“ಈಗ ನಾವು ಅವರ ಗದ್ದೆಗಳಿಗೆ ಹೋಗಬೇಕಿಲ್ಲ. ಧಾನ್ಯಗಳನ್ನು ನಾವೇ ಬೆಳೆದುಕೊಳ್ಳುತ್ತೇವೆ; ಮೇವನ್ನೂ ಕೂಡಾ ಬೆಳೆದುಕೊಳ್ಳುತ್ತೇವೆ. ಇಲ್ಲಿ ಎಷ್ಟು ದೂರ ಕಣ್ಣು ಹಾಯಿಸಿದರೂ ನಿಮಗೆ ನಮ್ಮ ನೆಲವೇ ಕಾಣುತ್ತದೆ” ಎಂದು ರಾಜಿಂದರ್ ಕೌರ್ ತಮ್ಮ ಕೈಯನ್ನು ದೂರದವರೆಗೆ ತೋರಿಸುತ್ತಾ ಹೇಳಿದರು. ಈ ಜಾಗ ಸುಮಾರು 125 ಎಕರೆಯಲ್ಲಿ ಹರಡಿಕೊಂಡಿದ್ದು, 2014ರಲ್ಲಿ ಎಂದರೆ ಸ್ವಾತಂತ್ರ್ಯ ಬಂದ 67 ವರ್ಷಗಳ ನಂತರ ಇದನ್ನು ಈ ಗ್ರಾಮದ ದಲಿತರು ತಮ್ಮದಾಗಿಸಿಕೊಂಡರು.
ಈ ಮೊದಲು ಬಲಾದ್ ಕಲಾಂ ಗ್ರಾಮದಲ್ಲಿ ದಲಿತ ಮಹಿಳೆಯರು ಮೇಲ್ಜಾತಿಯವರ ಹೊಲಕ್ಕೆ ಕಾಲಿಡುವಂತಿರಲಿಲ್ಲ. ಹಾಗೊಂದು ವೇಳೆ ಕಾಲಿಟ್ಟರೆ ಮೇಲ್ಜಾತಿಗೆ ಸೇರಿದ ಗಂಡಸರು ಈ ಮಹಿಳೆಯರನ್ನು ಅಪಮಾನಿಸುತ್ತಿದ್ದರು. ಈ ಊರಿನ ಬಹುತೇಕ ಮಹಿಳೆಯರ ಬಳಿ ಇಂತಹ ಕಹಿ ನೆನಪಿನ ಕತೆಗಳಿವೆ. ಅವರಿಗೆ ತಾವು ಎದುರಿಸಿದ ಅಪಮಾನಗಳು ಈಗಲೂ ಕಾಡುತ್ತವೆಯಾದರೂ, ಅವರ ಅದ್ಭುತ ಹೋರಾಟ ಆ ನೆನಪುಗಳನ್ನು ಮಸುಕು ಮಾಡಿವೆ.
ಪಂಚಾಯತ್ ಭೂಮಿಯಲ್ಲಿ ಮೂರನೇ ಒಂದು ಭಾಗದಷ್ಟು ಪಾಲನ್ನು ಪಡೆಯುವ ಹಕ್ಕು ದಲಿತರಿಗಿದ್ದು, ಅದನ್ನು ಪಡೆಯುವ ನಿಟ್ಟಿನಲ್ಲಿ ದಲಿತ ಚಳವಳಿ ಬಹಳಷ್ಟು ಹೋರಾಡಿದೆ. ಇದು ಪಂಜಾಬ್ ಗ್ರಾಮ ಸಾಮಾನ್ಯ ಭೂಮಿ (ನಿಯಂತ್ರಣ) ಕಾಯಿದೆ, 1961ರಲ್ಲಿ ಪ್ರತಿಪಾದಿಸಲಾದ ಹಕ್ಕು. ಈ ಹೋರಾಟಗಳ ಫಲವಾಗಿ, 2014ರಿಂದ ದಕ್ಷಿಣ ಪಂಜಾಬ್ನ 162 ಹಳ್ಳಿಗಳಲ್ಲಿ 20,000 ಬಿಘಾ (ಸುಮಾರು 4,210 ಎಕರೆ) ಭೂಮಿಯನ್ನು ಮರಳಿ ಪಡೆಯಲಾಗಿದೆ. ಮತ್ತು ಈಗ, ದಲಿತರು ಮತ್ತೊಮ್ಮೆ ಪ್ರತಿಭಟನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. 1972ರ ಭೂ ಪರಮಾವಧಿ ಕಾಯಿದೆಯಲ್ಲಿ ನಿಗದಿಪಡಿಸಿದ ಮಿತಿಗಳನ್ನು ಮೀರಿ ಪ್ರಬಲ ಜಾತಿಗಳ ವಶದಲ್ಲಿರುವ ಭೂಮಿಗಳ ಮೇಲೆ ಅವರು ಹಕ್ಕು ಸಾಧಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 7ರ ಪಕ್ಕದ ಸಂಗ್ರೂರ್ ಮತ್ತು ಪಟಿಯಾಲ್ ನಡುವೆ ಬಲಾದ್ ಕಲಾಂ ಈ ಚಳವಳಿಯ ನಿರ್ಣಾಯಕ ಕ್ಷಣಕ್ಕೆ ಸಾಕ್ಷಿಯಾದ ಸ್ಥಳ. ರಾಜಿಂದರ್ ಕೌರ್ ಅವರಂತಹ ಮಹಿಳೆಯರು ಇಂದು ತಮ್ಮ ಸಾಮೂಹಿಕ ಹೋರಾಟದಿಂದ ಸಾಧಿಸಿದ ಅದ್ಭುತಗಳ ಕುರಿತು ಮುಕ್ತವಾಗಿ ಮತ್ತು ಸುದೀರ್ಘವಾಗಿ ಸಂಭ್ರಮದಿಂದ ಮಾತನಾಡುತ್ತಾರೆ. ಹಾಗೆಂದು ನ್ಯಾಯಕ್ಕಾಗಿ ಹೋರಾಡುವುದು ಬಲಾದ್ ಕಲಾಂ ಪಾಲಿಗೆ ಹೊಸ ವಿಷಯವೇನೂ ಅಲ್ಲ.
ಸಮಾನತೆಯ ಕನಸು ಕಂಡು ಹೋರಾಡಿ ಪ್ರಾಣ ತೆತ್ತವರ ನೆನಪಿನಲ್ಲಿ ಊರಿನ ಹೊರವಲಯದಲ್ಲಿ ಸ್ಥಾಪಿಸಲಾಗಿಸಿರುವ ಸ್ಮಾರಕಗಳು ಆ ಹಳ್ಳಿಯ ಪ್ರತಿರೋಧದ ಇತಿಹಾಸವನ್ನು ಹೇಳುತ್ತವೆ.













