ನಾವು ಅವರ ಹೆಸರು ಕೇಳಿದಾಗ "ವೇಂಡಾ" ಎಂದು ತಮಿಳಿನಲ್ಲಿ ಉತ್ತರಿಸಿದರು. ಅದು ನಿಜಕ್ಕೂ ಅವರ ಹೆಸರೇ ಹೊರತು ಉತ್ತರಿಸಲು ನಿರಾಕರಿಸುತ್ತಿಲ್ಲ ಎನ್ನುವುದು ಅರ್ಥವಾಗದೆ ಒಂದಷ್ಟು ಗೊಂದಲವಾಯಿತು. ತಮಿಳಿನಲ್ಲಿ 'ವೇಂಡಾಮ್' ಎಂಬ ಪದದ ಸಂಕ್ಷಿಪ್ತ ರೂಪವಾದ 'ವೇಂಡಾ' ಎಂದರೆ 'ಬೇಡ / ಬೇಕಾಗಿಲ್ಲ' ಎಂದರ್ಥ.
ಎನ್. ವೇಂಡಾಮ್ ಅವರಿಗೆ 39 ವರ್ಷ ವಯಸ್ಸು, ನರಸಿಮ್ಮನ್ ಮತ್ತು ದಿವಂಗತ ರಾಜಮ್ಮಾಳ್ ಅವರ ಮಗಳು. ಅವರು ಐದನೇ ಮಗುವಾಗಿ, ಮೂರು ಗಂಡುಮಕ್ಕಳು ಮತ್ತು ಎರಡು ಹೆಣ್ಣುಮಕ್ಕಳ ಹೆರಿಗೆಗಳಿಂದ ಸುಸ್ತಾಗಿದ್ದ ತಾಯಿಗೆ ಜನಿಸಿದರು. ಇನ್ನು ಮಕ್ಕಳು ಬೇಡ ಎಂಬ ಪ್ರಾರ್ಥನೆಯಂತೆ ಅವರ ತಂದೆ-ತಾಯಿ ಅವರಿಗೆ 'ವೇಂಡಾ' ಎಂದು ಹೆಸರಿಟ್ಟರು. ಆಧಾರ್ ಕಾರ್ಡ್ನಲ್ಲಿ ಅವರ ಹೆಸರು ʼವೇಂಡಾಮ್ʼ ಎಂದು ನಮೂದಾಗಿದೆ.
ನೀನು ಗಂಡು ಮಗುವಾಗಿದ್ದರೆ ನಿನಗೆ ʼವೇಂಡಾʼ ಎಂದು ಹೆಸರಿಡುತ್ತಿರಲಿಲ್ಲ ಎಂದು ಹಿಂದೆ ರಾಜಮ್ಮಾಳ್ ಬದುಕಿದ್ದಾಗ ತನಗೆ ಹೇಳಿದ್ದಾಗಿ ಅವರು ಹೇಳುತ್ತಾರೆ. ಹೆಣ್ಣು ಮಗುವಾದ ಕಾರಣ ಈ ಹೆಸರಿಡಲು ಕುಟುಂಬ ನಿರ್ಧರಿಸಿತು. ಇದರೊಂದಿಗೆ ಅವರ ಹೆಸರಿನ ಹಿಂದಿನ ಕತೆಯೂ ಉಳಿದುಹೋಯಿತು.
ಈ ಕುರಿತು ದಿವಂಗತ ರಾಜಮ್ಮಾಳ್ ವಿಷಾದವನ್ನೂ ವ್ಯಕ್ತಪಡಿಸಿದ್ದರು. “ನಾವು ನಿನನ್ನು ʼವೇಂಡಾ, ವೇಂಡಾʼ ಎಂದು ಕರೆಯದೆ ಒಳ್ಳೆಯ ಹೆಸರಿಟ್ಟಿದ್ದರೆ ನಿನ್ನ ಭವಿಷ್ಯ ಚೆನ್ನಾಗಿರುತ್ತಿತ್ತೋ ಏನೋ” ಎಂದು ತನ್ನ ಮಗಳ ಬಳಿ ಹೇಳಿದ್ದರು.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಮದ್ದೂರು ಎಂಬ ಈಹಳ್ಳಿಯಲ್ಲಿ ವೇಂಡಾ ಎನ್ನುವ ಹೆಸರಿನ ಕನಿಷ್ಠ 10 ಮಹಿಳೆಯರು ಇದ್ದಾರೆ ಎನ್ನುತ್ತಾರೆ ವೇಂಡಾ. “ತಿರುತ್ತಣಿ ತಾಲೂಕಿನ ಅನೇಕ ಹಳ್ಳಿ ಹಳ್ಳಿಗಳಲ್ಲಿರುವ ನಮ್ಮ ಸಮುದಾಯದ ಕುಟುಂಬಗಳಲ್ಲಿ ಈ ಹೆಸರು ಬಹಳ ಸಾಮಾನ್ಯವಾಗಿತ್ತು” ಎಂದು ಅವರು ಪಾರಿಗೆ ತಿಳಿಸಿದರು.





