ಮಹೇಶ್ವರ ಸಮುಹಾ ಮೊದಲ ಬಾರಿ ಪ್ರವಾಹದಿಂದ ಸ್ಥಳಾಂತರಗೊಂಡಿದ್ದು ಅವರಿಗೆ ಕೇವಲ ಐದು ವರ್ಷ. “ಮೊದಲಿಗೆ ಮಳೆ ನಮ್ಮಲ್ಲಿ ಒಬ್ಬರ ಮನೆಯನ್ನು ಕೊಚ್ಚಿಕೊಂಡು ಹೋಯಿತು. ನಂತರ ನಾವು ಸುರಕ್ಷಿತ ಸ್ಥಳ ಹುಡುಕಿಕೊಂಡು ದೋಣಿಯಲ್ಲಿ ಹೊರಟೆವು. ಕೊನೆಗೆ ಅಲ್ಲೇ ಹತ್ತಿರದಲ್ಲಿದ್ದ ದ್ವೀಪವೊಂದಕ್ಕೆ ಹೋದೆವು” ಎಂದು ಅರವತ್ತು ವರ್ಷದ ಸಮುವಾ ಹೇಳುತ್ತಾರೆ.
ಪದೇ ಪದೇ ಎದುರಾಗುವ ಪ್ರವಾಹ ಮತ್ತು ಅದರಿಂದ ಉಂಟಾಗುವ ಭೂ ಸವಕಳಿಯು ಅಸ್ಸಾಂನ ನದಿ ದ್ವೀಪವಾದ ಮಜುಲಿಯ 1.6 ಲಕ್ಷ ನಿವಾಸಿಗಳ ಜೀವನದ ಮೇಲೆ ಪರಿಣಾಮ ಬೀರಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ದ್ವೀಪದ ಭೂಮಿಯ ವಿಸ್ತೀರ್ಣವು 1956ರಲ್ಲಿ ಸುಮಾರು 1245 ಚದರ ಕಿಲೋಮೀಟರುಗಳಷ್ಟಿತ್ತು. ಈಗ 2017ರಲ್ಲಿ ಅದರ ಅಳತೆ 703 ಚದರ ಕಿಲೋಮೀಟರುಗಳಿಗೆ ಇಳಿದಿದೆ.
"ಇದು ಮೊದಲಿನ ಸಲ್ಮೋರಾ ಅಲ್ಲ" ಎಂದು ಸಮುವಾ ಹೇಳುತ್ತಾರೆ, ಮತ್ತು "ಸುಮಾರು 43 ವರ್ಷಗಳ ಹಿಂದೆ ಬ್ರಹ್ಮಪುತ್ರ [ನದಿ] ಕಾರಣದಿಂದಾಗಿ ಸಲ್ಮೋರಾ ಕೊಚ್ಚಿಹೋಗಿತ್ತು." ನಂತರ ಬ್ರಹ್ಮಪುತ್ರ ಮತ್ತು ಅದರ ಉಪನದಿ ಸುಬನ್ಸಿರಿಯಿಂದ ಹೊಸ ಸಲ್ಮೋರಾ ರೂಪುಗೊಂಡ ನಂತರ, ಸಮುವಾ ಕಳೆದ 10 ವರ್ಷಗಳಿಂದ ತನ್ನ ಪತ್ನಿ, ಮಗಳು ಮತ್ತು ಮಗನ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
ಸಿಮೆಂಟ್ ಮತ್ತು ಮಣ್ಣಿನಿಂದ ಮಾಡಿದ ಅರೆ-ಶಾಶ್ವತ ರಚನೆಯೇ ಅವರ ಈಗಿನ ಹೊಸ ಮನೆ. ಮನೆಯ ಹೊರಗೆ ನಿರ್ಮಿಸಲಾದ ಶೌಚಾಲಯದ ಒಳಗೆ ಹೋಗಲು ಮೆಟ್ಟಿಲುಗಳ ಸಹಾಯ ಬೇಕು. "ಪ್ರತಿ ವರ್ಷ ನಮ್ಮ ಭೂಮಿ ಬ್ರಹ್ಮಪುತ್ರ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ" ಎಂದು ಅವರು ಹೇಳುತ್ತಾರೆ.








