“ಒಂದು ಪೊರಕೆಯ ತಯಾರಿಕೆ ಏಳು ಹಂತಗಳನ್ನು ಒಳಗೊಂಡಿರುತ್ತದೆ” ಎನ್ನುತ್ತಾರೆ ಭಗವತಿ.
ಭಗವತಿಗೆ ಕೇವಲ 20 ವರ್ಷ ವಯಸ್ಸಾಗಿದ್ದರೂ, ಅವರು ಈ ಕಸುಬಿನಲ್ಲಿ ಪರಿಣಿತರಾಗಿದ್ದಾರೆ, ಇದನ್ನು ಅವರು ತಮ್ಮ ತಾಯಿ ಮತ್ತು ಇತರ ಕುಟುಂಬ ಸದಸ್ಯರಿಂದ ಕಲಿತಿದ್ದಾರೆ. "ಮೊದಲು, ನಾವು ಈಚಲು ಗರಿಗಳನ್ನು ಮಧ್ಯದಿಂದ ಕತ್ತರಿಸುತ್ತೇವೆ ಮತ್ತು ನಂತರ ಗರಿಗಳ ತುದಿಗಳನ್ನು ಬೇರ್ಪಡಿಸುತ್ತೇವೆ" ಎಂದು ಅವರು ಈ ವರದಿಗಾರರಿಗೆ ತಿಳಿಸಿದರು.
ಅವರು ಗರಿಗಳ ತುದಿಯನ್ನು "ತುಕ್ಡೇ ತುಕ್ಡೇ [ಸಣ್ಣ ಚೂರುಗಳು]" ಎಂದುಕರೆಯುತ್ತಾರೆ, ಈ ಎಲೆಗಳನ್ನು ಬಿದಿರನ ಕೋಲೊಂದಕ್ಕೆ ಪ್ಲಾಸ್ಟಿಕ್ ಹಾಳೆಯ ಜೊತೆಗೆ ಸುತ್ತಲಾಗುತ್ತದೆ. ಕೊನೆಗೆ ಗರಿಗಳನ್ನು ಕತ್ತರಿಸಲಾಗುತ್ತದೆ ಎಂದು ಭಗವತಿ ಪೊರಕೆ ತಯಾರಿಸುವ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ಇದರ ನಡುನಡುವೆ ಅವರ ತಂಗಿ ದೇವೋಲಿ ಕೂಡಾ ತನ್ನ ಮಾತುಗಳನ್ನು ಸೇರಿಸುತ್ತಿದ್ದಳು.
ಈ ಇಬ್ಬರೂ ಸಹೋದರಿಯರು ಇಪ್ಪತ್ತರ ಪ್ರಾಯದ ಆಸುಪಾಸಿನಲ್ಲಿದ್ದಾರೆ. ಇವರಿಬ್ಬರಿಗೂ ಪೊರಕೆ ತಯಾರಿಕೆಯ ಪ್ರಕ್ರಿಯೆ ಎನ್ನುವುದು ಬಾಯಿಪಾಠ. ಭಗವತಿ ತನ್ನ ತಾಯಿ ಸೋನಿ ದೇವಿ ಮತ್ತು ಸಹೋದರಿ ದೇವೋಲಿಯೊಂದಿಗೆ ಪಂಜಾಬಿನ ಮಲೋಟ್ ಪ್ರದೇಶದ ಫುಟ್ಪಾರ್ ಒಂದರ ಮೇಲೆ ಎದುರುಬದುರಾಗಿ ವೃತ್ತಾಕಾರದಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ತರಬೇತಿ ಪಡೆದ ನೃತ್ಯಗಾರರಂತೆ ಅವರು ಒಬ್ಬರ ನಂತರ ಇನ್ನೊಬ್ಬರು ತಮ್ಮ ಸರದಿಯ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು.
ದೇವೋಲಿ ಈ ಸಾಂಪ್ರದಾಯಿಕ ಕೆಲಸಗಳನ್ನು ಬಹಳ ಸಮರ್ಪಣೆಯಿಂದ ಮಾಡುತ್ತಾರೆ. "ಬಾಲ್ಯದಿಂದಲೂ, ನಮಗೆ ಪೊರಕೆಗಳನ್ನುತಯಾರಿಸುವುದೆಂದರೆ ಬಹಳ ಇಷ್ಟ.” ತನ್ನ ತಾಯಿ ರುಖ್ಮಣಿಯಿಂದ ಅವರು ಈ ಕಲೆಯನ್ನು ಕಲಿತರು ಮತ್ತು ಈಗ ತನ್ನ ಮೂವರು ತಂಗಿಯರಿಗೆ ಅದನ್ನು ಕಲಿಸಲು ಯೋಜಿಸಿದ್ದಾರೆ.
ದೇವೊಲಿಯ ಸೋದರಸಂಬಂಧಿ ಭಗವತಿ, ಕುಟುಂಬದ ಕಸುಬಿನ ಬಗ್ಗೆ ಅವರಂತೆಯೇ ಉತ್ಸುಕರಾಗಿದ್ದರೂ, ಹೆಚ್ಚು ವಾಸ್ತವಿಕವಾಗಿ ಯೋಚಿಸುತ್ತಾರೆ: "ಕ್ಯೂಂಕಿ ಜಬ್ ಮೆಹನತ್ ಕರೆಂಗೆ ತೋ ತೋ ಖಾನೆ ಕೋ ಮಿಲೇಗಾ ಔರ್ ಮೆಹನತ್ ನಹಿ ಕರೆಂಗೆ ತೋ ಕ್ಯಾ ಖಾಯೆಂಗೆ [ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಊಟಕ್ಕೆ ಸಿಗುತ್ತದೆ. ಕೆಲಸ ಮಾಡದಿದ್ದರೆ ಏನು ತಿನ್ನುವುದು]?" ಎಂದು ಆಕೆ ಪ್ರಶ್ನಿಸುತ್ತಾರೆ. ತನ್ನ ತಾಯಿ ಸೋನಿ ದೇವಿ ಹೇಳುವುದನ್ನು ಕೇಳುತ್ತಲೇ ಆಕೆ ಬೆಳೆದಿದ್ದಾರೆ: "ನಾವು ಪೊರಕೆಗಳನ್ನು ತಯಾರಿಸದಿದ್ದರೆ, ಏನು ತಿನ್ನುತ್ತೇವೆ?" ಈ ಭಾವನೆಯನ್ನು ರಾಜಸ್ಥಾನದ ಮೇವಾರ್ ಪ್ರದೇಶದಿಂದ ಪಂಜಾಬ್ಗೆ ಪ್ರಯಾಣಿಸುವ ಇತರ ಪೊರಕೆಗಳು ತಯಾರಕರು ಕೂಡ ವ್ಯಕ್ತಪಡಿಸುತ್ತಾರೆ.





















