“ಪರೀಕ್ಷೆ ಓದಿ ಸಿದ್ಧರಾಗುವುದು ನಮ್ಮ ಜವಾಬ್ದಾರಿ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಪ್ರಾಧಿಕಾರಗಳ ಜವಾಬ್ದಾರಿ” ಎಂದ ಅನ್ಶು ಕುಮಾರಿಯವರ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು.
ಈ 24 ವರ್ಷದ ಯುವತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಎಷ್ಟು ಒತ್ತಡ ತರುತ್ತವೆ ಎನ್ನವುದು ಬಹಳ ಚೆನ್ನಾಗಿಯೇ ಗೊತ್ತಿದೆ. ಈಗ ಶಾಲೆಯೊಂದರಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವ ಅವರು, ಸರ್ಕಾರಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಸಿಟಿಇಟಿ) ಸಿದ್ಧತೆ ನಡೆಸುತ್ತಲೇ, ಓಪನ್ ಯೂನಿವರ್ಸಿಟಿ ಮೂಲಕ ಬಿಎಡ್ ಪದವಿಯನ್ನೂ ಓದುತ್ತಿದ್ದಾರೆ.
2023 ಮತ್ತು 2024ರಲ್ಲಿ ಅನ್ಶು ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳನ್ನು ಬರೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಕೆಲಸ ಹೊಂದುವ ನಿರೀಕ್ಷೆಯಲ್ಲಿದ್ದರು. ಆದರೆ ಅಂತಹದ್ದೇನೂ ಆಗಿಲ್ಲ. ಕೊನೆಗೆ ಶಿಕ್ಷಕಿ ಕೆಲಸಕ್ಕೆ ಸೇರಿಕೊಂಡ ಅವರು ರಾತ್ರಿಗಳನ್ನು ಸರ್ಕಾರಿ ಪರೀಕ್ಷೆಗೆ ತಯಾರಾಗುವುದರಲ್ಲಿ ಕಳೆಯುತ್ತಿದ್ದಾರೆ.













