ವಯಾನಾಡಿನ ಮಂಜು ಆವರಿಸಿದ ಇಳಿಜಾರಿನ ಹಸಿರು ಕಣಿವೆಗಳ, ಲ್ಯಾಟರೈಟ್ ಬೆಟ್ಟಗಳ ಮೂಲಕ ತೊರೆ ಹರಿಯುವಲ್ಲಿ ಮಣ್ಣಿನ ಮನೆಯೊಂದು ಕಾಲವನ್ನು ದಿಟ್ಟಿಸುತ್ತಾ ನಿಂತಿದೆ. ಅದರ ಮಣ್ಣಿನ ಗೋಡೆಗಳು ಗಾಳಿಯಲ್ಲಿನಆರ್ದ್ರತೆಯನ್ನು ಉಸಿರಾಡುತ್ತಿವೆ. ಈ ಮನೆಯ ಬಿದಿರಿನ ಗಳು ಬೀಸುವ ಗಾಳಿಗೆ ಕಿರ್ರ್ ಎನ್ನುವ ಸದ್ದನ್ನು ಹೊರಡಿಸುತ್ತಿವೆ. ಅದರ ತೇಗದ ತೊಲೆ ಸುಮಾರು 150 ಮಳೆಗಾಲದ ಭಾರವನ್ನು ತಡೆದು ಸ್ಥಿರವಾಗಿನಿಂತಿದೆ. ಮನೆಯ ನೆಲಕ್ಕೆ ಕೆಂಪು ಮಣ್ಣಿನ ಸಾರಣೆ ಮಾಡಲಾಗಿದೆ. ಅದರ ಮೇಲೆ ದನದ ಸಗಣಿಯನ್ನುಬಳಿಯಲಾಗಿದೆ.
ಕೇರಳದ ಮನಂತವಾಡಿ ಪಟ್ಟಣದ ಬಳಿಯ ಕಮ್ಮನಾ ಗ್ರಾಮದಲ್ಲಿರುವಈ ಮನೆಯಲ್ಲಿ ಭತ್ತದ ಬೀಜಗಳು ತಮ್ಮ ಕಥೆಗಳನ್ನು ಪಿಸುಗುಟ್ಟುತ್ತವೆ.
ಕುರಿಚ್ಯ ಸಮುದಾಯದ ಚೆರುವಯಲ್ ರಾಮನ್ (ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ) ಈ ಬೀಜಗಳ ವಾರಸುದಾರರು. ಅವರ ಸಮುದಾಯ ಒಂದು ಕಾಲದಲ್ಲಿ ಭತ್ತದ ಕೃಷಿಯ ವಿಷಯದಲ್ಲಿ ಇಡೀ ಮಲಬಾರ್ ಪ್ರಾಂತ್ಯಕ್ಕೆ ಹೆಸರುವಾಸಿಯಾಗಿತ್ತು. 73 ವರ್ಷ ವಯಸ್ಸಿನ ಈ ಹಿರಿಯ ರೈತ ದಶಕಗಳ ಕಾಲದ ಆರ್ಥಿಕ ಸಂಕಷ್ಟ, ಆರೋಗ್ಯ ಸಮಸ್ಯೆಗಳು ಮತ್ತು ಸರ್ಕಾರ ಹಾಗೂ ಇತರ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯದ ಹೊರತಾಗಿಯೂ ತಮ್ಮ ಭತ್ತದ ತಳಿಗಳ ರಕ್ಷಣೆಯ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
“ಅವು [ಬೀಜಗಳು] ನಮ್ಮ ಜೀವಂತ ಪೂರ್ವಜರಿದ್ದಂತೆ” ಎನ್ನುತ್ತಾರೆ ರಾಮನ್. ಇವರನ್ನು ಊರಿನ ಜನರು ಪ್ರೀತಿ ಮತ್ತು ಗೌರವದಿಂದ ರಾಮೆಟ್ಟನ್ ಎಂದು ಕರೆಯುತ್ತಾರೆ. ಇವರು ಕೇರಳದ ಕೃಷಿಯ ಆತ್ಮದ ರಕ್ಷಕ ಎಂದೇ ಖ್ಯಾತರು. ಒಂದು ಕಾಲದಲ್ಲಿ ಇಲ್ಲಿನ ಮನೆಗಳ ಸಂಪತ್ತನ್ನು ಅವರ ಮನೆಗಳ ಕಣಜದಲ್ಲಿ ಸಂಗ್ರಹಿಸಲಾಗಿರುವ ವಿವಿಧ ತಳಿಗಳ ಅಕ್ಕಿಯ ಮೂಲಕ ಅಳೆಯಲಾಗುತ್ತಿತ್ತು.
ರಾಮನ್ ತನ್ನ ಪೂರ್ವಜರ ಈ ಆಸ್ತಯನ್ನು ವೈವಿಧ್ಯತೆಯಜೀವಂತ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಅವರ ಭತ್ತದ ಕಣಜದಲ್ಲಿ ವಯನಾಡಿನಲ್ಲಷ್ಟೇ ಕಾಣಸಿಗುವ 50 ಸಾಂಪ್ರದಾಯಿಕ ತಳಿಗಳು ಮತ್ತು ಕೇರಳದ ಇತರ ಭಾಗಗಳಿಂದ ಸಂಗ್ರಹಿಸಿದ 14 ತಳಿಗಳಿವೆ. ಪ್ರತಿ ಹಂಗಾಮಿನಲ್ಲೂಈ ತಳಿಗಳ ಭತ್ತವನ್ನುಬೆಳೆಯುವ ಅವರು ಈ ತಳಿಗಳ ಬೀಜವನ್ನು ಕಾಪಿಟ್ಟುಕೊಳ್ಳುತ್ತಾರೆ. ಸಾಂಪ್ರದಾಯಿಕಕೃಷಿಗೆ ಬದ್ಧರಾಗಿರುವ ಎಲ್ಲರಿಗೂ ಈ ಬೀಜಗಳನ್ನು – ಬುಡಕಟ್ಟು ರೈತರು, ವೈಯಕ್ತಿಕ ಬೆಳೆಗಾರರು, ಸಂಶೋಧಕರು ಮತ್ತು ಸಂಸ್ಥೆಗಳಿಗೆ – ಉಚಿತವಾಗಿ ಹಂಚುತ್ತಾರೆ. ಅವರು ಹೇಳುವಂತೆ "ಪ್ರತಿ ಭತ್ತಕ್ಕೂ ಒಂದು ಆತ್ಮವಿದೆ. ಅದರಲ್ಲಿ ಮಣ್ಣು, ಮಳೆ, ತಲೆಮಾರುಗಳಸ್ಪರ್ಶವನ್ನು ನೆನಪುಗಳಿವೆ. ಈ ತಳಿಗಳನ್ನು ಕಳೆದುಕೊಳ್ಳುವುದೆಂದರೆ ನಮ್ಮ ಇತಿಹಾಸವನ್ನೇ ಕಳೆದುಕೊಳ್ಳುವುದು."
ಅವರ ಮನೆಯ ಮುಂಭಾಗದ ಕೋಣೆಯ ಮಂದ ಬೆಳಕಿನಡಿ ಅಪರೂಪದ ಭತ್ತದ ತಳಿಗಳ ಬೀಜ ಚೀಲಗಳನ್ನು ಒಂದರ ಮೇಲೊಂದರಂತೆ ಹೇರಿ ಇಡಲಾಗಿದೆ. ಕಾಣಬಲ್ಲ ಕಣ್ಣುಗಳಿಗೆ ಈ ಚೀಲಗಳು ಇತಿಹಾಸದ ರಕ್ಷಕರಂತೆ ಕಾಣುತ್ತವೆ. ಪ್ರತಿಯೊಂದು ಚೀಲಕ್ಕೂ ಮಲಯಾಳಂ ಭಾಷೆಯಲ್ಲಿ ಜೋಗುಳದಂತೆ ಕೇಳಿಸುವ ಹೆಸರುಗಳ ಚೀಟಿಯನ್ನು ಕಟ್ಟಲಾಗಿದೆ: ಚೆನ್ನೆಲು, ತೊಂಡಿ, ಚೆಂಬಕಂ, ವೆಳಿಯಾನ್, ಗಂಧಕಸಾಳ, ಕಾಯಮ.
ಗಂಧಕಸಾಳ ಅಕ್ಕಿಯಿಂದ ಅನ್ನ ಮಾಡಿದರೆ ಅದರ ಹಬೆಯಲ್ಲಿ ಮಲ್ಲಿಗೆ ಮತ್ತು ಶ್ರೀಗಂಧದ ಪರಿಮಳ ಹೊಂದಿರುತ್ತದೆ ಎಂದು ರಾಮನ್ ಪರಿಗೆ ವಿವರಿಸಿದರು. ಕಾಯಮ, (ಇದಕ್ಕೆ ಜೀರಕಸಾಳ ಎಂದೂ ಕರೆಯುತ್ತಾರೆ) ಮಲಬಾರ್ ಪ್ರದೇಶದ ಬಿರಿಯಾನಿಯ ಬೆಣ್ಣೆಯ ಪರಿಮಳವನ್ನು ಹೊಂದಿರುತ್ತದೆ. ಚೆಂಬಕಂ ಅಕ್ಕಿ ಸಿಹಿ ಹಾಗೂ ಸೂಕ್ಷ್ಮ ರುಚಿಯನ್ನು ಹೊಂದಿದ್ದು, ಪಾಯಸದಲ್ಲಿ ಇದನ್ನು ಬೆರೆಸಿದರೆ ತೆಂಗಿನ ಹಾಲಿನೊಂದಿಗೆ ಕರಗಿಹೋಗುತ್ತದೆ.










