"ಏ ಕಿಸೆ ಹೋರ್ ನು ಜಿತಾ ರಹೇ ನೆ, ಸಾಡೆ ಆಗ್ಗೆ ಕೋಯಿ ಹೋರ್ ಕುಡಿ ನಹೀ ಸಿ [ಅವರು ಬೇರೆಯವರು ಗೆಲ್ಲುವಂತೆ ಮಾಡುತ್ತಿದ್ದಾರೆ, ನಮ್ಮ ಮುಂದೆ ಬೇರೆ ಯಾವುದೇ ಹುಡುಗಿ ಇರಲಿಲ್ಲ]." ಅಥ್ಲೀಟ್ಗಳಾದ ಜಸ್ಪಾಲ್, ರಮದೀಪ್ ಮತ್ತು ಸ್ನೇಹಿತರು ಒಂದೇ ದನಿಯಲ್ಲಿ ತಮ್ಮ ಕೋಚ್ಗೆ ದೂರು ನೀಡುತ್ತಿದ್ದಾರೆ. ಚಂಡೀಗಢದಲ್ಲಿ ನಡೆಯುತ್ತಿರುವ ಮ್ಯಾರಥಾನ್ನಲ್ಲಿ ಭಾಗವಹಿಸಲು 200 ಕಿಲೋಮೀಟರ್ ಪ್ರಯಾಣಿಸಿ ಬಂದಿರುವ ಅಮೃತ್ಸರ್ ಜಿಲ್ಲೆಯ ಒಂದು ಡಜನ್ ಯುವ ಓಟಗಾರರಲ್ಲಿನ ಉದ್ವಿಗ್ನತೆ ಎದ್ದು ಕಾಣುತ್ತಿತ್ತು.
ಇದೆಲ್ಲವೂ ನಡೆಯುತ್ತಿಂತೆ ಐದು ಕಿಲೋಮೀಟರ್ ಓಟದಲ್ಲಿ ದ್ವಿತೀಯ ಬಹುಮಾನ ಪಡೆದಿರುವ ಜಸ್ಪಾಲ್ ಕೌರ್ ಹೆಸರನ್ನು ವೇದಿಕೆಯಲ್ಲಿ ಕೂಗಲಾಗುತ್ತಿತ್ತು. ಜಸ್ಪಾಲ್ ಅವರಿಗೆ ತಾನು ರನ್ನರ್ ಅಪ್ ಅಲ್ಲ, ವಿಜೇತೆಯೆಂಬುದು ತಿಳಿದಿದೆ, ಏಕೆಂದರೆ ಅವರು ಕೊನೆಯ ಗೆರೆಯವರೆಗೂ ತಲುಪಿದ್ದರು. ಆದರೆ ವಿಜೇತರಿಗೆ ನೀಡಲಾಗುವ 5,000 ರುಪಾಯಿಯ ನಗದು ಬಹುಮಾನವನ್ನು ಬೇರೆಯವರ ಹೆಸರಿಗೆ ಘೋಷಿಸಲಾಗುತ್ತಿದೆ.
ವೇದಿಕೆಗೆ ಹೋಗಿ ಎರಡನೇ ಬಹುಮಾನವನ್ನು ಸ್ವೀಕರಿಸಲು ಜಸ್ಪಾಲ್ ನಿರಾಕರಿಸಿದರು. ಇದರ ಬದಲಿಗೆ ಅವರು ಮತ್ತು ಅವರ ಕೋಚ್ ವೇದಿಕೆಯ ಮೇಲೆ ಮತ್ತು ಕೆಳಗೆ ಓಡಾಡುತ್ತಿದ್ದರು. ಅಲ್ಲಿರುವ ಪ್ರತಿಯೊಬ್ಬರ ಬಳಿ ಹೋಗಿ ಸಂಘಟಕರ ನಿರ್ಧಾರವನ್ನು ಪ್ರಶ್ನಿಸುತ್ತಿದ್ದರು, ಅವರ ಕಥೆಯನ್ನು ವಿವರಿಸುತ್ತಿದ್ದರು ಮತ್ತು ತಮಗಾದ ಅನ್ಯಾಯವನ್ನು ಪರಿಹರಿಸಲು ನೆರವನ್ನು ಕೋರುತ್ತಿದ್ದರು. ಕೊನೆಯಲ್ಲಿ ಕೋಚ್ನ ಬೇಡಿಕೆಯ ಮೇರೆಗೆ ಜಸ್ಪಾಲ್ ದ್ವಿತೀಯ ಬಹುಮಾನವನ್ನು ಸ್ವೀಕರಿಸುತ್ತಾರೆ, 3,100 ರುಪಾಯಿ ಎಂದು ಬರೆಯಲಾಗಿದ್ದ ಒಂದು ದೊಡ್ಡ ಫೋಮ್ ಬೋರ್ಡ್ ಚೆಕ್ ತೆಗೆದುಕೊಳ್ಳುತ್ತಾರೆ.
ಒಂದು ತಿಂಗಳ ನಂತರ, ಅಂದರೆ 2023ರ ಏಪ್ರಿಲ್ ತಿಂಗಳಲ್ಲಿ ಅಚ್ಚರಿಯೆಂಬಂತೆ ಜಸ್ಪಾಲ್ ಅವರ ಬ್ಯಾಂಕ್ ಖಾತೆಗೆ 5 ಸಾವಿರ ರುಪಾಯಿ ಜಮೆಯಾಗಿತ್ತು. ಈ ಬಗ್ಗೆ ಜಸ್ಪಾಲ್ರವರಿಗೆ ಏನನ್ನೂ ಹೇಳಲಾಗಿರಲಿಲ್ಲ ಮತ್ತು ಯಾವುದೇ ಸ್ಥಳೀಯ ಪತ್ರಿಕೆಗಳೂ ಈ ಕುರಿತು ವರದಿ ಮಾಡಿರಲಿಲ್ಲ. ರುನಿಝೆನ್ ಟೈಮಿಂಗ್ ಸಿಸ್ಟಮ್ಸ್ನ ಫಲಿತಾಂಶದ ವೆಬ್ಸೈಟ್ನಲ್ಲಿ ಅವರ ಹೆಸರನ್ನು 23.07 ನಿಮಿಷಗಳ ಗನ್ಟೈಮ್ (ರೇಸ್ ಸಮಯ) ನೊಂದಿಗೆ 5-ಕಿಲೋಮೀಟರ್ ಓಟದ ಲೀಡರ್ಬೋರ್ಡ್ನಲ್ಲಿ ವಿಜೇತೆ ಎಂದು ಪ್ರಕಟಿಸಲಾಗಿತ್ತು. ಆದರೆ ಆ ವರ್ಷದ ಬಹುಮಾನ ವಿತರಣೆ ಮಾಡುವ ಫೋಟೋಗಳಲ್ಲಿ ಇವರು ಇರಲಿಲ್ಲ. ಜಸ್ಪಾಲ್ ಮಾತ್ರ ಪದಕಗಳೊಂದಿಗೆ ಆ ದೈತ್ಯಾಕಾರದ ಚೆಕ್ಕನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದಾರೆ.
2024ರಲ್ಲಿ ಮುಂದೆ ನಡೆಯಲಿರುವ ಮ್ಯಾರಥಾನ್ಗೆ ಹುಡುಗಿಯರನ್ನು ಸಿದ್ಧಗೊಳಿಸಲಾಗುತ್ತಿತ್ತು. ವೀಡಿಯೊವನ್ನು ಪರಿಶೀಲನೆ ನಡೆಸಿ ಆ ವರ್ಷದ ಓಟದಲ್ಲಿ ಜಸ್ಪಾಲ್ರವರ ಪ್ರತಿಸ್ಪರ್ಧಿಯನ್ನು ಅವರು ಅನರ್ಹಗೊಳಿಸಿರುವ ವಿಚಾರ ಸಂಘಟಕರಿಂದ ಈ ವರದಿಗಾರರಿಗೆ ತಿಳಿಯಿತು. ಪ್ರತಿಭಟಿಸುವ ಹುಡುಗಿಯರೇ ಸರಿ ಎಂಬುದು ಅವರಿಗೆ ಮನವರಿಕೆಯಾಗಿದೆ. ರೇಸ್ ಬಿಬ್ನಲ್ಲಿ ಕೆಲ ಮೋಸದಾಟಗಳು ನಡೆದಿವೆ. ಇದು ಜಸ್ಪಾಲ್ರವರಿಗೆ ಬಂದಿರುವ ನಗದು ಬಹುಮಾನದ ಹಿಂದಿನ ಮರ್ಮವನ್ನು ತಿಳಿಸುತ್ತದೆ.
ಜಸ್ಪಾಲ್ ಅವರಿಗೆ ಬಹುಮಾನದಲ್ಲಿ ಬರುವ ಹಣ ತುಂಬಾ ಮುಖ್ಯ. ಹಣವನ್ನು ಉಳಿಸಿದರೆ ಮಾತ್ರ ಮತ್ತೆ ಕಾಲೇಜಿಗೆ ಹೋಗಬಹುದು. ಜಸ್ಪಾಲ್ ಎರಡು ವರ್ಷಗಳ ಹಿಂದೆ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಆನ್ಲೈನ್ ಬಿಎ (ಆರ್ಟ್ಸ್) ಕೋರ್ಸಿಗೆ ಸೇರಿಕೊಂಡಿದ್ದರು. "ಆದರೆ ಮೊದಲ ಸೆಮಿಸ್ಟರ್ ನಂತರ ಓದನ್ನು ಮುಂದುವರಿಯಲು ಸಾಧ್ಯವಾಗಲಿಲ್ಲ," ಎಂದು ಅವರು ಹೇಳುತ್ತಾರೆ. “ನಾನು ಪರೀಕ್ಷೆ ಬರೆಯಬೇಕಾದರೆ ಪ್ರತಿ ಸೆಮಿಸ್ಟರ್ಗೆ ಸುಮಾರು 15,000 ರೂಪಾಯಿಗಳನ್ನು ಕೊಡಬೇಕಾಗಿತ್ತು. ಮೊದಲ ಸೆಮಿಸ್ಟರ್ನಲ್ಲಿ ನಾನು ಪ್ರಶಸ್ತಿಯಿಂದ ಬಂದ ಹಣದಲ್ಲಿ [ಗ್ರಾಮದ ಜನಪ್ರತಿನಿಧಿಗಳು ಮತ್ತು ರಾಷ್ಟ್ರೀಯ ವಿಜೇತರ ಶಾಲೆ ಕೊಟ್ಟಿದ್ದ] ಫೀಸನ್ನು ಪಾವತಿಸಿದೆ. ಆದರೆ ಆ ನಂತರ ನನ್ನಲ್ಲಿ ಹಣವಿಲ್ಲದೆ ಮತ್ತೊಂದು ಸೆಮಿಸ್ಟರನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳುತ್ತಾರೆ.
22 ವರ್ಷ ಹರೆಯ ಜಸ್ಪಾಲ್ ತಮ್ಮ ಇಡೀ ಕುಟುಂಬದಲ್ಲೇ ಕಾಲೇಜಿಗೆ ಹೋಗುವ ಮೊದಲ ತಲೆಮಾರಿನವರು. ಪಂಜಾಬ್ನಲ್ಲಿ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಎಂದು ಪರಿಗಣಿಸಲ್ಪಟ್ಟಿರುವ ಮಜಾಬಿ ಸಿಖ್ ಸಮುದಾಯಕ್ಕೆ ಸೇರಿದವರು. ಕಾಲೇಜಿಗೆ ಹೋಗುವ ತಮ್ಮ ಹಳ್ಳಿಯ ಕೆಲವೇ ಕೆಲವು ಮಜಾಬಿ ಮಹಿಳೆಯರಲ್ಲಿ ಇವರೂ ಒಬ್ಬರು. ಜಸ್ಪಾಲ್ ಅವರ ತಾಯಿ, 47 ವರ್ಷ ಪ್ರಾಯದ ಬಲ್ಜಿಂದರ್ ಕೌರ್ 5 ನೇ ತರಗತಿಯವರೆಗೆ ಓದಿದ್ದಾರೆ. ಇವರ ತಂದೆ 50 ವರ್ಷ ಪ್ರಾಯದ ಬಾಲ್ಕರ್ ಸಿಂಗ್ ಶಾಲೆಯ ಮುಖವನ್ನೇ ನೋಡಿಲ್ಲ. ಜಸ್ಪಾಲ್ ಅವರ ಅಣ್ಣ, 24 ವರ್ಷ ಪ್ರಾಯದ ಅಮೃತಪಾಲ್ ಸಿಂಗ್ 12 ನೇ ತರಗತಿಯ ನಂತರ ಓದನ್ನು ಬಿಟ್ಟು ತಮ್ಮ ಹಳ್ಳಿ ಕೊಹಾಲಿಯ ಸುತ್ತಮುತ್ತ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ. ಇವರ ತಮ್ಮ, 17 ವರ್ಷ ಪ್ರಾಯದ ಆಕಾಶದೀಪ್ ಸಿಂಗ್ 12 ನೇ ತರಗತಿಯನ್ನು ಮುಗಿಸಿದ್ದಾನೆ.


















