“ಕೆಲವು ವರ್ಷಗಳ ಹಿಂದೆ ಊರಿಗೆ ಒಂದು ಕೆರೆ ನಿರ್ಮಿಸುವುದು ಅಥವಾ ಇನ್ಯಾವುದಾದರೂ ವಿಷಯವನ್ನು ಗ್ರಾಮಸಭೆಯ ಗಮನಕ್ಕೆ ತರುವುದಕ್ಕೆ, ಸರಪಂಚ್ ಅಥವಾ ಗ್ರಾಮ ಪಂಚಾಯತ್ ಅಧ್ಯಕ್ಷರೊಂದಿಗೆ ಕುಳಿತು ಮಾತನಾಡುವುದಕ್ಕೆ ಮಹಿಳೆಯರಿಗೆ ಸಾಧ್ಯವಾಗುತ್ತಿರಲಿಲ್ಲ” ಎಂದು ಗೋದಾವರಿಮರವಿ ಹೇಳುತ್ತಾರೆ.
ಆದರೆ ಈಗ ಪರಿಸ್ಥಿತಿ ಬಹಳ ಬದಲಾಗಿದೆ. ಇದಕ್ಕೆ ಕಾರಣ ಈ ಊರಿನ ಮಹಿಳೆಯರ ಧೈರ್ಯ ಮತ್ತು ನಿರಂತರ ಪ್ರಯತ್ನವಲ್ಲದೆ ಇನ್ನೇನೂ ಅಲ್ಲ. ಪರಿ 2024ರ ಜುಲೈ ತಿಂಗಳಿನಲ್ಲಿ ಮಧ್ಯಪ್ರದೇಶದ ಬರ್ಗಾಗಾಂವ್ ಎನ್ನುವ ಊರಿನ ಈ ದಿಟ್ಟ ಮಹಿಳೆಯರನ್ನು ಭೇಟಿಯಾಯಿತು.
ಗೋದಾವರಿ ಮತ್ತು ಹಲ್ಚಲಿತ್ ಮಹಿಳಾ ಕಿಸಾನ್ ವುಮೆನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಚ್ಎಂಕೆಡಬ್ಲ್ಯೂಪಿಸಿ) ಸಂಸ್ಥೆಯ ಆರು ಸದಸ್ಯರು ಅಂದು ನಮ್ಮೊಂದಿಗಿನ ಮಾತುಕತೆಗೆ ಬಂದಿದ್ದರು. ದಿಂಡೋರಿ ಜಿಲ್ಲೆಯ ಸಾಮ್ನಾಪುರ ವಿಭಾಗಕ್ಕೆ ಸೇರಿದ ಪ್ರದೇಶವೊಂದರಲ್ಲಿದ್ದ ಗಡಿನ ಛಾವಣಿ ಮತ್ತು ಗೋಡೆಗಳನ್ನು ಹೊಂದಿರುವ ದೊಡ್ಡ ಶೆಡ್ ತರಹದ ಕಚೇರಿ ಮತ್ತು ಗೋದಾಮಿನಲ್ಲಿ ನಾವೆಲ್ಲರೂ ಸೇರಿದ್ದೆವು. ಆ ಕಟ್ಟಡದ ಒಂದು ಮೂಲೆಯ ಲ್ಲಿ ಒಂದು ಸಣ್ಣ ಕಚೇರಿಯಿದ್ದು, ಅದು ಕಂಪ್ಯೂಟರ್, ಕೆಲವು ಕಪಾಟುಗಳು ಮತ್ತು ಏರ್-ಕೂಲರ್, ಕುರ್ಚಿ ಮತ್ತು ಮೇಜುಗಳನ್ನು ಹೊಂದಿತ್ತು.
ಮಹಿಳೆಯರು ತಮ್ಮನ್ನು ತಾವು ರೈತರು ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುವ ಆತ್ಮಾಭಿಮಾನದ ಸಂಕೇತವಾಗಿ ಕಂಪನಿಯ ಹೆಸರು ಹುಟ್ಟಿಕೊಂಡಿತು. ಹಲ್ ಎಂದರೆ ನೇಗಿಲು ಎಂದರ್ಥ. ಸಾಮಾನ್ಯವಾಗಿ ನೇಗಿಲನ್ನು ಗಂಡಸರ ಜೊತೆ ಗುರುತಿಸಲಾಗುತ್ತದೆ. ಉಳುಮೆಯಂತಹ ಕೆಲಸವನ್ನು ಗಂಡಸರ ಕೆಲಸವೆನ್ನುವಂತೆ ನೋಡಲಾಗುತ್ತದೆ. ಅವರು ಈ ಸ್ಥಾಪಿತ ನಂಬಿಕೆಯನ್ನು ಪ್ರಶ್ನಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಗೆ ಹಲ್ಚಲಿತ್ ಮಹಿಳಾ ಉತ್ಪಾದಕ ಸಂಸ್ಥೆ - ನೇಗಿಲು ಬಳಸುವ ಮಹಿಳೆಯರು – ಎನ್ನುವ ಹೆಸರನ್ನು ತಮ್ಮ ಸಂಸ್ಥೆಗೆ ಇಡಲು ನಿರ್ಧರಿಸಿದರು. ಇಂದು ಈ ಸಂಸ್ಥೆ ಪಾಲುದಾರರೂ ಆಗಿರುವ 1,400 ನೋಂದಾಯಿತ ಸದಸ್ಯರನ್ನು ಹೊಂದಿದೆ.
ಸಂಸ್ಥೆಯ ಇಬ್ಬರುಸದಸ್ಯರಾದ ಗೋದಾವರಿ ಮರವಿ (44) ಮತ್ತು ದೇವಕಿ ವಾಗ್ಲೆ (47) ಬರ್ಗಾಗಾಂವ್ ((ಬರ್ಗಾ ವಿಲೇಜ್ ಎಂದೂ ಕರೆಯಲಾಗುತ್ತದೆ) ನಿವಾಸಿಗಳು. ಇಬ್ಬರೂ ಅಂದು ಕಚೇರಿಗೆ ನಡಿಗೆಯಲ್ಲೇ ತಲುಪಿದ್ದರು. ಉಳಿದವರು ಸಾಮ್ನಾಪುರ ವಿಭಾಗದಲ್ಲಿನ ತಮ್ಮ ಮನೆಗಳಿಂದ ಆಟೋರಿಕ್ಷಾ ಅಥವಾ ಕುಟುಂಬದವರ ಬೈಕಿನಲ್ಲಿ ಬಂದಿದ್ದರು.
ಗೋದಾವರಿ ಮರವಿ ಪ್ರಸ್ತುತ ಸಂಸ್ಥೆಯ ಅಧ್ಯಕ್ಷರು. ಅವರು ಮಾತಿಗೆ ತೊಡಗುತ್ತಾ, ಈ ಹಿಂದೆ ಸಾಂಪ್ರದಾಯಿಕವಾಗಿ ರಾಸಾಯನಿಕ ಒಳಸುರಿಗಳನ್ನು ಬಳಸಿ ಗೊತ್ತಿಲ್ಲದ ರೈತರು ಮುಂದೆ ಹೇಗೆ ಅವುಗಳನ್ನು ಬಳಸಲು ಆರಂಭಿಸಿದರು ಎನ್ನುವ ಕುರಿತು ವಿವರಿಸಿದರು. ಅವರು ಹೇಳುವಂತೆ 2010ರ ನಂತರ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯು ಹೆಚ್ಚು ಹೆಚ್ಚು ಪ್ರಚಲಿತಕ್ಕೆ ಬಂತು ಮತ್ತು ನಂತರ ಕೃಷಿಯ ರೂಪ ಸಂಪೂರ್ಣ ಬದಲಾಯಿತು. ಅದೇನೇ ಇದ್ದರೂ, ದಿಂಡೋರಿ ಜಿಲ್ಲೆಯ ಅನೇಕ ರೈತರು 2022ರ ನಂತರ ಮತ್ತೆ ಸಾವಯವ ಅಥವಾ ನೈಸರ್ಗಿಕ ಕೃಷಿ ಅಥವಾ ಎರಡರ ಸಂಯೋಜನೆಯತ್ತ ಹೊರಳಿದ್ದಾರೆ. ರಾಸಾಯನಿಕೇತರ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಸಹ ಈ ವಿಷಯದಲ್ಲಿ ಅವರ ಬೆಂಬಲಕ್ಕೆ ನಿಂತಿವೆ.
“ನಾವು ರೈತರಿಗೆ ಸಾವಯವ ಬೀಜಗಳನ್ನು ಒದಗಿಸುತ್ತೇವೆ. ಹೊಲವನ್ನು ಅಲ್ಲಿನ ಹುಲ್ಲು, ಕಳೆ, ಮತ್ತು ಹರಪತ್ವಾರ್ (ಕೂಳೆ) ಯನ್ನು ಸೇರಿಸಿ ಉಳುಮೆ ಮಾಡಿದಾಗ, ಇವು ಮಣ್ಣಿನಲ್ಲಿ ಬೆರೆತು, ಕೊಳೆತು ಮೊದಲ ಹಂತದ ನೈಸರ್ಗಿಕ ಗೊಬ್ಬರವಾಗಿ ಒದಗುತ್ತವೆ” ಎಂದು ಗೋದಾವರಿ ನಮಗೆ ತಿಳಿಸಿದರು.


