ಜನರಿಂದ ಕಿಕ್ಕಿರಿದು ತುಂಬಿದ್ದ ಆನಂದ ವಿಹಾರ ರೈಲ್ವೇ ನಿಲ್ದಾಣದಲ್ಲಿ ಸೋನು ಕುಮಾರ್ ರಾವತ್ ಮತ್ತು ಅವರ ಕುಟುಂಬವು ಕುಳಿತುಕೊಳ್ಳಲು ಸಣ್ಣ ಸ್ಥಳವೊಂದನ್ನು ಹುಡುಕಿಕೊಂಡಿತ್ತು. ಅವರ ಸುತ್ತ ಪ್ರಯಾಣಿಕರ ಓಡಾಟ ಮತ್ತು ರೈಲುಗಳು ಬಂದು ಹೋಗುವಿಕೆ ನಡೆದೇ ಇತ್ತು. ಈ 27 ವರ್ಷದ ವ್ಯಕ್ತಿ ತನ್ನ ಸಾಮಾನು ಸರಂಜಾಮುಗಳ ಮೇಲೆ ಒಂದು ಕಣ್ಣು ಇಟ್ಟೇ ಇದ್ದರು. ಅವರ ಪತ್ನಿ ಸಿತಾರ ಖಾತೂನ್ ತಮ್ಮ ಮಗುವನ್ನು ಎತ್ತಿಕೊಂಡಿದ್ದರು. ಅವರು ಬಿಹಾರಕ್ಕೆ ಹೋಗಲಿರುವ ಲಿಚ್ಛವಿ ಎಕ್ಸ್ಪ್ರೆಸ್ ರೈಲಿಗಾಗಿ ಕಾಯುತ್ತಿದ್ದರು. ಆದರೆ ಆ ರೈಲು ಬರುವುದು ಇನ್ನೂ ನಾಲ್ಕು ಗಂಟೆಯಷ್ಟು ಸಮಯವಿತ್ತು. ಮಧ್ಯಾಹ್ನದ ಎರಡು ಗಂಟೆಯ ಬಿಸಿಲಿನ ಸೆಕೆಗೆ ಕುಟುಂಬ ಬಸವಳಿಯುತ್ತಿತ್ತು.
ಸೋನು ಮೇಸ್ತ್ರಿ ಕೆಲಸ ಮಾಡುತ್ತಾರೆ. ಸಿತಾರ ನಿರ್ಮಾಣ ಸ್ಥಳಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಇಬ್ಬರೂ ಪ್ರತಿ ದಿನ ಬೆಳಗ್ಗೆ ಎದ್ದು ಗಾಜಿಯಾಬಾದ್ ನಗರದ ಕಾರ್ಮಿಕ ಮಂಡಿಗಳಲ್ಲಿ ಸಾಲುಗಟ್ಟಿ ನಿಂತು ತಮ್ಮ ಸರತಿಗಾಗಿ ಕಾಯುತ್ತಾರೆ. ಆದರೆ ಕಳೆದ ಕೆಲವು ವಾರಗಳಿಂದ ಅವರಿಗೆ ಕೆಲಸ ಸಿಗುತ್ತಿಲ್ಲ. “ನಾವು ಇಡೀ ದಿನ ಕಾರ್ಮಿಕರ ಚೌಕದ ಬಳಿಯೇ ನಿಂತು ಕಳೆದೆವು. ಇದು ಎರಡು ಮೂರು ದಿನಗಳ ಕಾಲ ಹೀಗೇ ನಡೆಯಿತು. ಆದರೆ ಕೆಲಸ ಮಾತ್ರ ಸಿಗಲಿಲ್ಲ” ಎಂದು ಅವರು ಹೇಳಿದರು.
ಇರಾನ್ ವಿರುದ್ಧ ಅಮೇರಿಕದ ಯುದ್ಧದ ನಂತರದ ಬೆಳವಣಿಗೆಯಾಗಿ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ಹಾಕಲಾಯಿತು. ಇದರ ಪರಿಣಾಮವಾಗಿ ದೇಶಾದ್ಯಂತ ಎಲ್ಪಿಜಿ ದರ ಗಗನಕ್ಕೇರಿ ಕುಳಿತಿದೆ. ಈ ಬೆಲೆಯೇರಿಕೆಯ ನಡುವೆ ರಾವತ್ ಅವರ ಕುಟುಂಬಕ್ಕೆ ದೆಹಲಿಯಲ್ಲಿ ಬದುಕು ನಡೆಸುವುದು ಆರ್ಥಿಕವಾಗಿ ಕಷ್ಟವಾಗತೊಡಗಿತು.
“ಮೊದಲು ಗ್ಯಾಸ್ ಸಿಲಿಂಡರ್ಗೆ 1,200, ಬಾಡಿಗೆಗೆ 2,500, ಮತ್ತು ಕರೆಂಟ್ ಬಿಲ್ಲಿಗೆ ಎಂದು 500 ರೂಪಾಯಿ ಖರ್ಚು ಮಾಡುತ್ತಿದ್ದೆವು. ಅಂದರೆ ಊಟ, ತಿಂಡಿ ಬಿಟ್ಟು ತಿಂಗಳಿಗೆ 4,000ರಿಂದ 5,000 ರೂಪಾಯಿಗಳಷ್ಟು ತಿಂಗಳ ಕರ್ಚು ಬರುತ್ತಿತ್ತು” ಎನ್ನುತ್ತಾರೆ ಸೋನು. ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೂ ಹಣ ಹೊಂದಿಸುವುದು ಕಷ್ಟವಾದ ಕಾರಣ ಅವರಿಗೆ ತಮ್ಮ ಊರಿನತ್ತ ಮುಖ ಮಾಡುವುದು ಅನಿವಾರ್ಯವಾಯಿತು.
ಆದರೆ ಅವರ ಈ ಊರಿನ ಪ್ರಯಾಣ ಅಷ್ಟು ಸುಲಭದ್ದಲ್ಲ. ಅಂತರ್ಧಮೀಯ ದಂಪತಿಗಳಾದ ಅವರಿಬ್ಬರು ಮದುವೆಯಾಗುವ ಸಲುವಾಗಿ ಊರು ಬಿಟ್ಟು ಓಡಿ ಬಂದಿದ್ದರು. ಈ ಮತ್ತೆ ಊರಿಗೆ ತೆರಳುವುದೆಂದರೆ ಅಪಾಯವನ್ನು ಆಹ್ವಾನಿಸಿದಂತೆ. ಅವರು ತಮ್ಮ ಗುರುತುಗಳನ್ನು ಊರಲ್ಲೇ ಉಳಿಸಿ, ಹೊಸ ಬದುಕನ್ನು ಹುಡುಕಿಕೊಂಡು ವರ್ಷದ ಹಿಂದಷ್ಟೇ ದೇಶದ ರಾಜಧಾನಿಯನ್ನು ತಲುಪಿದ್ದರು. ಈಗ ಅನಿವಾರ್ಯವಾಗಿ ಮತ್ತೆ ಅದೇ ಊರಿನತ್ತ ಮುಖ ಮಾಡಿದ್ದಾರೆ. ಸಿತಾರ ಅವರ ಕುಟುಂಬದಿಂದ ಸೌಮ್ಯ ಸ್ವಾಗತ ಸಿಗಬಹುದೆನ್ನುವ ನಿರೀಕ್ಷೆಯಲ್ಲಿ ದಂಪತಿಗಳಿದ್ದರು. ಬಿಹಾರದ ಸಿವಾನ್ ಜಿಲ್ಲೆಯ ಮೈರ್ವಾ ಎನ್ನುವುದು ಸಿತಾರ ಅವರ ಊರು.
ದೆಹಲಿಯಲ್ಲಿ ಈ ಕುಟುಂಬವು ಕನಾವನಿ ಗ್ರಾಮದ ಕೊಳಗೇರಿಯ ಒಂಟಿ ಕೋಣೆಯಲ್ಲಿ ವಾಸವಿತ್ತು. “ನಾವು ಹೆಚ್ಚೂ ಕಡಿಮೆ ತಿಂಗಳ ಇಪ್ಪತ್ತು ದಿನಗಳನ್ನು ಕೆಲಸ ಹುಡುಕುವುದರಲ್ಲೇ ಕಳೆಯುತ್ತಿದ್ದೆವು. ಸರಿಯಾಗಿ ಕೆಲಸ ಸಿಕ್ಕ ತಿಂಗಳುಗಳಲ್ಲಿ ತಲಾ 10,000 [ರೂಪಾಯಿ] ಗಳಿಸುತ್ತಿದ್ದೆವು” ಎನ್ನುತ್ತಾ ಸೋನು ನಿಟ್ಟುಸಿರು ಬಿಟ್ಟರು. ಈ ನಡುವೆ ಹೊಸದಾಗಿ ಶುರುವಾದ ಅಡುಗೆ ಅನಿಲದ ಬಿಕ್ಕಟ್ಟು ಮೊದಲೇ ಹದಗೆಟ್ಟಿದ್ದ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಗಂಭೀರ ಪರಿಸ್ಥಿತಿಗೆ ತಳ್ಳಿತು.






