ಮಾಯಿ ತಿಂಗಳು ಕಳೆದಂತೆ ನಾವು ಶಿಮ್ಗಾ ಹಬ್ಬವನ್ನು ಆಚರಿಸಲು ಕಾತರದಿಂದ ಕಾಯುತ್ತೇವೆ. ವರ್ಲಿ ಸಮುದಾಯದಲ್ಲಿರುವ ಹನ್ನೆರಡು ತಿಂಗಳುಗಳೆಂದರೆ ಚೈತ್, ವೈಶಾಖ್, ಜೇತ್, ಆಖಾರ್, ಶ್ರಾವಣ, ಭದ್ವಾ, ಅಶ್ವಿನ್, ಕಾರ್ತಿಕ್, ಮಕಾಶೀರ್, ಪೂಸ್, ಮಾಯಿ ಮತ್ತು ಫಾಲ್ಗುಣ್ (ಶಿಮ್ಗಾ ಎಂದೂ ಕರೆಯುತ್ತಾರೆ).
ಶಿಮ್ಗಾ ಹಬ್ಬ ಬರುವ ಒಂದೆರಡು ವಾರಗಳ ಮೊದಲೇ ನಾವು ಕಟ್ಟಿಗೆಗಳನ್ನು ತಂದು ಹೋಳಿ ಎಂದು ಕರೆಯುವ ಕಟ್ಟಿಗೆಗಳ ಸಣ್ಣ ಸಣ್ಣ ರಾಶಿಗಳನ್ನು ಮಾಡಿ ಬೆಂಕಿ ಕೊಡುತ್ತೇವೆ. ಇಡೀ ರಾತ್ರಿ ಆಟ್ಯ ಪಾತ್ಯದಂತಹ ಸಾಂಪ್ರದಾಯಿಕ ಆಟಗಳನ್ನು ಆಡುತ್ತೇವೆ. ಫಾಲ್ಗುಣ ತಿಂಗಳ ಹದಿನೈದನೆಯ ದಿನವಾದ ಹುಣ್ಣಿಮೆಯ ರಾತ್ರಿಯಂದು ನಾವೆಲ್ಲಾ ಒಟ್ಟಿಗೆ ಸೇರಿ, ಮರದ ಕೊಂಬೆ ರೆಂಬೆಗಳಿಂದ ಕಟ್ಟಿಗೆಗಳನ್ನು ಕಡಿದು ರಾಶಿಹಾಕಿ ಬೆಂಕಿಹಾಕುತ್ತೇವೆ. ಇದನ್ನು ಗಂಡಸರು ಮಾತ್ರ ಮಾಡುತ್ತಾರೆ. ಕಾಡಿಗೆ ಹೋಗಿ ಎಲೆ ಸಹಿತ ಬಿದಿರನ್ನು ತಂದು, ಅದಕ್ಕೆ ಹೂವಿನ ಹಾರವನ್ನು ಹಾಕಿ, ಗಾತಿ ಎಂದು ಕರೆಯುವ ಸಕ್ಕರೆಯನ್ನೂ, ಅಕ್ಕಿ ರೊಟ್ಟಿಗಳನ್ನೂ ಮತ್ತು ಅದರ ತುದಿಗೆ ಒಂದು ಕೋಳಿ ಮರಿಯನ್ನು ಕಟ್ಟುತ್ತೇವೆ. ಈ ಬಿದಿರನ್ನು ಮಧ್ಯದಲ್ಲಿ ಇಟ್ಟು, ಅದರ ಸುತ್ತ ಕಾಡಿನಿಂದ ತಂದ ಕಟ್ಟಿಗೆಗಳನ್ನು ಜೋಡಿಸುತ್ತೇವೆ. ಇದಕ್ಕೆ ನಾವು ಹೋಳಿ ಎಂದು ಕರೆಯುತ್ತೇವೆ. ಆಮೇಲೆ ತೆಂಗಿನಕಾಯಿ ಒಡೆದು ಈ ಹೋಳಿಗೆ ಪೂಜೆ ಮಾಡುತ್ತೇವೆ. ಪುದರ್ಖಿ ಎಂದು ಕರೆಯುವ ಊರಿನ ಹಿರಿಯರೊಬ್ಬರು ಊರಿನ ಎಲ್ಲರನ್ನೂ ಪೂಜೆಗೆ ಕರೆದು (ದಾವಂಡಿ), ಹೋಳಿಗೆ ಬೆಂಕಿಕೊಡುತ್ತಾರೆ.
ಹಿಂದಿನ ಕಾಲದಲ್ಲಿ ಊರು-ಕೇರಿಗಳ ಜನರೆಲ್ಲಾ ಒಂದೆಡೆ ಸೇರಿ ಒಂದೇ ಕಡೆ ಹೋಳಿಗೆ ಬೆಂಕಿಹಾಕಿ ಹಬ್ಬವನ್ನು ಆಚರಿಸುತ್ತಿದ್ದರು. ಶಿಮ್ಗಾಕ್ಕಿಂತ ಮೊದಲು ಮದುವೆಯಾದ ದಂಪತಿಗಳು ಉರಿಯುತ್ತಿರುವ ಹೋಳಿಗೆ ಐದು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ನಿಜವಾದ ಹಬ್ಬ ಆರಂಭವಾಗುವುದು ರಾತ್ರಿಯಲ್ಲಿ. ಎಲ್ಲಾ ವಯಸ್ಸಿನ ಗಂಡಸರು, ಹೆಂಗಸರು ಪರಸ್ಪರ ಕಾಲೆಳೆಯುತ್ತಾ, ಹಾಸ್ಯ ಮಾಡುತ್ತಾ ವಿನೋದದಿಂದ ರಾತ್ರಿ ಕಳೆಯುತ್ತಾರೆ. ಬೇರೆ ಬೇರೆ ವೇಷಗಳನ್ನು ಧರಿಸಿದ ಮಕ್ಕಳು ಮನೆ ಮನೆಗೆ ಹೋಗಿ ಜನರನ್ನು ತಮಾಷೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಜನರಿಂದ ಉಡುಗೊರೆ ಅಥವಾ ಹಣವನ್ನು ಕೇಳುತ್ತಾರೆ. ಶಿಮ್ಗಾ ಹಬ್ಬದಂದು ಎಲ್ಲರಲ್ಲೂ ನಗು, ಸಂತೋಷ ಮನೆಮಾಡುತ್ತದೆ.





