ಮನೆ ತನಕ ಬಿಡುವುದಾಗಿ ನಂಬಿಸಿ ಕಾರು ಹತ್ತಿಸಿಕೊಂಡ ಡ್ರೈವರ್, ಕಾರನ್ನು ವಿರುದ್ಧ ದಿಕ್ಕಿಗೆ ಓಡಿಸಿ ಹೆದ್ದಾರಿಯಲ್ಲಿ ಯೂ-ಟರ್ನ್ ತೆಗೆದುಕೊಂಡ. ಡ್ರೈವರ್ ತಿಳಿಯದೆ ದಾರಿತಪ್ಪಿದ್ದಾನೆ ಎಂದು ಭಾವಿಸಿಕೊಂಡ ನೇಹಾಳಿಗೆ, ಎರಡನೇ ಬಾರಿ ಯೂ-ಟರ್ನ್ ತೆಗೆದುಕೊಂಡಾಗ ಅನುಮಾನ ಶುರುವಾಯ್ತು. ಮೂರನೇ ಬಾರಿಗೆ ಯೂ-ಟರ್ನ್ ತೆಗೆದುಕೊಂಡಾಗ 15 ವರ್ಷ ಪ್ರಾಯದ ಈ ಬಾಲಕಿ ಗಾಬರಿಗೊಂಡು ಅಳುವುದಕ್ಕೆಆರಂಭಿಸಿದಳು, ಕಂಗೆಟ್ಟುಹೋದಳು.
ಏನಾಗುತ್ತಿದೆ ಎಂಬ ಅರಿವಿಲ್ಲದ ನೇಹಾ ಗಾಬರಿಯಿಂದಲೇ ತನ್ನ ಹೆತ್ತವರನ್ನು ನೋಡಬೇಕು ಎಂದು ಕೂಗತೊಡಗಿದಳು. ಕಾರಿನ ಚಾಲಕ ಮತ್ತು ಪಕ್ಕವೇ ಕುಳಿತಿದ್ದ ಮಹಿಳೆ ಅವಳನ್ನು ಚಿಂತೆ ಮಾಡದಂತೆ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು.
ಆದರೆ ಮನಸ್ಸಿನ ಆಳದಲ್ಲಿ, ನೇಹಾಳಿಗೆ ತಾನು ದೊಡ್ಡ ತೊಂದರೆಯಲ್ಲಿ ಸಿಲುಕಿರುವುದು ತಿಳಿದಿತ್ತು. ಮನೆಬಿಟ್ಟು ಹೋಗುವುದು ಅವಳು ವಿವೇಚನೆ ಮಾಡದೆ ತೆಗೆದುಕೊಂಡ ನಿರ್ಧಾರವಾಗಿತ್ತು. ಅದಕ್ಕಾಗಿ ಅವಳು ಪಶ್ಚಾತ್ತಾಪ ಪಡತೊಡಗಿದ್ದಳು.
ವರ್ಷದ ಆರಂಭದಲ್ಲಿ, ಅಂದರೆ ಮೇ 2023ರಲ್ಲಿ, ಹದಿಹರೆಯದ ಈ ಹುಡುಗಿ ತನ್ನ ಹೆಚ್ಚು ಸಮಯವನ್ನು ಫೋನ್ನಲ್ಲಿ ಕಳೆಯುತ್ತಿದ್ದಳು. ಪುಸ್ತಕಗಳನ್ನು ಮುಟ್ಟಿಯೇ ನೋಡುತ್ತಿಲ್ಲ ಎಂದು ಬೈಯುತ್ತಿದ್ದ ತನ್ನ ಹೆತ್ತವರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದಳು. ಒಂದು ದಿನ ಅವರು ನೇಹಾಳ ಫೋನನ್ನು ಕಸಿದುಕೊಂಡ ನಂತರ ಜಗಳ ನಿಂತುಹೋಯ್ತು.
"ನನ್ನ ಅಪ್ಪ - ಅಮ್ಮ ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದರಿಂದ ತುಂಬಾ ಕೋಪಗೊಂಡಿದ್ದೆ," ಎಂದು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾಗದೆ ಮೆಲುದನಿಯಲ್ಲಿ ಹೇಳುತ್ತಾಳೆ. "ಹಾಗಾಗಿ, ನಾನು ಅವರನ್ನು ಬಿಟ್ಟುಹೋಗಬೇಕೆಂದು ನಿರ್ಧರಿಸಿದೆ.”
ಒಂದು ದಿನ ಬೆಳಿಗ್ಗೆ 6 ಗಂಟೆಗೆ ಮನೆಯನ್ನು ಬಿಟ್ಟ ನೇಹಾ, ತನ್ನ ನೆರೆಹೊರೆಯ ಕಿರಿದಾದ ಬೀದಿಗಳಲ್ಲಿ ನಡೆದು ಕೊನೆಗೆ ಹೆದ್ದಾರಿಯನ್ನು ತಲುಪಿದಳು. ತನ್ನ ಹೆತ್ತವರ ಮೇಲೆ ಇನ್ನೂ ಕೋಪದಲ್ಲಿದ್ದ ಆಕೆ ತಾನು ತುಂಬಾ ದೂರ ಸಾಗಿ ಬಂದಿದ್ದೇನೆ ಎಂಬ ಅರಿವಾಗುವ ಮೊದಲೇ ಹೆದ್ದಾರಿಯಲ್ಲಿ ಸುಮಾರು 7-8 ಕಿಲೋಮೀಟರ್ ನಡೆದಿದ್ದಳು. ಅಷ್ಟೊತ್ತಿಗಾಗಲೇ ಸೂರ್ಯ ಮೂಡಣದಲ್ಲಿ ಉದಯಿಸಿ ಸಂಚಾರಕ್ಕೆ ಹೊರಟಿದ್ದ. ನೇಹಾಳಿಗೆ ಬಾಯಾರಿಕೆಯಾಗಿತ್ತು, ಆದರೆ ನೀರಿನ ಬಾಟಲಿಯನ್ನು ಖರೀದಿಸಲೂ ಅವಳ ಬಳಿ ಹಣವಿರಲಿಲ್ಲ.
ಅಷ್ಟು ಹೊತ್ತಿಗೆ ಕಪ್ಪು ಸೆಡಾನ್ ಒಂದು ಅವಳ ಮುಂದೆ ಬಂದು ನಿಂತಿತು. "ಒಬ್ಬ ಗಂಡಸು ಕಾರನ್ನು ಓಡಿಸುತ್ತಿದ್ದ, ಹಿಂದೆ ಒಬ್ಬಳು ಮಹಿಳೆ ಕುಳಿತಿದ್ದಳು" ಎಂದು ನೇಹಾ ನೆನಪಿಸಿಕೊಳ್ಳುತ್ತಾಳೆ. ಮಹಿಳೆ ವಿಂಡೋ ಕೆಳಗಿಳಿಸಿ ನೇಹಾಳ ಬಳಿ ಮನೆ ತನಕ ಲಿಫ್ಟ್ ಬೇಕಾ ಎಂದು ಕೇಳಿದಳು. “ಅವರು ಒಳ್ಳೆಯವರಂತೆ ಕಾಣುತ್ತಿದ್ದರು. ನಾನು ಮತ್ತೆ ಹಿಂತಿರುಗಿ ನಡೆಯಲು ತುಂಬಾ ಸುಸ್ತಾಗಿದ್ದೆ ಮತ್ತು ಬಸ್ ಟಿಕೆಟ್ಗೆ ನನ್ನ ಬಳಿ ಹಣವೂ ಇರಲಿಲ್ಲ.”
ಇದಕ್ಕೆ ಒಪ್ಪಿಕೊಂಡ ನೇಹಾ ಕಾರು ಹತ್ತಿದಳು. ಕಾರಿನಲ್ಲಿದ್ದ ಏರ್ ಕಂಡಿಷನರ್ ಅವಳಿಗೆ ಆರಾಮ ನೀಡಿತು. ಕರವಸ್ತ್ರದಿಂದ ಅವಳ ಹಣೆಯ ಮೇಲಿದ್ದ ಬೆವರನ್ನು ಒರೆಸಿಕೊಂಡಳು. ಪಕ್ಕದಲ್ಲಿ ಕುಳಿತಿದ್ದ ಮಹಿಳೆ ನೀರಿನ ಬಾಟಲಿಯನ್ನು ಕೊಟ್ಟಳು.
ಆರಾಮವಾಗಿ ಕಾರಿನಲ್ಲಿ ಕುಳಿತಿದ್ದ ನೇಹಾಳಿಗೆ ಆ ಡ್ರೈವರ್ ಅವಳ ಮನೆಯಿಂದ ದೂರ ದೂರ ಕಾರನ್ನು ಓಡಿಸುತ್ತಿರುವುದನ್ನು ನೋಡಿದಾಗ ಭಯ ಕಾಡಲು ಶುರುವಾಯ್ತು. ಅವಳು ಕೂಗಾಡಿದಳು, ಪ್ರತಿಭಟಿಸಲು ಪ್ರಯತ್ನಿಸಿದಳು. ಸುಮಾರು ಒಂದು ಗಂಟೆಯ ನಂತರ ಕಾರು ನಿಂತಿತು. ಅಷ್ಟೊತ್ತಿಗಾಗಲೇ ಅವರು ಭೋಪಾಲ್ ತಲುಪಿದ್ದರು. ನೇಹಾ ಕಿಡ್ನಾಪ್ ಆಗಿದ್ದಳು.
ಕಾಣೆಯಾದ ಮಕ್ಕಳ ಪಟ್ಟಿಯಲ್ಲಿ ಮಧ್ಯಪ್ರದೇಶವು ಸತತ ಅಗ್ರಸ್ಥಾನದಲ್ಲಿದೆ. 2016 ಮತ್ತು 2021ರ ನಡುವೆ, ರಾಜ್ಯದಲ್ಲಿ ಅಧಿಕೃತವಾಗಿ 60,031 ಪ್ರಕರಣಗಳು ದಾಖಲಾಗಿವೆ (ನ್ಯಾಷನಲ್ ಕ್ರೈಮ್ ರಿಪೋರ್ಟ್ಸ್ ಬ್ಯೂರೋ). ಚೈಲ್ಡ್ ರೈಟ್ಸ್ ಆಂಡ್ ಯು (ಸಿಆರ್ವೈ) ಹಾಕಿದ ಆರ್ಟಿಐಗೆ ಬಂದ ಉತ್ತರದಲ್ಲಿ 2022ರಲ್ಲಿ 11,717 ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಅಂದರೆ ಒಂದು ವರ್ಷದಲ್ಲಿ ಸರಾಸರಿ 10,250 ಮಕ್ಕಳು ಕಾಣೆಯಾಗಿದ್ದಾರೆ, ದಿನಕ್ಕೆ 28 ಮಕ್ಕಳು - ಭಾರತದ ಬೇರೆ ರಾಜ್ಯಗಳಿಗಿಂತ ಇದು ಅಧಿಕ.




