“ನಾವು ಮಾಸ್ಕ್ ಹಾಕ್ಕೊಂಡಿರೋದು ಯಾಕೆ ಗೊತ್ತಾ? ಇದರ ಹಿಂದೆ ನಮ್ಮ ನೋವನ್ನು ಅಡಗಿಸಿ ಇಟ್ಕೊಂಡಿದ್ದೇವೆ” ಎಂದರು ಶ್ಯಾಮಲ ಮನ್ನಾ. 24 ಪರಗಣ ಜಿಲ್ಲೆಯ ದತ್ತಪುಕೂರ್ ಎನ್ನುವ ಊರಿನಿಂದ ಇಲ್ಲಿಗೆ ಬಂದಿದ್ದರು. “ನಮ್ಮ ಸಿಟ್ಟನ್ನ ತೋರಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ.”
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ಕೊಟ್ಟಿದ್ದ ಹೋರಾಟದ ಕಿಚ್ಚು ಈಗ ದೇಶದ ಮೂಲೆ ಮೂಲೆಗೆ ಹರಡಿ, ಈಗ ಬೃಹತ್ ಚಳವಳಿಯಾಗಿ ರೂಪುಗೊಂಡಿದೆ. ಕೋಲ್ಕತಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಲ್ಲೆಡೆಯಂತೆ ಮೀಮ್ಗಳು ಮತ್ತು ಪೋಸ್ಟರುಗಳು ಇಲ್ಲಿಯೂ ಇದ್ದವು. ಅವುಗಳ ಜೊತೆ ಐರನ್ ಮ್ಯಾನ್, ಸೂಪರ್ಮ್ಯಾನ್ ಹಾಗೂ ದುಷ್ಟಶಕ್ತಿಗಳನ್ನು ಸಂಹರಿಸುವ ಸಿನಿಮಾ ಪಾತ್ರಗಳ ಮುಖವಾಡಗಳನ್ನು ಧರಿಸಿ ಈ ಯುವಜನರು ತಮ್ಮದೇ ಬಗೆಯಲ್ಲಿ ಆಕ್ರೋಶವನ್ನು ಹೊರಹಾಕಿದರು.
ಜುಲೈ 24ರಂದು ಕೋಲ್ಕತಾದ ಮೆರವಣಿಗೆ ಆರಂಭಗೊಂಡಿತು. ಹಗಲು ಸುಮಾರು 2:45ಕ್ಕೆ ಶಿಯಾಲ್ದಾ ರೇಲ್ವೇ ಸ್ಟೇಷನ್ ಬಳಿಯಿಂದ ಹೊರಟ ಮೆರವಣಿಗೆ ಎಸ್ಪ್ಲನೇಡ್ ಎನ್ನುವಲ್ಲಿಗೆ ಬಂದು ತಲುಪಿತು. ಹತ್ತಾರು ಸಾವಿರಗಳಷ್ಟು ಜನರು ಈ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಸಾಯಂಕಾಲ ಸುಮಾರು 6 ಗಂಟೆಯ ಹೊತ್ತಿಗೆ ಹೋರಾಟಗಾರರು ಮತ್ತು ಕೋಲ್ಕತಾ ಪೊಲೀಸರ ನಡುವೆ ನಡೆದ ಸಣ್ಣ ಘರ್ಷಣೆಯು ಜಲಫಿರಂಗಿ ಬಳಕೆಯೊಂದಿಗೆ ಕೊನೆಗೊಂಡಿತು.


















