮಲಿಕ್ ಮತ್ತು ಅನೇಕ ಪ್ರಸಿದ್ಧ ಕುಸ್ತಿಪಟುಗಳು ಕಳೆದ ವರ್ಷ ಹೊಸದೆಹಲಿಯಲ್ಲಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು. ಅಪ್ರಾಪ್ತ ಬಾಲಕಿ ಸೇರಿದಂತೆ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಿಂಗ್ ಅವರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.
2014ರಲ್ಲಿ ಬಿಜೆಪಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. "ಆ ಎಲ್ಲಾ ಭರವಸೆಗಳು ಏನಾದವು?" ಎಂದು ಕೃಷ್ಣ ಕೇಳುತ್ತಾರೆ. "ಅವರು ಸ್ವಿಟ್ಜರ್ಲೆಂಡ್ ದೇಶದಿಂದ ಕಪ್ಪು ಹಣವನ್ನು ತಂದು ನಮ್ಮ ಖಾತೆಗಳಿಗೆ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಗೆ ನಮಗೆ ಸಿಕ್ಕಿದ್ದು ಹಸಿವು ಮತ್ತು ರೇಷನ್ ಮಾತ್ರ.