ಅತ್ತ ಗೋಧಿ ಹೊಲದಲ್ಲಿ ಫಸಲು ಬಂಗಾರದ ಬಣ್ಣಕ್ಕೆ ತಿರುಗುತ್ತಿದ್ದರೆ, ಇತ್ತ ದಲ್ಬಾರ್ ಸಿಂಗ್ ಅವರ ಆತಂಕ ಹೆಚ್ಚುತ್ತಾ ಸಾಗುತ್ತಿತ್ತು. ಇನ್ನೇನು ಕಟಾವಿನ ಸಮಯ ಬರುವುದಿತ್ತು. ಈ ಸಮಯದಲ್ಲಿ ಡೀಸೆಲ್ ಎನ್ನುವುದು ಕೇವಲ ಇಂಧನವಲ್ಲ, ಅದು ಬದುಕಿನ ಅನಿವಾರ್ಯ ಭಾಗವಾಗಿಬಿಡುತ್ತದೆ. ಇದೇ ಕಾರಣಕ್ಕಾಗಿ ಬರ್ನಾಲಾ ಜಿಲ್ಲೆಯ ಪಟ್ಟಿ ಗ್ರಾಮದ ಈ ಭೂಹೀನ ದಲಿತ ರೈತ, ತನ್ನ ಡೀಸೆಲ್ ಡ್ರಮ್ ಸದಾ ತುಂಬಿರುವಂತೆ ನೋಡಿಕೊಳ್ಳಲು ಶೇ. 18ರಷ್ಟು ವಾರ್ಷಿಕ ಬಡ್ಡಿದರದಲ್ಲಿ ಹಣವನ್ನು ಸಾಲವಾಗಿ ಪಡೆಯಲು ಕಿಂಚಿತ್ತೂ ಹಿಂಜರಿಯಲಿಲ್ಲ.
55 ವರ್ಷದ ದಲ್ಬಾರಾ ಸಿಂಗ್ ತನ್ನ ಮೂವರು ಒಡಹುಟ್ಟಿದವರೊಂದಿಗೆ ಸೇರಿ, ಅನಿವಾಸಿ ಭಾರತೀಯರೊಬ್ಬರ ಬಳಿ ಗೇಣಿಗೆ ತೆಗೆದುಕೊಂಡಿರುವ 20 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅಲ್ಲದೆ ಅವರು ಗೋಧಿ ಕೊಯ್ಲಿನ ಹಂಗಾಮಿನಲ್ಲಿ ಹೈನುಗಾರರಿಗಾಗಿ ಗೋಧಿ ಹುಲ್ಲನ್ನು ಕತ್ತರಿಸಿ ಕೊಡುವ ಕೆಲಸವನ್ನೂ ಮಾಡುತ್ತಾರೆ. ತಮ್ಮ ಟ್ರ್ಯಾಕ್ಟರ್ ಮತ್ತು ರೀಪರ್ ಯಂತ್ರದತ್ತ ಕೈತೋರಿಸುತ್ತಾ ಅವರು ಹೀಗೆಂದರು, "ಇವು ವಿಪರೀತ ಡೀಸೆಲ್ ಕುಡಿಯುತ್ತವೆ. ಪೂರ್ಣ ಸಾಮರ್ಥ್ಯದಲ್ಲಿ ಇವುಗಳನ್ನು ನಡೆಸಿದರೆ ಈ ಒಂದು ಡ್ರಮ್ ಡೀಸೆಲ್ ಎರಡು ದಿನಗಳಿಗಷ್ಟೇ ಬರುತ್ತದೆ."
ಆದರೆ ಇಷ್ಟು ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳುವುದು? “ಬೇರೆ ದಾರಿ ಏನಿದೆ? ವಾರದ ನಂತರ ಡೀಸೆಲ್ ಸಿಗದೆ ಹೋದರೆ ಏನು ಮಾಡೋದು? ಫಸಲು ಪೂರ್ತಿ ಕೊಳೆತು ಹೋಗುತ್ತದೆ. ಮಗು ನೋಡಿಕೊಂಡ ಹಾಗೆ ನೋಡಿಕೊಂಡಿದ್ದೇನೆ ಬೆಳೆಯನ್ನು” ಎಂದು ಅವರು ಹೇಳುತ್ತಾರೆ. ಕಳೆದ ಒಂದು ವರ್ಷದಿಂದ ಅವರಿಗೆ ಯಾವುದೇ ಸಂಪಾದನೆ ಇರದ ಕಾರಣ ಅವರ ಆದಾಯ ಇಷ್ಟೇ ಎಂದು ಲೆಕ್ಕ ಹಾಕುವುದು ಕಷ್ಟ. ಅವರ ನಷ್ಟ ಮತ್ತು ಸಾಲದ ಬಾಬ್ತು ಏರುತ್ತಲೇ ಸಾಗುತ್ತಿದೆ.
ಪಂಜಾಬ್ ರೈತರ ಪಾಲಿಗೆ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವೆನ್ನುವುದು ಕೇವಲ ಸುದ್ದಿಯಲ್ಲ. ಅದು ಅವರ ಸಾಲದ ಹೊರೆಯನ್ನು ಇನ್ನಷ್ಟು ಹೆಚ್ಚಿಸುವ ಪಿಡುಗು. ಇನ್ನು ದಲ್ಬಾರಾ ಸಿಂಗ್ ಮತ್ತು ಅವರಂತಹ ಅನೇಕರ ಪಾಲಿಗೆ ಈ ಯುದ್ಧ ಇನ್ನೂ ದೊಡ್ಡ ಬಿಕ್ಕಟ್ಟು. ಇವರ ಮಕ್ಕಳು ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಮಿಕರಾಗಿ ಮತ್ತು ಅರೆಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಈ ಯುದ್ಧ ಅವರ ಭವಿಷ್ಯವನ್ನೇ ಡೋಲಾಯಮಾನ ಸ್ಥಿತಿಗೆ ತಂದಿಟ್ಟಿದೆ.ದಲ್ಬಾರಾ ಸಿಂಗ್ ಕಳೆದ ತಿಂಗಳಷ್ಟೇ 4 ಲಕ್ಷ ರೂಪಾಯಿ ಸಾಲ ಮಾಡಿ ಮಗನನ್ನು ಸೈಪ್ರಸ್ಗೆ ಕಳುಹಿಸಿದ್ದರು. ಇದೀಗ ಯುದ್ಧದಿಂದಾಗಿ ಅಲ್ಲಿನ ಪ್ರವಾಸೋದ್ಯಮ ಮತ್ತು ಸಾರಿಗೆ ವಲಯ ಕುಸಿದಿದ್ದು, ಅವರ ಮಗ ಕೆಲಸ ಸಿಗದೆ ಮನೆಗೆ ಮರಳುತ್ತಿದ್ದಾರೆ. ಇದು ದಲ್ಬಾರ್ ಸಿಂಗ್ ಅವರನ್ನು ಚಿಂತೆಗೆ ದೂಡಿದೆ. ಜಾಗತಿಕ ಮಟ್ಟದ ಈ ಯುದ್ಧ ತನ್ನ ಬದುಕಿನ ಬೀರುತ್ತಿರುವ ಪರಿಣಾಮದ ಅರಿವಿಲ್ಲದ ಅವರು, ನಮ್ಮ ಮಾತುಕತೆಯ ನಡುವೆ ಒಮ್ಮೆಯೂ ಯುದ್ಧದ ಕುರಿತು ಚರ್ಚಿಸಲಿಲ್ಲ. ಇದೆಲ್ಲದಕ್ಕೂ ತನ್ನ ಹಣೆಬರೆಹವೇ ಕಾರಣ ಎಂದ ಅವರ ಮಾತಿನಲ್ಲಿ ಮುಗ್ಧತೆ ಎದ್ದು ಕಾಣುತ್ತಿತ್ತು.
ಗೋಧಿ ಕೊಯ್ಲಿನ ದಿನ ಹತ್ತಿರವಾಗುತ್ತಿದ್ದಂತೆ ಯುದ್ಧವೂ ಆರಂಭಗೊಂಡಿತು. ಇದರಿಂದ ಸೃಷ್ಟಿಯಾದ ಅನಿಶ್ಚಿತತೆಗೆ ಅಂಜಿದ ರೈತರು ಹದಿನೈದು ದಿನಗಳ ಹಿಂದೆ ಮುಂಚಿತವಾಗಿ ಡೀಸೆಲ್ ಸಂಗ್ರಹಿಸಿಡಲು ಬಂಕುಗಳತ್ತ ದೌಡಾಯಿಸಿದರು. ಡೀಸೆಲ್ ಬಂಕುಗಳಲ್ಲಿ ಹಿಂದಿನ ಟ್ರಾಲಿಯಲ್ಲಿ ಡ್ರಮ್ಮುಗಳನ್ನಿರಿಸಿಕೊಂಡ ಟ್ರಾಕ್ಟರುಗಳ ಸಾಲು ತೀರಾ ಸಾಮಾನ್ಯವಾಗಿತ್ತು ಈ ಸಮಯದಲ್ಲಿ. “ಅವರೆಲ್ಲರೂ ವಿಪರೀತ ಬಡ್ಡಿ ಕೊಟ್ಟು ಸಾಲ ತರುತ್ತಿದ್ದಾರೆ” ಎನ್ನುತ್ತಾರೆ ಪಟಿಯಾಲ ಜಿಲ್ಲೆಯ ಭಾರತಿ ಕಿಸಾನ್ ಯೂನಿಯನ್ (ಡಕೌಂಡಾ) ನಾಯಕರಘಬೀರ್ ಸಿಂಗ್ ದಕಾಲಾ.




