ಮೊದಲಿಗೆ ಆತನ ತಂದೆ. ಮಾರನೆಯ ದಿನ ಆತನ ತಾಯಿ. ಕೋವಿಡ್-19ನ ಎರಡನೇ ಅಲೆಯ ಸಂದರ್ಭದ ಮೇ 2021ರಲ್ಲಿ ತನ್ನ ತಂದೆತಾಯಿಯು ಒಬ್ಬರ ನಂತರ ಒಬ್ಬರಂತೆ ಜ್ವರ ಪೀಡಿತರಾದಾಗ, ಪುರುಷೋತ್ತಮ್ ಮಿಸಾಲ್ ಭಯಭೀತರಾದರು. “ಗ್ರಾಮದ ಅನೇಕರು ಅದಾಗಲೇ ಈ ಸೋಂಕಿಗೆ ಒಳಗಾಗಿದ್ದರು (ಪಾಸಿಟಿವ್)” ಎಂಬುದಾಗಿ ಪುರುಷೋತ್ತಮ್ ಅವರ ಪತ್ನಿ ವಿಜಯ್ಮಾಲಾ ತಿಳಿಸಿದರು. “ಆ ಸಮಯದಲ್ಲಿ ಅದು ಭಯಾನಕವಾಗಿತ್ತು.”
ಮಹಾರಾಷ್ಟ್ರದ ತಮ್ಮ ಜಿಲ್ಲೆ, ಬೀಡ್ನಲ್ಲಿ ಸಾರ್ವಜನಿಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವ ಬಗ್ಗೆ ಪುರುಷೋತ್ತಮ್, ವರದಿಗಳನ್ನು ಓದಿದ್ದರು. “ತನ್ನ ತಂದೆತಾಯಿಯರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಬೇಕೆಂದು ಹಾಗೂ ಚಿಕಿತ್ಸೆಯು ದುಬಾರಿಯೆಂದು ಅವರಿಗೆ ತಿಳಿದಿತ್ತು. ವ್ಯಕ್ತಿಯೊಬ್ಬನು ಆಸ್ಪತ್ರೆಯಲ್ಲಿ ಕೇವಲ ಒಂದು ವಾರ ಕಳೆದರೂ, ಬಿಲ್ಲು ಒಂದು ಲಕ್ಷದಷ್ಟಾಗುತ್ತಿತ್ತು. ಪರುಷೋತ್ತಮ್ ಅವರ ಒಂದು ವರ್ಷದ ಆದಾಯಕ್ಕಿಂತಲೂ ಇದು ಹೆಚ್ಚು.” ಎಂದರು ವಿಜಯ್ಮಾಲಾ.
ತಮ್ಮ ಬಡತನದ ಹೊರತಾಗಿಯೂ ಕುಟುಂಬವು ಯಾವುದೇ ಸಾಲವಿಲ್ಲದೆ ಜೀವನ ನಿರ್ವಹಣೆ ಮಾಡುತ್ತಿತ್ತು. ಪರ್ಲಿ ತಾಲ್ಲೂಕಿನ ತನ್ನ ಗ್ರಾಮ, ಹಿವಾರಾ ಗೋವರ್ಧನ್ನಿಂದ ಹತ್ತು ಕಿ. ಮೀ. ದೂರದ ಸಿರ್ಸಾಲಾದಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿದ್ದ 40ರ ಪುರುಷೋತ್ತಮ್ ಅವರಿಗೆ ಆಸ್ಪತ್ರೆಯ ಖರ್ಚಿಗಾಗಿ ಹಣವನ್ನು ಸಾಲವಾಗಿ ತರುವ ಆಲೋಚನೆಯು ಸಂಕಷ್ಟವನ್ನು ತಂದಿತು. ಮಾರ್ಚ್ 2020ರಲ್ಲಿ ಕೋವಿಡ್-19ನ ಪ್ರಕೋಪದಿಂದಾಗಿ ಅಂಗಡಿಯು ಬಹುತೇಕ ಮುಚ್ಚಿಯೇ ಇರುತ್ತಿತ್ತು.
ಆತನ ತಾಯಿಯು ಜ್ವರಕ್ಕೀಡಾದ ರಾತ್ರಿ, ಪುರುಷೋತ್ತಮ್, ಹಾಸಿಗೆಯಲ್ಲಿ ಹೊರಳಾಡುತ್ತಾ ಮಗ್ಗುಲು ಬದಲಿಸುತ್ತಿದ್ದರು. ಮುಂಜಾನೆ ಸುಮಾರು ನಾಲ್ಕರ ಹೊತ್ತಿಗೆ ತನ್ನ ಪತ್ನಿಯೊಂದಿಗೆ, “ಅದು ಕೋವಿಡ್ ಆಗಿದ್ದರೆ?” ಎಂದು ಕೇಳಿದ್ದರು. ಅವರು ಸಂಪೂರ್ಣವಾಗಿ ಎಚ್ಚರಗೊಂಡಿದ್ದು, ತಮ್ಮ ಮನೆಯ ತಗಡಿನ ಮಾಳಿಗೆಯನ್ನು ದಿಟ್ಟಿಸುತ್ತಿದ್ದರು ಎಂಬುದಾಗಿ ಮೂವತ್ತೇಳರ ವಿಜಯ್ಮಾಲಾ ನೆನಪಿಸಿಕೊಳ್ಳುತ್ತಾರೆ. ಆಕೆ, ಒತ್ತಡಕ್ಕೀಡಾಗಬಾರದೆಂದು ಹೇಳಿದಾಗ, ಚಿಂತಿಸಬೇಡ”ವೆಂದ ಆತ, “ಮತ್ತೆ ನಿದ್ರಿಸು”ವಂತೆ ಆಕೆಗೆ ತಿಳಿಸಿದರು.











