ನಾವು ಆಗಷ್ಟೇ ಊಟ ಮಾಡಿ ಬಟ್ಟಲುಗಳನ್ನು ಬದಿಗಿಟ್ಟು ಕುಳಿತಿದ್ದೆವು. ಅಲ್ಲೇ ಇದ್ದ ವಿಮಲಾ ಥಾರ್ ಮರುಭೂಮಿಯ ಒಂದು ಹಿಡಿ ಮರಳನ್ನು ತಟ್ಟೆಯೊಂದಕ್ಕೆ ಸುರಿದು ಅದನ್ನು ಸ್ವಚ್ಛಗೊಳಿಸತೊಡಗಿದರು. ಅವರು ಮರಳನ್ನು ತಟ್ಟೆಗೆ ಉಜ್ಜುತ್ತಿದ್ದರೆ ಅದಕ್ಕೆ ಅಂಟಿಕೊಂಡಿದ್ದ ಅನ್ನದ ಅಗುಳು ಹಾಗೂ ಜಿಡ್ಡು ಬಿಟ್ಟುಹೋಗತೊಡಗಿತು. “ಮರಳಿನಿಂದ ತೊಳೆದರೆ ಮಾತ್ರ ಪಾತ್ರಗಳು ಸ್ವಚ್ಛವಾಗುತ್ತವೆ. ನೀರಿನಿಂದ ತೊಳೆದರೆ ಆಗೋದಿಲ್ಲ” ಎಂದು ಗುಲಾಬಿ ಬಣ್ಣದ ಸೀರೆಯ ಸೆರಗಿನಡಿ ತಮ್ಮ ಮುಖವನ್ನು ಮರೆಮಾಡಿಕೊಂಡಿದ್ದ ವಿಮಲಾ ಹೇಳಿದರು.
ಇದರ ತಲೆಬುಡ ಅರ್ಥವಾಗದ ನಾನು ಅವರ ಹರುಕು-ಮುರುಕು ಹಿಂದಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಲೇ. ʼಯಾಕೆ?ʼ ಎಂದೆ.
“ಇಲ್ಲಿನ ನೀರಿನಲ್ಲಿ ಸೋಡಿಯಂ ಕ್ಲೋರೈಡ್ [NaCl - ಅಂದರೆ ಉಪ್ಪು] ಅಂಶ ತುಂಬಾ ಇರುತ್ತೆ” ಎಂದು ನನ್ನ ಸ್ನೇಹಿತೆ 27 ವರ್ಷದ ಪುಷ್ಪಾ ಚೌಹಾಣ್ ಮಧ್ಯೆ ಪ್ರವೇಶಿಸಿ ಹೇಳಿದರು. ಅವರು ವಿಮಲಾ ಅವರ ನಾದಿನಿಯಾಗಿದ್ದು, ಇಂದು ನನಗೆ ಭಾಷಾಂತರಕಾರರಾಗಿ ಸಹಾಯ ಮಾಡುತ್ತಿದ್ದರು. "ನಾವು ನೀರನ್ನು ಬಳಸಿದರೆ ಪಾತ್ರೆಗಳ ಮೇಲೆ ಕಲೆಗಳು ಹಾಗೆಯೇ ಉಳಿಯುತ್ತವೆ. ಇಲ್ಲಿನ ನೀರು ತುಂಬಾ ಭಾರಿ [ಭಾರವಾದದ್ದು] ಮತ್ತು ಖಾರಾ [ಉಪ್ಪು ಮಿಶ್ರಿತ]."
ವಿಶ್ವದ ಒಂಬತ್ತನೇ ಅತಿ ದೊಡ್ಡ ಉಪೋಷ್ಣವಲಯದ ಮರುಭೂಮಿಗೆ ನಿಮಗೆ ಸ್ವಾಗತ. ಇಲ್ಲಿನ ಅಂತರ್ಜಲದ ಉಪ್ಪಿನ ರುಚಿಗೆ ಭೌಗೋಳಿಕ ಕಾರಣಗಳಿವೆ. ಇಲ್ಲಿನ ಬಾಷ್ಪೀಕರಣದ ತೀವ್ರತೆ ಮಳೆಯ ಪ್ರಮಾಣಕ್ಕಿಂತ ತೀರಾ ಹೆಚ್ಚು. ಸಾವಿರಾರು ವರ್ಷಗಳಿಂದ ಹೀಗೆಯೇ ಆಗುತ್ತಿರುವುದರಿಂದ ಮಣ್ಣು ಮತ್ತು ನೀರಿನಲ್ಲಿ ಉಪ್ಪು ಹಾಗೂ ಖನಿಜಗಳು ಸಂಗ್ರಹಗೊಂಡು ಶೇಖರಣೆಯಾಗಿವೆ. ಈ ಮರುಭೂಮಿಯು ಗುಜರಾತ್, ರಾಜಸ್ಥಾನ ಮತ್ತು ಗಡಿಯಾಚೆಗಿನ ಪಾಕಿಸ್ತಾನದ ಪಂಜಾಬ್ ಹಾಗೂ ಸಿಂಧ್ ಪ್ರಾಂತ್ಯಗಳವರೆಗೆ ಹರಡಿಕೊಂಡಿದೆ.
ಈ ಮರುಭೂಮಿಯ ನಡುವೆ, ಹೊಸದಾಗಿ ರಚನೆಯಾದ (2023) ರಾಜಸ್ಥಾನದ ಫಲೌದಿ ಜಿಲ್ಲೆಯಲ್ಲಿ ದಯಾ ಕೋರ್ ಎನ್ನುವ ಹೆಸರಿನ ಹಳ್ಳಿಯಿದೆ. ಅದರ ತುದಿಯಲ್ಲೇ ವಿಮಲಾ ಅವರ ಮನೆಯಿದೆ. ಮನೆಯ ಹೊರಗಡೆ, 32 ವರ್ಷದ ವಿಮಲಾ ದೇವಿ ಮಂಡಿಯೂರಿ ಕುಳಿತು ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.












