ಝೂನು ಆನಂದದಿಂದ ತಾಳೆಗರಿಗಳನ್ನು ಜಗಿಯುತ್ತಿದ್ದಾಳೆ. ಈ ಗರಿಗಳು ಮನೆಯಲ್ಲಿ ಸಾಕಲಾಗಿರುವ ಈ ಆಡಿಗೆ ಹಾಕಲಾಗಿರುವ ಮೇವಲ್ಲ, ಆದರೆ ಅದು ಆಗಾಗ ಬಂದು ರುಚಿಯಾದ ತಿಂಡಿಯೆಂಬಂತೆ ಇವನ್ನು ಜಗಿಯುತ್ತದೆ.
ಈ ದೊಡ್ಡ ಗರಿಗಳಿಂದ ಟೊಪ್ಪಿಯನ್ನು ತಯಾರಿಸುತ್ತಿರುವ ಕಲ್ಯಾಣಿ ಪಾತ್ರಾರಿಗೆ, ಆಡು ಆಗಾಗ ಬಂದು ಗರಿಗಳನ್ನು ತಿನ್ನುವುದರಿಂದ ಕಿರಿಕಿರಿಯಾಗುತ್ತದೆ. ನುರಿತ ಕುಶಲಕರ್ಮಿಯಾಗಿರುವ ಕಲ್ಯಾಣಿಯವರು ಝೂನುವಿನ ತಲೆಗೆ ಮೆಲ್ಲಗೆ ತಟ್ಟಿ, ಕಚ್ಚಾ ವಸ್ತುಗಳಿಗೆ ಬಾಯಿ ಹಾಕದಂತೆ ತಡೆಯುತ್ತಾರೆ.
ಸಮಸ್ಯೆಯೆಂದರೆ ಈ ತಾಳೆ ಮರಗಳು [ಬೊರಾಸಸ್ ಫ್ಲಾಬೆಲ್ಲಿಫರ್] ಸುಮಾರು 30 ಮೀಟರ್ ಎತ್ತರ ಬೆಳೆದಿರುವ ಮರಗಳು. “ತಾಳೆಗರಿಗಳನ್ನು ಕೀಳುವುದು ತುಂಬಾ ಕಷ್ಟದ ಕೆಲಸ. ಇದು ಪಶ್ಚಿಮ ಬಂಗಾಳದಲ್ಲಿ ಬೆಳೆಯುವ ಅತ್ಯಂತ ಎತ್ತರದ ಮರಗಳಲ್ಲಿ ಒಂದು. ಇಲ್ಲಿ ತುಂಬಾ ಮರಗಳಿವೆ, ಆದರೆ ಅವುಗಳಿಗೆ ಹತ್ತುವ ಕೌಶಲ ಇಲ್ಲದಾಗಿದೆ,” ಎಂದು 50 ವರ್ಷ ಪ್ರಾಯದ ಕಲ್ಯಾಣಿ ಹೇಳುತ್ತಾರೆ.
ಇವರ ನೆರಮನೆಯವರಾದ ಛಾಯಾ ಪ್ರಾಮಾಣಿಕ್ ಟೊಪ್ಪಿ ತಯಾರಿಸುವ ಇನ್ನೊರ್ವ ಅನುಭವಿ ಕುಶಲಕರ್ಮಿ. “ಹಿಂದೆಲ್ಲಾ ಮನೆಯ ಗಂಡಸರು ಗರಿಗಳನ್ನು ತರುತ್ತಿದ್ದರು. ಈಗಿನ ಸಣ್ಣ ಹುಡುಗರಿಗೆ ಮರ ಹತ್ತಲು ಬರೋದಿಲ್ಲ. ಅಲ್ಲದೇ ಮರ ಹತ್ತಲು ಈಗ ಯಾರಲ್ಲಿ ಸಮಯ ಇದೆ?” ಎಂದು ಛಾಯಾ ಕೇಳುತ್ತಾರೆ.
ಕಲ್ಯಾಣಿ ಮತ್ತು ಛಾಯಾ ಅಖುಡಿಯವರು ಡೋಮ್ ಸಮುದಾಯದವರು. ಅನೇಕ ತಲೆಮಾರುಗಳಿಂದ ಇವರು ತಾಳೆಗರಿಗಳ ಟೊಪ್ಪಿ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. "ನಮ್ಮ ಈ ಪ್ರದೇಶ ತಾಳೆಗರಿ ಮತ್ತು ಬಿದಿರಿನ ವಸ್ತುಗಳನ್ನು ತಯಾರಿಸುವುದಕ್ಕೆ ಹೆಸರುವಾಸಿ. ಹಿಂದೆ ನಮ್ಮ ಸಮುದಾಯದಲ್ಲಿ ಮದುವೆಗಳಾದಾಗ, ಗಂಡು ಮತ್ತು ಹೆಣ್ಣಿಗೆ ಬಿದಿರಿನ ಕೆಲಸ ಮಾಡಲು ಬರುವುದು ಒಂದು ದೊಡ್ಡ ಸದ್ಗುಣ ಎಂದು ನಂಬಲಾಗುತ್ತಿತ್ತು," ಎಂದು ಕಲ್ಯಾಣಿ ತಮ್ಮ ಕೈಗಳನ್ನು ನಿರಂತರವಾಗಿ ಆಡಿಸುತ್ತಾ ಹೇಳುತ್ತಾರೆ. ಸದ್ಯ ಈ ಕರಕುಶಲ ಕೆಲಸನ್ನು ಹೆಚ್ಚಾಗಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಡೋಮ್ ಸಮುದಾಯದ ಮಹಿಳೆಯರು ಮಾಡುತ್ತಾರೆ ಎಂದು ಇವರು ಹೇಳುತ್ತಾರೆ. ಇವರು ತಾಳೆಗರಿಗಳು ಮತ್ತು ಬಿದಿರಿನಿಂದ ಟೋಪಿಗಳು, ಬೀಸಣಿಗೆಗಳು ಮತ್ತು ಇತರ ಸಾಧನಗಳನ್ನು ತಯಾರಿಸುತ್ತಾರೆ.


























