ಶ್ರೀನಗರದ ಹಾರ್ವಾನ್ ಪ್ರದೇಶದ ಶಾಂತ ರಸ್ತೆಯಲ್ಲಿ ಜೋರಾದ ಟಪ್ ಟಪ್ ಎನ್ನುವ ಸದ್ದು ಕೇಳುತ್ತಿದೆ. ಮೊಹಮ್ಮದ್ ಅಫ್ಜಲ್ ಮತ್ತು ಸಾಜಿದ್ ಖಾನ್ ವಾಲ್ ನಟ್ (ಅಕ್ರೋಟ್/ಜುಗ್ಲಾನ್ಸ್ ರೆಜಿಯಾ) ಮರವೊಂದನ್ನು ಹತ್ತಿ ಅದರ ಕಾಯಿಗಳನ್ನು ಕೊಯ್ಯುತ್ತಿದ್ದಾರೆ. ಅವರು ಕೋಲಿನಿಂದ ಬಡಿಯುತ್ತಿರುವ ರಭಸಕ್ಕೆ ಮರ ವಾಲ್ ನಟ್ ಕಾಯಿಗಳನ್ನು ಉದುರಿಸುತ್ತಿದೆ.
100 ಅಡಿ ಎತ್ತರದ ಅಥವಾ 10 ಅಂತಸ್ತಿನ ಕಟ್ಟಡದಷ್ಟು ಎತ್ತರದ ವಾಲ್ ನಟ್ ಮರಗಳಿಂದ ಕಾಯಿ ಕೊಯ್ಯವುದು ಅಪಾಯಕಾರಿ ಕೆಲಸ. ವಾಲ್ ನಟ್ ಕೊಯ್ಲು ಮಾಡುವವರು ಹೆಚ್ಚು ಕೌಶಲಪೂರ್ಣ ಕಾರ್ಮಿಕರಾಗಿದ್ದು, ಅವರನ್ನು 'ಚನನ್ ವೊಯೆಲ್' (ವಾಲ್ ನಟ್ ಕೊಯ್ಯುವವರು) ಎಂದು ಕರೆಯಲಾಗುತ್ತದೆ. ಜಮ್ಮುವಿನ ರಾಜೌರಿಯ ನಿವಾಸಿ, 24 ವರ್ಷದ ಮೊಹಮ್ಮದ್ ಅಫ್ಜಲ್ ಕಳೆದ ಆರು ವರ್ಷಗಳಿಂದ ವಾಲ್ ನಟ್ ಕೊಯ್ಲು ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಬಕರ್ವಾಲ್ ಸಮುದಾಯಕ್ಕೆ ಸೇರಿದವರಾದ ಈ 24 ವರ್ಷದ ಯುವಕ (ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿಮಾಡಲಾಗಿದೆ) ಈ ಕೆಲಸಕ್ಕಾಗಿ ಕಾಶ್ಮೀರಕ್ಕೆ ಪ್ರತಿ ಹಂಗಾಮಿನಲ್ಲಿ ಬರುತ್ತಾರೆ. "ಮರಗಳು ಬಹಳ ಎತ್ತರವಿರುತ್ತವೆಯಾದ ಕಾರಣ ಮರ ಹತ್ತುವಾಗ ಭಯಾಗುತ್ತದೆ” ಎಂದು ಅವರು ಹೇಳುತ್ತಾರೆ. ವಾಲ್ ನಟ್ ಕೊಯ್ಯುವುದರ ಜೊತೆಗೆ ಅವರು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸೇಬು ಪ್ಯಾಕ್ ಮಾಡುವುದು ಮತ್ತು ಮರ ಕಡಿಯುವ ಕೆಲಸಗಳನ್ನು ಮಾಡುತ್ತಾರೆ. ಈ ಮೂಲಕ ಅವರು ದಿನವೊಂದಕ್ಕೆ ದಿನಕ್ಕೆ 500-700 ರೂಪಾಯಿಯ ತನಕ ಸಂಪಾದಿಸುತ್ತಾರೆ. ಅಫ್ಜಲ್ ಮತ್ತು ಇತರ ಕೆಲಸಗಾರರು ತಾವು ಕೊಯ್ಲು ಮಾಡುವ ತೋಟದ ಬಳಿಯೇ ತಾತ್ಕಾಲಿಕವಾಗಿ ಗುಡಿಸಲು ಮಾಡಿಕೊಂಡು ವಾಸವಿರುತ್ತಾರೆ.
ಕೊಯಿಲಿನ ಸಮಯದಲ್ಲಿ, ಆಗಸ್ಟ್ನಿಂದ ಅಕ್ಟೋಬರ್ ತನಕ, ಅಫ್ಜಲ್ ಅವರ ಕೆಲಸದ ದಿನವು ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿ ಸಾಮಾನ್ಯವಾಗಿ ಸಂಜೆ ಆರು ಗಂಟೆಗೆ ಕೊನೆಗೊಳ್ಳುತ್ತದೆ. ಒಂದು ದಿನದಲ್ಲಿ ಮರದ ಎತ್ತರವನ್ನು ಅವಲಂಬಿಸಿ ನಾಲ್ಕರಿಂದ ಐದು ಮರಗಳನ್ನು ಏರಿ ಕಾಯಿ ಕೊಯ್ಯುತ್ತಾರೆ, ಕೈಗೆಟುಕದ ಕಾಯಿಗಳನ್ನು ಉದುರಿಸಲು ಮರವನ್ನು ಏರಿ, ವಿಲೋ ಅಥವಾ ಇತರ ಬಲಿಷ್ಠ ಮರದ ಕೋಲನ್ನು ಬಳಸಿ ಕೊಂಬೆಗಳನ್ನು ಬಡಿಯುತ್ತಾರೆ.
ವಾಲ್ ನಟ್ ಕೊಯ್ಯುವುದು ಸವಾಲಿನ ಕೆಲಸವೆಂದು ಅಫ್ಜಲ್ ಹೇಳುತ್ತಾರೆ. “ಇದು ಬಹಳ ಅಪಾಯಕಾರಿ ಕೆಲಸ” ಎಂದು ಅವರು ಹೇಳುತ್ತಾನೆ. “ಐದು ಕಿಲೋಗ್ರಾಂ ತೂಕದ ಕೋಲನ್ನು ಹಿಡಿದುಕೊಂಡು, ವಾಲ್ ನಟ್ ಮೇಲೆ ಬಲವಾಗಿ ಬಡಿಯುವಾಗ ಮರದ ಮೇಲೆ ಸಮತೋಲನ ಕಾಯ್ದುಕೊಳ್ಳಲು ಬಹಳ ಚಾಕಚಕ್ಯತೆ ಬೇಕಾಗುತ್ತದೆ.”
ಕೆಲವು ವಾಲ್ ನಟ್ ಮರಗಳು, ವಿಶೇಷವಾಗಿ ಬುಡಗಾಮ್ನಲ್ಲಿ, 150 ಅಡಿ ಎತ್ತರದವರೆಗೆ ಬೆಳೆಯುತ್ತವೆ. “ಮಳೆಯ ದಿನಗಳಲ್ಲಿ, ಮರಗಳು ತುಂಬಾ ಜಾರುವ ಕಾರಣ ಆ ಸಮಯದಲ್ಲಿ ನಾವು ಮರ ಏರುವುದಿಲ್ಲ. ಅದೃಷ್ಟವಶಾತ್ ಇದುವರೆಗೆ ನನಗೆ ಯಾವುದೇ ಅಪಘಾತಗಳು ಎದುರಾಗಿಲ್ಲ” ಎಂದು ಅಫ್ಜಲ್ ಹೇಳುತ್ತಾರೆ.
ಆದರೆ ಅವರ ಕುಟುಂಬಕ್ಕೆ ಅವರ ಕುರಿತು ಚಿಂತೆ ಕಾಡುತ್ತಿರುತ್ತದೆ. “ನನ್ನ ಅಮ್ಮನಿಗೆ ನಾನು ಈ ಕೆಲಸ ಮಾಡುವುದು ಇಷ್ಟವಿಲ್ಲ. ನಮ್ಮ ಊರಿನ ಸಾಕಷ್ಟು ಗಂಡಸರು ವಾಲ್ ನಟ್ ಮರದಿಂದ ಬಿದ್ದು ಸತ್ತಿದ್ದಾರೆ” ಎಂದು ಅವರು ಒಪ್ಪಿಕೊಳ್ಳುತ್ತಾರೆ.














