ಲಾಜೋ ದೇವಿ ಈ ವರದಿಗಾರ ತನ್ನ ಡೈರಿಯಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿರುವುದನ್ನು ಕುತೂಹಲದಿಂದ ನೋಡಿದರು. ಕೆಲವೇ ನಿಮಿಷಗಳಲ್ಲಿ ಆ ಕುತೂಹಲ ಭಯವಾಗಿ ಬದಲಾಯಿತು.
"ಈ ಸಬ್ ಲಿಖ್ ಕೆ ಥಾನವಾ ಮೇ ದೇಬಹು ಕಾ [ಇದೆಲ್ಲವನ್ನೂ ಪೊಲೀಸ್ ಠಾಣೆಗೆ ಕೊಡಲಿದ್ದೀರಾ]?" ಎಂದು ಅವಳು ಮಗಹಿ ಭಾಷೆಯಲ್ಲಿ ಕೇಳಿದರು - ಇದು ಬಿಹಾರದ ಮಗಧ ಪ್ರದೇಶದಲ್ಲಿ ಮಾತನಾಡುವ ಭಾಷೆ. ಅವರು ಮಹುವಾ ಮರದ ಹೂವುಗಳಿಂದ (ಮಧುಕ ಲಾಂಗಿಫೋಲಿಯಾ ವರ್. ಲ್ಯಾಟಿಫೋಲಿಯಾ) ಮಹುವಾ ಮದ್ಯವನ್ನು ತಯಾರಿಸುವುದು - ಅವರಿಗಿರುವ ಏಕೈಕ ಆದಾಯದ ಮೂಲ - ತನ್ನ ಬದುಕನ್ನು ಹೇಗೆ ಕಾಪಾಡುತ್ತಿದೆ ಎನ್ನುವುದರ ಕುರಿತು ನನ್ನೊಂದಿಗೆ ಮಾತನಾಡುತ್ತಿದ್ದರು.
ಆರಂಭದಲ್ಲಿ ಅವರು ಮದ್ಯ ತಯಾರಿಸುತ್ತಿರುವುದನ್ನು ಒಪ್ಪಿಕೊಳ್ಳಲು ಹಿಂಜರಿದಿದ್ದರೂ, ಅವರ ಕಚ್ಚಾ ಮನೆಯ ಮೂಲೆಯಲ್ಲಿ ಎರಡು ಕ್ಯಾನಿಸ್ಟರ್ಗಳಲ್ಲಿ ಕೊಳೆಯುತ್ತಿರುವ ಎಂಟು ಕಿಲೋಗ್ರಾಂ ಬೆಲ್ಲ ಅವರ ಕಾರ್ಯವನ್ನು ಬಯಲಿಗೆಳೆಯಿತು. ಈ ವರದಿಗಾರನ ದೃಷ್ಟಿ ಕ್ಯಾನಿಸ್ಟರ್ಗಳತ್ತ ಸಾಗುತ್ತಿದ್ದಂತೆ, ಅವರು ತಕ್ಷಣ ಅವುಗಳನ್ನು ಕಪ್ಪು ಪಾಲಿಥೀನ್ ಶೀಟ್ ಬಳಸಿ ಮುಚ್ಚಿದರು. "ನಾನು ಇದನ್ನು [ಮದ್ಯವನ್ನು] ಹೋಳಿ ಹಬ್ಬದಲ್ಲಿ ಮಾರಾಟ ಮಾಡಲು ಮಾತ್ರವೇ ತಯಾರಿಸುತ್ತಿದ್ದೇನೆ" ಎಂದು ಅವಳು ಬೇಗಬೇನೆ ವಿವರಿಸಿದರು.
ಲಾಜೋ ದೇವಿ ಮನೆಯಲ್ಲಿ ಮದ್ಯ ತಯಾರಿಸುವ ಬಗ್ಗೆ ಭಯ ಮತ್ತು ಚಿಂತೆ ಹೊಂದಿರುವುದು ಅರ್ಥಮಾಡಿಕೊಳ್ಳಬಹುದಾದದ ವಿಚಾರ. ಬಿಹಾರ ನಿಷೇಧ ಮತ್ತು ಆದಾಯ ತೆರಿಗೆ ಕಾಯಿದೆ, 2016, ಮಹುವಾ ಮದ್ಯ ಸೇರಿದಂತೆ ಮದ್ಯ ಅಥವಾ ಮಾದಕ ದ್ರವ್ಯಗಳ ತಯಾರಿಕೆ, ಸ್ವಾಧೀನ, ವಿತರಣೆ ಅಥವಾ ಸೇವನೆಯನ್ನು ನಿಷೇಧಿಸುತ್ತದೆ. ಇದನ್ನು ಮಾಡಿದರೆ ಶಿಕ್ಷೆಯಾಗಿ ಜೀವಾವಧಿ ಶಿಕ್ಷೆಯವರೆಗೆ ಜೈಲುವಾಸ ಮತ್ತು 1 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದು.






