"ಆಗಷ್ಟೇ 12ನೇ ತರಗತಿಯ ಸ್ಟೇಟ್ ಬೋರ್ಡ್ ಪರೀಕ್ಷೆಯನ್ನು ಬರೆದು ಮುಗಿಸಿದ್ದೆ. ಜೂನ್ ತಿಂಗಳಿಗೆ ಕಲಾ ವಿಭಾಗದ ಫಲಿತಾಂಶ ಹೊರಬೀಳುವುದಿತ್ತು. ಮುಂದೆ ಏನು ಮಾಡಬೇಕು ಎನ್ನುವುದರ ಕುರಿತು ನನಗೂ ಸ್ಪಷ್ಟತೆ ಇದ್ದಿರಲಿಲ್ಲ. ಆದರೆ ದೊಡ್ಡ ಕಾಲೇಜಿಗೆ ಸೇರಿ ಪದವಿ ಪಡೆಯುವ ಆಸೆಯಂತೂ ಇತ್ತು" ಎಂದು ಸಂಕೇತ್ ಲೋಖಂಡೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಹೇಳುತ್ತಾರೆ. ಅದು 2021ರ ಸಮಯ, ಆಗ 18 ವರ್ಷದ ಉಳಿದ ಯುವಕರಂತೆ ಅವರಲ್ಲೂ ಅತೀವ ಉತ್ಸಾಹವಿತ್ತು. ಆದರೆ ಈಗ ಮಾತನಾಡುತ್ತಾ ನಿಟ್ಟುಸಿರು ಬಿಡುತ್ತಾರೆ, ಆ ನಿಟ್ಟುಸಿರೇ ಅವರನ್ನು ಹೈರಾಣಾಗಿಸುತ್ತಿತ್ತು. ಅಂಗಳದಲ್ಲಿರುವ ಹೆಣೆದ ಮಂಚದ ಮೇಲೆ ಮೊಣಕಾಲಿಗೆ ಮೊಣಕೈ ಊರಿ ಕುಳಿತಿರುವ ಅವರ ದೇಹದಲ್ಲಿ ವಿಪರೀತ ಆಯಾಸ ಎದ್ದು ಕಾಣುತ್ತಿತ್ತು. ಈ ವಾರದ ಡಯಾಲಿಸಿಸ್ ಚಿಕಿತ್ಸೆ ಮುಗಿದು ಕೇವಲ ನಾಲ್ಕು ದಿನಗಳಷ್ಟೇ ಆಗಿವೆ.
"ಬೋರ್ಡ್ ಪರೀಕ್ಷೆ ಮುಗಿದ ಕೆಲವು ವಾರಗಳ ನಂತರ ಉಸಿರಾಟದ ತೊಂದರೆ ಶುರುವಾಯಿತು. ನಾಲ್ಕೈದು ಹೆಜ್ಜೆ ನಡೆದರೂ ವಿಪರೀತ ಸುಸ್ತಾಗುತ್ತಿತ್ತು," ಎಂದು ಅವರು ಹೇಳುತ್ತಾರೆ. ಮಗನಿಗೆ ಉತ್ತಮ ಚಿಕಿತ್ಸೆ ಸಿಗಲಿ ಎನ್ನುವ ಆಸೆಯಿಂದ ಅವರ ಪೋಷಕರು ತಮ್ಮ ಗ್ರಾಮವಾದ ನಿಮಗಾಂವ್ ಭೋಗಿಯಿಂದ ಸುಮಾರು 64 ಕಿಲೋಮೀಟರ್ ದೂರದಲ್ಲಿರುವ ಅಹಲ್ಯಾನಗರದ (ಹಿಂದಿನ ಅಹಮದ್ನಗರ) ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಸಂಕೇತ್ ಅವರ ಫಲಿತಾಂಶ ಹೊರಬರುವಷ್ಟರಲ್ಲಿ, ಅವರ ಎರಡು ಕಿಡ್ನಿಗಳು ಸಂಪೂರ್ಣ ವೈಫಲ್ಯಗೊಂಡಿದ್ದವು ಮತ್ತು ಅವರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
"ನಮ್ಮ ಮಗನ ಕಾಯಿಲೆಗೆ ನಾವು ಕುಡಿಯುವ ನೀರೇ ಕಾರಣವಾಗಿರಬಹುದು ಎಂದು ವೈದ್ಯರು ಹೇಳಿದರು. ನಾವೆಲ್ಲರೂ ಕೆರೆಯ ನೀರನ್ನೇ ಕುಡಿಯುತ್ತಿದ್ದೆವು, ಅದು ಕಲುಷಿತಗೊಂಡಿರಬೇಕು. ನಮ್ಮ ಮಗನಿಗೆ ಹುಷಾರಿಲ್ಲದಂತಾಗುವವರೆಗೂ ನಮಗೆ ಈ ವಿಷಯ ತಿಳಿಯಲೇ ಇಲ್ಲ" ಎನ್ನುತ್ತಾರೆ ಸಂಕೇತ್ ಅವರ ತಾಯಿ 47 ವರ್ಷದ ಮನಿಷಾ.
ಅವರು ಅರ್ಧ ಶತಮಾನದ ಹಿಂದೆ ನೈಸರ್ಗಿಕ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾದ ಕೃತಕ ಮಣ್ಣಿನ ನೀರು ಕೊಯ್ಲು ರಚನೆಯಾದ 'ಪಾಜರ್ ತಲಾವ್'ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಳ್ಳಿಯ 330 ಕುಟುಂಬಗಳು ತಮ್ಮ ಮನೆಬಳಕೆ ಮತ್ತು ಕೃಷಿ ಅಗತ್ಯಗಳಿಗಾಗಿ ಈ ಕೆರೆಯನ್ನೇ ಅವಲಂಬಿಸಿವೆ. ಆದರೆ, ಕಳೆದ 12ರಿಂದ 15 ವರ್ಷಗಳಲ್ಲಿ ಇಡೀ ಗ್ರಾಮದಲ್ಲಿ ಕ್ಯಾನ್ಸರ್ ಮತ್ತು ಕಿಡ್ನಿ ವೈಫಲ್ಯದ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.
"ದೀರ್ಘಕಾಲದವರೆಗೆ ಕಲುಷಿತ ನೀರನ್ನು ಕುಡಿಯುವುದರಿಂದ ಕಿಡ್ನಿಗಳು ಹಾನಿಗೊಳಗಾಗುತ್ತವೆ ಎಂದು ವೈದ್ಯರು ನಮ್ಮನ್ನು ಎಚ್ಚರಿಸಿದ್ದಾರೆ. ನಮ್ಮೂರಿನ ಅನೇಕರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ" ಎನ್ನುತ್ತಾರೆ ಮನಿಷಾ. ನಾನು ಈ ವರದಿಗೆಂದು ಅಲ್ಲಿಗೆ ಹೋಗಿದ್ದಾಗಲೇ ಕನಿಷ್ಠ ಒಬ್ಬ ಸದಸ್ಯನಾದರೂ ಡಯಾಲಿಸಿಸ್ ಪ್ರಕ್ರಿಯೆಗೆ ಒಳಗಾಗುತ್ತಿರುವ ಐದು ಕುಟುಂಬಗಳನ್ನು ಭೇಟಿಯಾಗಿದ್ದೇನೆ.






















