ದಶರಥ್ ಮುಸಾಹರ್ ಅವರ ಮನೆಯಿಂದ ಹೆಚ್ಚುಕಮ್ಮಿ 100 ಮೀಟರ್ ದೂರದಲ್ಲಿ ಒಂದು ಕೈಪಂಪ್ ಇದೆ. ಅಲ್ಲಿ ದಿನವಿಡೀ ಹೆಂಗಸರು ಮೈಕೈ ತೊಳೆಯುವಾಗ, ಬಟ್ಟೆ ಒಗೆಯುವಾಗ ಆ ಕೈಪಂಪಿನಿಂದ ನೀರೆತ್ತುವ ಶಬ್ಧವನ್ನು ಕೇಳಬಹುದು.
ಸರ್ಕಾರ ವೋರ್ನರ್ ಗ್ರಾಮದಲ್ಲಿ ಹಾಕಿರುವ ಈ ಕೈಪಂಪಿನಿಂದ ನೀರೆತ್ತಲು ದಶರಥ್ ಅವರ ಕುಟುಂಬಕ್ಕೆ ಮಾತ್ರ ಅವಕಾಶವಿಲ್ಲ. ಮುಸಾಹರ್ಗಳು ದಲಿತರು, ಪಲಮುದಲ್ಲಿರುವ ಈ ಕೈಪಂಪಿನ ನೀರನಲ್ಲಿ ಇವರಿಗೆ ಯಾವುದೇ ಪಾಲಿಲ್ಲ.
“ಹಮನ್ ಕೆ ಗರಿ ದೆವಾಲೆ, ಕಹಲೆ ನಾ ಕಿ ಕಹಿ ಓರ್ ಸೆ ಪಾನಿಯೋ ಬರೋ [ ಅವರು ನಮಗೆ ಬೈದು, ಬೇರೆ ಕಡೆಯಿಂದ ನೀರು ತರಲು ಹೇಳುತ್ತಾರೆ],” ಎಂದು ದಶರಥ್ ಮುಸಾಹರ್ ಹೇಳುತ್ತಾರೆ. ತಮ್ಮ ಕೊಡಪಾನಗಳನ್ನು ಎಸಿತಾರೆ ಎಂದು ಅವರು ಹೇಳುತ್ತಾರೆ.
ರಾಮಾವತಾರ್ ಚೌಧರಿ ಅವರ ಮನೆ ಈ ಕೈಪಂಪಿನ ಪಕ್ಕದಲ್ಲೇ ಇದೆ. "ಅವರು ಕ್ಲೀನಾಗಿ ಇಟ್ಟುಕೊಳ್ಳುವುದಿಲ್ಲ, ಅದಕ್ಕೆ ಅವರಿಗೆ ನೀರು ತೆಗೆದುಕೊಳ್ಳಲು ಬಿಡೋದಿಲ್ಲ. ಯಾರಾದ್ರೂ ಆ ನೀರನ್ನು ಕುಡಿತಾರಾ?” ಎಂದು ಇಲ್ಲಿ ವಾಸಿಸುವ 2,749 ಜನರಲ್ಲಿ ಮೂರನೇ ಒಂದು ಭಾಗದಷ್ಟು ಇರುವ ಮುಸಾಹರ್ ದಲಿತರ ವಿರುದ್ಧ ಬಹಿರಂಗವಾಗಿ ನಡೆಸುವ ತಾರತಮ್ಯದ ಬಗ್ಗೆ ಈ ವರದಿಗಾರರು ಕೇಳಿದಾಗ ಚೌಧರಿ ಉತ್ತರಿಸುತ್ತಾರೆ (ಜನಗಣತಿ 2011).








