2015ರ ನವೆಂಬರ್ನಲ್ಲಿ ಶಿಖಾ ಮೊಂಡಲ್, ಪತಿ ಅಸಿತ್ ಅವರನ್ನು ಕಳೆದುಕೊಂಡರು. “ಏಡಿಗಳನ್ನು ಹಿಡಿಯುವ ಸಲುವಾಗಿ ಇಬ್ಬರು ಗಂಡಸರೊಂದಿಗೆ ಅವರು ಬಾಗನ್ಬಾರಿ ಕಾಡಿನ ಗರಲ್ ನದಿಗೆ ತೆರಳಿದ್ದರು. ಹಿಂದಿರುಗಿ ಬಂದ ಆ ಇಬ್ಬರು, ನನ್ನ ಪತಿಯನ್ನು ಹುಲಿಯು ಒಯ್ದಿತೆಂದು ತಿಳಿಸಿದರು” ಎಂದರಾಕೆ. ಅಸಿತ್ ಮೊಂಡಲ್ ಸಾವಿಗೀಡಾದಾಗ ಅವರಿಗೆ 32ರ ವಯಸ್ಸು. ಕುಟುಂಬದಲ್ಲಿ ಸಂಪಾದನೆಯ ಏಕೈಕ ಆಧಾರವಾಗಿದ್ದ ಅವರಿಗೆ ಶಾಲೆಗೆ ಹೋಗುವ ಇಬ್ಬರು ಗಂಡು ಮಕ್ಕಳಿದ್ದರು.
ಪಶ್ಚಿಮ ಬಂಗಾಳದ ಗೊಸಬ ವಲಯದ ಜಹರ್ ಕಾಲೋನಿ ಹಳ್ಳಿಯ ನಿವಾಸಿಯಾಗಿದ್ದ ಶಿಖಾ, ಪರಿಹಾರವನ್ನು ಪಡೆಯಬೇಕೆಂದು ತೀರ್ಮಾನಿಸಿ, ತನಗೆ ಸಹಾಯಮಾಡಲೆಂದು ವಕೀಲರೊಬ್ಬರಿಗೆ 10000 ರೂ.ಗಳನ್ನು ನೀಡಿದರು. “ಪೊಲೀಸ್ ಮತ್ತು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾಪತ್ರಗಳು, ವಿಮೆಯ ಕಾರ್ಡ್, ಗ್ರಾಮದ ಮುಖ್ಯಸ್ಥನ ಪತ್ರ ಮತ್ತು ಮರಣ ಪ್ರಮಾಣಪತ್ರ ಹೀಗೆ ಅನೇಕ ದಾಖಲೆಗಳನ್ನು ಸಂಗ್ರಹಿಸಬೇಕಿತ್ತು.”
ವಕೀಲರು ವಿಮಾ ಕಂಪನಿಯಿಂದ 1 ಲಕ್ಷ ರೂ.ಗಳ ಪರಿಹಾರವನ್ನು ದೊರಕಿಸಿದರು. ಆದರೆ ಈಕೆಯ ಪತಿಯು ಸಂರಕ್ಷಿತ ಪ್ರದೇಶದಲ್ಲಿ ಸಾವಿಗೀಡಾದ ಕಾರಣ ಅರಣ್ಯ ಇಲಾಖೆಯು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತು. ವಿಮಾ ಇಲಾಖೆಯು ಇದುವರೆಗೂ ಇವರಿಗೆ ದಾಖಲೆಗಳನ್ನು ಹಿಂದಿರುಗಿಸಿಲ್ಲ.
ಶಿಖಾ ಈಗ ಏಡಿ ಮತ್ತು ಸೀಗಡಿಗಳನ್ನು ಹಿಡಿಯುತ್ತಾರೆ. ಕೃಷಿಗೆ ಸಂಬಂಧಿಸಿದ ಕೂಲಿ ಕೆಲಸಗಳು ಹಾಗೂ ಇನ್ನಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಗಂಡು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಸ್ವಂತ ಮನೆಯನ್ನು ಹೊಂದಲಾರದ ಇವರು ಚಿಕ್ಕಪ್ಪನ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ.
ಸುಂದರ್ಬನ್ಸ್ನಲ್ಲಿ ಹೀಗೆಯೇ ಸಾವಿರಾರು ಮಹಿಳೆಯರು ಹುಲಿಯ ದಾಳಿಯಿಂದಾಗಿ ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದಾರೆ. ಪೂರ್ವ ಭಾರತದಲ್ಲಿ ಸುಮಾರು 4200 ಚದರ ಕಿ.ಮೀ.ಗಳವರೆಗೂ ವ್ಯಾಪಿಸಿದ್ದು, ವಿಶ್ವದ ಅತಿ ದೊಡ್ಡ ಕಾಡುಗಳಿಗೆ ನೆಲೆಯಾಗಿರುವ ಈ ನದೀ ಮುಖಜ ಭೂಮಿಯ ಪ್ರದೇಶವು ಹುಲಿಗಳೊಂದಿಗೆ ಹಾಸುಹೊಕ್ಕಾಗಿದೆ.



