ವರ್ಷದ ಏಕೈಕ ಭತ್ತದ ಬೆಳೆಯು ಜಮೀನಿನಲ್ಲಿ ಕಟಾವಿಗೆ ಸಿದ್ಧವಾಗಿದೆ. ಇದು ಅಕ್ಟೋಬರ್ ತಿಂಗಳ ಅಂತ್ಯ. ಜನರು ಜಮೀನುಗಳ ಉತ್ಪನ್ನವನ್ನು ಮನೆಗೆ ತರಲು ಆರಂಭಿಸಿದ್ದಾರೆ. ಬಹಳ ಕಾಲದ ನಂತರ, ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯ ಪಾರ್ಕಿಡೀಹ್ ಹಳ್ಳಿಯ ಬಡ ಸಂತಾಲ್ ಬುಡಕಟ್ಟಿನ ಮನೆಗಳಲ್ಲಿ ಧಾನ್ಯದ ಹೆಚ್ಚಳವನ್ನು ಕಾಣಬಹುದಾಗಿದೆ.
ಜಮೀನಿನಲ್ಲಿನ ಅಲ್ಪಕಾಲದವರೆಗಿನ ಆದರೆ ಸಾಕಷ್ಟು ಪ್ರಯಾಸದ ಋತುಮಾನದ ನಂತರ, ಪಾರ್ಕಿಡೀಹ್ನ ನಾನ್ನೂರು ಯುವಜನರು, ಹೆತ್ತವರು, ಅಜ್ಜ-ಅಜ್ಜಿಯರಿಗೆ ಈಗ ವಿಶ್ರಾಂತಿಗೆ ಹೆಚ್ಚಿನ ಸಮಯ ದೊರೆತಿದೆ. ಚಳಿಗಾಲದ ಆಗಮನವಾಗುತ್ತಿದೆ. ಛೋಟಾ ನಾಗ್ಪುರ್ ಪ್ರಸ್ಥಭೂಮಿಯಲ್ಲಿನ ಗಜಬುರು ಬೆಟ್ಟಗಳ ಕಾಡಿನ ಬಳಿಯ ಮರಗಳು ಬಣ್ಣವನ್ನು ಬದಲಿಸುತ್ತಿವೆ. ಉತ್ತರದಿಂದ ಬೀಸುವ ತಂಗಾಳಿಯು ಕ್ರಮೇಣ ಬಿಸಿಲಿನ ತಾಪವನ್ನು ಕಡಿಮೆಮಾಡುತ್ತಿದೆ.
ಆದರೆ ವಿಶ್ರಾಂತಿಯ ಅವಧಿಯು ಅಲ್ಪಕಾಲೀನ; ಇದು ಸಂತಾಲರು ತಮ್ಮ ಜಾನುವಾರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವ ಹಬ್ಬದ ಸಮಯ. ಪ್ರಪಂಚದ ಈ ಭಾಗದಲ್ಲಿ ಹಸುವು ಈಗಲೂ ಕೃಷಿಯ ಬೆನ್ನೆಲುಬು. ಟ್ರ್ಯಾಕ್ಟರ್ಗಳು ಇನ್ನೂ ಈ ವಿಧೇಯ ಗೋವು ಅಥವಾ ಹಸುವನ್ನು ಸ್ಥಾನಪಲ್ಲಟಗೊಳಿಸಿರುವುದಿಲ್ಲ.
ಇದು ಕೊಯ್ಲಿನ ನಂತರದ ಗೋ-ಬ್ನಾದ್ನ ಎಂದು ಕರೆಯಲ್ಪಡುವ ಆಚರಣೆ ಅಥವಾ ಗೋವಿನ ಹಬ್ಬ. ಇದು ದೀಪಾವಳಿಯ ಸಮಯವೂ ಹೌದು. (ಬಂಗಾಳಿಯಲ್ಲಿ ʼಗೋʼ ಅಂದರೆ ಹಸು ಮತ್ತು ಬ್ನಾದ್ನಾ ಎಂದರೆ ಆರಾಧನೆ.) ಈ ಸಮಯದಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ತಿಂಡಿ-ತಿನಿಸು ಹಾಗೂ ಆಟೋಟಗಳನ್ನು ಕಾಣಬಹುದು.
ಕೆಲವು ಹಳ್ಳಿಗರು ಗೋಡೆಯ ಚಿತ್ರಕಲೆಗೆ ತಾವು ಬಳಸುವ ಹಲವಾರು ಬಣ್ಣಗಳಿಗೆ ಹತ್ತಿರದ ಗಜಬುರು ಮತ್ತು ಧೋಲ್ಬುರು ಬೆಟ್ಟಗಳಲ್ಲಿನ ಕಲ್ಲುಗಳು ಮತ್ತು ಮಣ್ಣಿನ ಸಂಗ್ರಹಣೆಯಲ್ಲಿ ಮಗ್ನರಾಗಿರುತ್ತಾರೆ. ಕೆಲವರು ಮತ್ತಷ್ಟು ಮುಂದಕ್ಕೆ ಪ್ರಯಾಣಿಸಿ, ತಮ್ಮ ಅಂಗಳಕ್ಕೆ ಬಳಿಯುವ ಬಿಳಿಯ ಬಣ್ಣದ ತಯಾರಿಸಲು ಬಳಸುವ ಪ್ರಮುಖ ಸಾಮಗ್ರಿಯೆನಿಸಿದ ಘೋಂಗ್ ಬಳ್ಳಿಯನ್ನು ಸಂಗ್ರಹಿಸುತ್ತಾರೆ.
ʼಪೊಲಿ ಮತಿರ್ ನಕ್ಷʼ (ನದಿಯ ಹೂಳಿನಿಂದ ರೂಪಿಸುವ ಚಿತ್ತಾರ) ಎಂಬುದು ಚಿತ್ರಕಲೆಯ ಒಂದು ಶೈಲಿ. ಪಾರ್ಕಿಡೀಹ್ನಲ್ಲಿನ ಕುಂಬಾರರು ಅಥವಾ ಕುಂಭಕರ್ಗಳ ಪರಿವಾರವೊಂದರ ಸದಸ್ಯರು ಇದರಲ್ಲಿ ಪರಿಣತರು. ವಿಶೇಷವಾಗಿ ತಯಾರಿಸಲ್ಪಟ್ಟ ಜೇಡಿಮಣ್ಣನ್ನು ಅವರು ಹಳ್ಳಿಯ ಇತರರಿಗೂ ಸರಬರಾಜುಮಾಡುತ್ತಾರೆ. ಕುಂಭಕರ್ಗಳು ಈ ಹಬ್ಬದ ಅವಿಭಾಜ್ಯ ಅಂಗವೆನಿಸಿದ್ದಾರೆ.
ಹಬ್ಬದ ತಯಾರಿಯ ನಿಟ್ಟಿನಲ್ಲಿ, ಗೋಪಾಲಕರು ಕಾಡುಗಳಲ್ಲಿದ್ದುಕೊಂಡು, ಹಳ್ಳಿಯ ಗೋವುಗಳೆಲ್ಲವನ್ನೂ ತೊಳೆಯುತ್ತಾರೆ. ಜಾನುವಾರುಗಳು ಈ ವಿಶೇಷ ಸ್ನಾನವನ್ನು ಆನಂದಿಸುತ್ತವೆ. ಇದೇ ಸಮಯದಲ್ಲಿ, ಕೆಲವು ಹಳ್ಳಿಗರು ಹತ್ತಿರದ ಕೊಳಗಳಲ್ಲಿ ತಮ್ಮ ನೇಗಿಲುಗಳು ಮತ್ತು ಕೃಷಿಯ ಇತರ ಉಪಕರಣಗಳನ್ನು ತೊಳೆಯುವುದರಲ್ಲಿ ನಿರತರಾಗಿರುತ್ತಾರೆ.
ಸುಮಾರು 65ರ ಭಾಗು ಮುಡಿ, ಹಳ್ಳಿಯ ಅನುಭವಿ ಸಂಗೀತಗಾರನಷ್ಟೇ ಅಲ್ಲದೆ, ಚರ್ಮದ ಕೆಲಸದಲ್ಲಿಯೂ ನಿಪುಣರು. ಸಾಮಾನ್ಯವಾಗಿ, ಬಂಗಾಳದಲ್ಲಿ, ಈ ಕೆಲಸವನ್ನು ಡೋಮ್ ಸಮುದಾಯದವರು ಮಾಡುತ್ತಾರೆ. ಮುಡಿ, ತನ್ನ ಢೋಲ್ (ಡ್ರಂ) ಮತ್ತು ಮಡೋಲ್ (ಪ್ರತಿಯೊಂದು ಸಂತಾಲ್ ಮನೆಯ ಭಾಗವಾಗಿರುವ ಕೈ ಢೋಲಿನ ಲಯವನ್ನು ಕಾಯ್ದುಕೊಳ್ಳುವ) ಹಾಗೂ ಇತರೆ ವಾದ್ಯಗಳ ಚರ್ಮದ ಭಾಗಗಳನ್ನು ದುರಸ್ತಿಗೊಳಿಸುತ್ತಾರೆ. ಹಬ್ಬಗಳಲ್ಲಿ ಢೋಲ್ ಅನ್ನು ಬಾರಿಸಲು ಇವರು ಪಾರ್ಕಿಡೀಹ್ ಯುವಜನರಿಗೆ ತರಬೇತಿ ನೀಡುತ್ತಾರೆ. ಗೋ-ಬ್ನಾದ್ನಾದ ಮೊದಲ ರಾತ್ರಿ, ಹಳ್ಳಿಯಲ್ಲಿನ ಹಸುಗಳ ಪ್ರತಿಯೊಂದು ಕೊಟ್ಟಿಗೆಗೆ ತಮ್ಮ ತಂಡವನ್ನು ಕರೆದೊಯ್ದು ಗೋ-ಜಗಾನಿಯ ಹಾಡುಗಳನ್ನು ಹಾಡಿಸುವುದು ಇವರ ಕೆಲಸ. ಈ ಹಾಡಿನಿಂದಾಗಿ ದನಗಳು ರಾತ್ರಿಯೆಲ್ಲ ಎಚ್ಚರವಾಗಿರುತ್ತವೆ. ಅಲ್ಲದೆ, ಈ ಹಾಡುಗಳು ದನಗಳನ್ನು ರಾತ್ರಿಯ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆಂಬುದು ಹಳ್ಳಿಗರ ನಂಬಿಕೆ.
ಭಾರತದ ವಿವಿಧ ಭಾಗಗಳಲ್ಲಿ ಕೆಲಸಮಾಡುತ್ತಿರುವ ಸಂಬಂಧಿಕರು ಮತ್ತು ಕಾರ್ಮಿಕರು ಈ ಹಬ್ಬದಲ್ಲಿ ಭಾಗವಹಿಸಲು ತಮ್ಮ ಹಳ್ಳಿ, ಪಾರ್ಕಿಡೀಹ್ಗೆ ಹಿಂದಿರುಗುತ್ತಾರೆ. ಮೊಹುಲ್ ಮರದ ಹೂವುಗಳಿಂದ ಸ್ಥಳೀಯ ಮದ್ಯವನ್ನು ತಯಾರಿಸುವ ಏಕಮಾತ್ರ ಕುಟುಂಬದ ಸದಸ್ಯರು ಹಗಲುರಾತ್ರಿಯೆನ್ನದೆ ಕೆಲಸದಲ್ಲಿ ತೊಡಗಿರುತ್ತಾರೆ.
2014ರಲ್ಲಿ, ನಾನು ಹಳ್ಳಿಗೆ ಭೇಟಿಯಿತ್ತಾಗ, ಈ ಪ್ರದೇಶದಲ್ಲಿ ತೀವ್ರವಾದಿ ಮಾಮೋವಾದಿಗಳ ಉಪಸ್ಥಿತಿಯು ಕಡಿಮೆಯಿದ್ದು, ಅರೆಸೈನಿಕ ಪಡೆಗಳಿರಲಿಲ್ಲ. ಅಲ್ಲದೆ, ಸಾಕಷ್ಟು ಮಳೆಯಾಗಿತ್ತು. ಸ್ವಲ್ಪಮಟ್ಟಿನ ಈ ಸಮೃದ್ಧಿಯಿಂದಾಗಿ, ಹಳ್ಳಿಗರು ಶಾಲಾ ಆವರಣದಲ್ಲಿ ಉತ್ಸವದ ಎರಡನೇ ರಾತ್ರಿ ಚೌ ನೃತ್ಯಗಾರರ ಗುಂಪುಗಳನ್ನು ಕಾಯ್ದಿರಿಸಲು ಸಾಧ್ಯವಾಯಿತು.
ಮಹಿಳೆಯರು ಸಿಪ್ಪೆ/ಹೊಟ್ಟನ್ನು ತೆಗೆಯುವ ಕಾಲೊತ್ತು ಸನ್ನೆ ಅಥವಾ ಧನೇಕಿ(husking pedal)ಗಳಲ್ಲಿ ಮಗ್ನರಾಗಿದ್ದಾರೆ. ಸ್ಥಳೀಯವಾಗಿ ತಯಾರಿಸಲ್ಪಡುವ ಈ ಉಪಕರಣವನ್ನು ಅಕ್ಕಿಯ ಧಾನ್ಯವನ್ನು ಪುಡಿಮಾಡಲು ಬಳಸಲಾಗುತ್ತದೆ. ಹೀಗೆ ದೊರೆಯುವ ಅಕ್ಕಿಯ ಹಿಟ್ಟನ್ನು ಬಣ್ಣಕ್ಕೆ ಹಾಗೂ ಹಬ್ಬಕ್ಕೆಂದು ತಯಾರಿಸುವ ಅನೇಕ ಖಾದ್ಯಗಳಲ್ಲಿನ ಪ್ರಮುಖ ಪದಾರ್ಥವಾಗಿ ಉಪಯೋಗಿಸುತ್ತಾರೆ. ಕೊಳಗಳಲ್ಲಿ ಸ್ನಾನಮಾಡಿಸಿದ ನಂತರ ಹಿಂದಿರುಗುವ ಗೋವುಗಳನ್ನು ಸ್ವಾಗತಿಸಲು ತಮ್ಮ ಅಂಗಳವನ್ನು ಸಿಂಗರಿಸಲಿಕ್ಕಾಗಿ ಪ್ರತಿ ಪರಿವಾರವು ಕನಿಷ್ಟ ನಾಲ್ಕು ಕೆ.ಜಿ.ಯಷ್ಟು ಹಿಟ್ಟನ್ನು ಬಳಸುತ್ತದೆ. ಪುರುಲಿಯ, ಭಾರತದ ಬಡಜಿಲ್ಲೆಗಳಲ್ಲೊಂದು. ಆದಾಗ್ಯೂ, ಈ ಹಬ್ಬವು ಇಡೀ ವರ್ಷದ ದುಃಖ ಮತ್ತು ವೇದನೆಗಳನ್ನು ಮರೆಯುವ ಕಾಲ. ಅಲಂಕಾರಗಳಿಗೆ ಕೆಲವು ಹೆಚ್ಚುವರಿ ಧಾನ್ಯಗಳನ್ನು ಬಳಸುವುದು ಈ ಆಚರಣೆಯ ಭಾಗವೆನಿಸಿದೆ.
ಗೋ-ಬ್ನಾದ್ನಾದ ಮೂರನೆ ಮತ್ತು ಕೊನೆಯ ದಿನ ಯಥೇಚ್ಛ ಮೋಜು-ಮಸ್ತಿ ಮತ್ತು ಆಟೋಟಗಳನ್ನು ಕಾಣಬಹುದು. ಎಲ್ಲ ಆಚರಣೆಗಳು ಸುಮುದಾಯದ ಜಾನುವಾರುಗಳನ್ನು ಅದರಲ್ಲೂ ಮುಖ್ಯವಾಗಿ, ಗೋವುಗಳನ್ನು ಕೇಂದ್ರೀಕರಿಸಿರುತ್ತವೆ. ಹಳ್ಳಿಗರು ತಮ್ಮ ದನಕರುಗಳಿಗೆ ಬಣ್ಣವನ್ನು ಬಳಿದು, ಪೂಜಿಸುತ್ತಾರಲ್ಲದೆ ಭತ್ತದಿಂದ ಅವುಗಳಿಗೆ ಮುಖರಂಬೆ(headgear)ಯನ್ನು ತಯಾರಿಸುತ್ತಾರೆ. ಗೋವುಗಳ ಕೊಟ್ಟಿಗೆಗಳಿಗೂ ಹೊಸ ಬಣ್ಣದ ಲೇಪನವಾಗುತ್ತದೆ.
ಗೋರುಖ್ನುತ ಎಂಬ ಆಟವು ಸಂಜೆಯ ಪ್ರಮುಖ ಕಾರ್ಯಕ್ರಮ. ಮೂವತ್ತೈದರಿಂದ ನಲವತ್ತು ಹಳ್ಳಿಗಳ ಗೋವುಗಳನ್ನು ಹಗ್ಗಗಳಿಂದ ಬಿದಿರಿನ ಕೋಲುಗಳಿಗೆ ಕಟ್ಟುತ್ತಾರೆ. ತಂಡದ ನಾಯಕ, ಭಾಗು ಮುಡಿ, ಡೋಲು ಮತ್ತು ಹಾಡುಗಳೊಂದಿಗೆ ಪ್ರತಿ ಪ್ರಾಣಿಯ ಎದುರಿಗೆ ಸಾಗುತ್ತಾನೆ. ಕೆಲವು ಗೋವುಗಳು ಮೇಲಕ್ಕೆ ಎಗರಿ ಪ್ರತಿಕ್ರಿಯಿಸುತ್ತವೆ, ಉತ್ಸಾಹವು ಹೆಚ್ಚುತ್ತದೆ. ಜನರು ಚಪ್ಪಾಳೆ ತಟ್ಟುತ್ತಾರೆ. ಹಬ್ಬವು ಅಧಿಕೃತವಾಗಿ ಕೊನೆಗೊಳ್ಳುತ್ತದೆ.
ಸಂತಾಲರು ತಮ್ಮ ಗೋವುಗಳನ್ನು ಕೃಷಿಗೆ ಬಳಸುತ್ತಾರೆ. ಕೊಯ್ಲಿನ ಪ್ರಕ್ರಿಯೆಯಲ್ಲಿ ಅವು ವಹಿಸುವ ಪಾತ್ರದಿಂದಾಗಿ, ಪ್ರಾಮಾಣಿಕತೆ ಹಾಗೂ ವಿಶ್ವಾಸದಿಂದ ಅವುಗಳನ್ನು ರಕ್ಷಿಸುತ್ತಾರಲ್ಲದೆ, ಆರಾಧಿಸುತ್ತಾರೆ. ಪ್ರಾಣಿಗಳಿಗೆ ವಯಸ್ಸಾದಾಗ, ಅವುಗಳನ್ನು ತಿನ್ನುವುದರ ವಿರುದ್ಧ ಇವರಲ್ಲಿ ಯಾವುದೇ ನಿಷೇಧವಿಲ್ಲ. ಭಾರತದ ಇತರೆ ಭಾಗಗಳಲ್ಲಿ ಗೋವುಗಳು ಪವಿತ್ರ ಪ್ರಾಣಿಗಳೆಂದು ಪರಿಗಣಿಸಲ್ಪಟ್ಟಿರುವುದೇ ಅಲ್ಲದೆ ಅವು ರಾಜಕಾರಣದ ಸಾಧನಗಳಾಗಿವೆ.














