ಖುಮನಿಯಾ ಆದಿವಾಸಿಯವರು ಖಫಾರ್ ಗ್ರಾಮದ ಸರಪಂಚ್. ಅದು ದಾಖಲೆಗಳ ಪ್ರಕಾರ ನಿಜವೂ ಹೌದು.
ಆದರೆ ಅವರು ಹೇಳುವಂತೆ “ಕೋಯಿ ನಾಮ್-ಮಾತ್ರ ಕಾ ಸರ್ಪಂಚ್ ಭಿ ನಹೀ ಸಮಜ್ತಾ ಇಸ್ ಗಾಂವ್ ಮೇ [ಈ ಊರಿನ ಜನರು ನನ್ನನ್ನು ಹೆಸರಿಗೂ ಸರ್ಪಂಚ್ ಎಂದು ಒಪ್ಪಿಕೊಳ್ಳುವುದಿಲ್ಲ].”
ಖುಮನಿಯಾ ಅವರು 2022ರ ಜೂನ್ 14ರಂದು ಸರ್ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾದರು. ಈ 58 ವರ್ಷದ ಸಹರಿಯಾಆದಿವಾಸಿ ಮಹಿಳೆ ಮಧ್ಯಪ್ರದೇಶ ರಾಜ್ಯದಲ್ಲಿನ ತನ್ನ ಗ್ರಾಮವಾದ ಕಫಾರಿಯಾದ ಪಂಚಾಯತ್ ಆಡಳಿತ ಕಚೇರಿಗೆ ತನ್ನನ್ನು ಹೇಗೆ ಕರೆಯಿಸಲಾಯಿತು ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಅಲ್ಲಿಗೆ ಹೋಗಿದ್ದು ಅದೇ ಮೊದಲು ಮತ್ತು ಕೊನೆ.
“ಅಲ್ಲಿಗೆ ನನ್ನನ್ನು ಒಮ್ಮೆ ಮಾತ್ರ ಕರೆಸಲಾಯಿತು” ಎನ್ನುತ್ತಾರೆ ಖುಮಾನಿಯ. ಅಂದು ಅವರಿಗೆ ಪಂಚಾಯತ್ ಕಚೇರಿಯಲ್ಲಿ ಒಂದು ಪ್ರಮಾಣಪತ್ರವನ್ನು ನೀಡಲಾಯಿತು. ಆ ಪತ್ರದಲ್ಲಿ ಅವರು ಸರಪಂಚ್ (ಗ್ರಾಮದಮುಖ್ಯಸ್ಥ) ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಎಂದು ಬರೆಯಲಾಗಿತ್ತು. ಶಾಲೆಯ ಮೆಟ್ಟಿಲನ್ನೇ ಹತ್ತದ ಅವರ ಪಾಲಿಗೆ ಅದೊಂದು ಕಾಗದದ ತುಣುಕು ಮಾತ್ರ, ಅದರಲ್ಲಿ ಬರೆದಿರುವುದನ್ನು ಅವರಿಗೆ ಬೇರೆಯವರು ಓದಿ ಹೇಳಬೇಕಿತ್ತು.
“ಹಮಾಯಿ ಪಂಚಾಯತ್ ಮೇ ಆದಿವಾಸಿ ಸೀಟ್ ಆಯೀ ಹಾತಿ. ತೋ ಗಾಂವೋ ಕೇ ಬಡೇ ಲೋಗನ್ ನೇ ಹಮಾವೋ ನಾಮ್ ದೇ ದಾವೋ [ಈ ಬಾರಿಯ ಪಂಚಾಯತ್ ಮೀಸಲಾತಿ ಆದಿವಾಸಿ ಸಮುದಾಯಕ್ಕೆ ಬಂದಿತ್ತು. ಊರಿನ ದೊಡ್ಡ ಮನುಷ್ಯರೆಲ್ಲ ಸೇರಿ ಅದಕ್ಕೆ ನನ್ನನ್ನು ನಾಮನಿರ್ದೇಶನ ಮಾಡಿದರು]. ನನ್ನ ಎದುರು ಯಾರೂ ನಿಂತಿರಲಿಲ್ಲ” ಎಂದು ಖುಮಾನಿಯಾ ತಮ್ಮ ಸ್ಥಳೀಯ ಭಾಷೆಯಾದ ಬುಂದೇಲಖಂಡಿ ಭಾಷೆಯಲ್ಲಿ ತಿಳಿಸಿದರು.







