"ನಾವು ಕೆಲಸ ಮಾಡುವುದರಿಂದ ನೀವು ತಿನ್ನಬಹುದು" ಎಂದು ಪುಣೆ ಜಿಲ್ಲೆಯ ಖೇಡ್ ತಹಸಿಲ್ನ ರೈತ ಮಹಿಳೆ ಕೃಷ್ಣಬಾಯಿ ಕಾರ್ಲೆ ಹೇಳಿದರು. ಇದು ಸರ್ಕಾರಕ್ಕೆ ಒಂದು ಜ್ಞಾಪನೆಯಾಗಬೇಕಿತ್ತು. ಈ ವರ್ಷದ ಸೆಪ್ಟೆಂಬರ್ನಲ್ಲಿ ಕೇಂದ್ರವು ಅಂಗೀಕರಿಸಿದ ಮೂರು ಹೊಸ ಕೃಷಿ ಕಾನೂನುಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿರುವ ಅಸಂಖ್ಯಾತ ರೈತರಲ್ಲಿ ಕೃಷ್ಣಬಾಯಿ ಒಬ್ಬರು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ಡಿಸೆಂಬರ್ 11ರಂದು ಪುಣೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರೈತರಮೇಲೆ ಮತ್ತು ವಿಶೇಷವಾಗಿ ಕೃಷಿಯಲ್ಲಿ ಮಹಿಳೆಯರ ಮೇಲೆ ಹೊಸ ಕಾನೂನಿನ ಪರಿಣಾಮವನ್ನು ಎತ್ತಿ ತೋರಿಸಲು ಜಿಲ್ಲೆಯಾದ್ಯಂತದ ರೈತರು, ಕೃಷಿ ಕಾರ್ಮಿಕರು ಮತ್ತು ಕಾರ್ಯಕರ್ತರು - ಎಲ್ಲರೂ ಮಹಿಳೆಯರು - ಪುಣೆ ನಗರದಲ್ಲಿ ಒಟ್ಟುಗೂಡಿದ್ದರು.
ಭಾರತದಲ್ಲಿ ಕೃಷಿಗೆ ಮಹಿಳೆಯರು ಗಣನೀಯ ಕೊಡುಗೆ ನೀಡುತ್ತಿದ್ದರೂ - ಕನಿಷ್ಠ ಶೇಕಡ 65.1ರಷ್ಟು ಮಹಿಳಾ ಕಾರ್ಮಿಕರು ಕೃಷಿಯಲ್ಲಿ ಕೃಷಿಕರಾಗಿ ಅಥವಾ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ (ಜನಗಣತಿ 2011) - ಅವರನ್ನು ರೈತರೆಂದು ಪರಿಗಣಿಸಲಾಗುವುದಿಲ್ಲ ಮತ್ತು ಕುಟುಂಬದ ಭೂಮಿಯ ಮಾಲೀಕತ್ವವನ್ನು ಹೆಚ್ಚಾಗಿ ನಿರಾಕರಿಸಲಾಗುತ್ತದೆ. ಪುಣೆ ಸಭೆಯಲ್ಲಿ ರೈತರು, ಅವರ ಜೀವನೋಪಾಯಕ್ಕೆ ಮತ್ತಷ್ಟು ಬೆದರಿಕೆ ಹಾಕುವ ಕಾನೂನುಗಳನ್ನು ವಿಧಿಸುವ ಬದಲು, ಕೇಂದ್ರ ಸರ್ಕಾರವು ಮಹಿಳೆಯರನ್ನು ರೈತರೆಂದು ಗುರುತಿಸಬೇಕು ಎಂದು ಹೇಳಿದರು. "ಮಹಿಳೆಯರು ಕೆಲಸ ಮಾಡುವುದು ಮಾತ್ರವಲ್ಲ, ಪುರುಷರಿಗಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾರೆ" ಎಂದು ದೌಂಡ್ ತಹಸಿಲ್ನ ರೈತ ಮಹಿಳೆ ಆಶಾ ಅಟೋಲ್ ಹೇಳಿದರು.
ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆಯ 16ನೇ ದಿನದಂದು ನಡೆದ ಡಿಸೆಂಬರ್ 11ರ ಸಭೆಯು ಹೊಸ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಡಿಸೆಂಬರ್ 8ರಂದು ಪ್ರಾರಂಭಿಸಲಾದ 'ಕಿಸಾನ್ ಬಾಗ್' ವೇದಿಕೆಯಾಗಿ ಒಗ್ಗೂಡಿತು. ಮಹಾರಾಷ್ಟ್ರದ 41 ವರ್ಷಗಳ ಹಳೆಯ ಮಹಿಳಾ ಸಂಘಟನೆಗಳ ಸಮೂಹವಾದ ಸ್ತ್ರೀ ಮುಕ್ತಿ ಆಂದೋಲನ ಸಂಪರ್ಕ ಸಮಿತಿಯು ಈ ಸಭೆಯನ್ನು ಆಯೋಜಿಸಿತ್ತು.
ಪ್ರತಿಭಟನೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ರೈತರು ಸಾಲ ಮತ್ತು ಮಾರುಕಟ್ಟೆ ಸೌಲಭ್ಯಗಳ ಕೊರತೆಯಂತಹ ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಪುನರುಚ್ಚರಿಸಿದರು.
ಸಭೆಯಲ್ಲಿ ಘೋಷಿಸಲಾದ ಬೇಡಿಕೆಗಳ ಪಟ್ಟಿಯಲ್ಲಿ, ರೈತರನ್ನು'ರಾಷ್ಟ್ರ ವಿರೋಧಿಗಳು'ಎಂದು ಕರೆಯುವ ಮೂಲಕ ಮಾಡುವ ಮಾನಹಾನಿಯು ನಿಲ್ಲಬೇಕು ಎಂದು ಅವರು ಹೇಳಿದರು. ರೈತರ ರಾಷ್ಟ್ರೀಯ ಆಯೋಗದ (ಅಥವಾ ಸ್ವಾಮಿನಾಥನ್ ಆಯೋಗದ) ಕನಿಷ್ಠ ಬೆಂಬಲ ಬೆಲೆ (ಎಮ್ಎಸ್ಪಿ) ಮತ್ತು ವಿಕೇಂದ್ರೀಕೃತ ಖರೀದಿ ಸೌಲಭ್ಯಗಳ ಶಿಫಾರಸುಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದೂ ಅವರು ಒತ್ತಾಯಿಸಿದರು.













