“ನಾನು ಮನೆಗೆ ಹೋಗುವುದು ಸ್ನಾನ ಮಾಡುವುದಕ್ಕೆ ಮಾತ್ರ” ಎಂದು ಮಿರ್ಜಾ ಮೊಹಮ್ಮದ್ ಖಾನ್ ತಮಾಷೆಯ ಧ್ವನಿಯಲ್ಲಿ ಹೇಳುತ್ತಾರೆ. ಶ್ರೀನಗರದಿಂದ ಗುರೆಜ್ ಕಣಿವೆಗೆ ಹೋಗುವ ಪ್ರವಾಸಿಗ ಕ್ಷಣ ಕಾಲ ತಂಗಿ ಹೋಗುವ ತ್ರಾಗ್ಬಾಲ್ ಎನ್ನುವಲ್ಲಿರುವ ಖಾನ್ ಟೀ ಸ್ಟಾಲಿನಲ್ಲಿ ಕುಳಿತು ಅವರು ಮಾತನಾಡುತ್ತಿದ್ದರು. ವಿರಳ ಜನಸಂಖ್ಯೆಯ ಕಾಶ್ಮೀರದ ಈ ಮೂಲೆಯಲ್ಲಿನ, ಸ್ಟಾಲ್ ಮತ್ತು ಅದರ ಬೋರ್ಡನ್ನು ನೋಡದೆ ಮುಂದೆ ಹೋಗಲು ಸಾಧ್ಯವಿಲ್ಲ.
“ಇಲ್ಲಿ ಪ್ರತಿ ನಾಲ್ಕು ದಿನಗಳಿಗೊಮ್ಮೆ 500 ಲೀಟರ್ ನೀರು ಸಿಗುತ್ತದೆ” ಎಂದು ಎಂದು 32 ವರ್ಷದ ಅಂಗಡಿ ಮಾಲೀಕರು ಮಾತು ಮುಂದುವರೆಸುತ್ತಾ ಹೇಳಿದರು. "ನಾನು ಇದನ್ನು ಚಹಾ ತಯಾರಿಸಲು, ಪಾತ್ರೆಗಳನ್ನು ತೊಳೆಯಲು ಮತ್ತು ಇತರ ಅಗತ್ಯ ವಸ್ತುಗಳನ್ನು ತೊಳೆಯಲು ಬಳಸಬೇಕು. ಹೀಗಾಗಿ ಇಲ್ಲಿ ಸ್ನಾನ ಮಾಡುವ ಮೂಲಕ 20-30 ಲೀಟರ್ ನೀರನ್ನು ವ್ಯರ್ಥ ಮಾಡಲು ಸಾಧ್ಯವಿಲ್ಲ! ಒಂದೊಂದು ಹನಿಯನ್ನೂ ಲೆಕ್ಕ ಮಾಡಿ ಖರ್ಚು ಮಾಡಬೇಕು"ಎಂದು ಅವರು ಹೇಳುತ್ತಾರೆ.
ಜ್ದಾನ್ ಪರ್ವತಗಳ ಹಿನ್ನೆಲೆಯಲ್ಲಿರುವ ಟ್ರಾಗ್ಬಾಲ್ ಬಳಿ ಮಿರ್ಜಾ 12 ವರ್ಷಗಳಿಂದ ಸ್ಟಾಲ್ ನಡೆಸುತ್ತಿದ್ದಾರೆ, ಅವರು ಪ್ರವಾಸಿಗರಿಗೆ ಚಹಾ, ಕಾಫಿ, ಮ್ಯಾಗಿ ನೂಡಲ್ಸ್ ಮತ್ತು ಇತರ ಲಘು ತಿಂಡಿಗಳನ್ನು ಒದಗಿಸುತ್ತಿದ್ದಾರೆ. "ಬುಧವಾರದಿಂದ ಭಾನುವಾರದವರೆಗೆ ವಾರದಲ್ಲಿ ಐದು ದಿನಗಳ ಕಾಲ ನಾನು ಇಲ್ಲಿಯೇ ಇರುವುದರಿಂದ ನಾನು ಇದನ್ನು ನನ್ನ ಎರಡನೇ ಮನೆ ಎಂದೇ ಕರೆಯುತ್ತೇನೆ. ಸೋಮವಾರ ಕೆಲಸದ ದಿನವಾಗಿರುವ ಕಾರಣ ಹೆಚ್ಚು ಗಿರಾಕಿಗಳು ಇರುವುದಿಲ್ಲ. ಹೀಗಾಗಿ ಈ ದಿನ ನಾನು ಮನೆಗೆ ಹೋಗುತ್ತೇನೆ” ಎಂದು ಮಿರ್ಜಾ ಹೇಳುತ್ತಾರೆ. ಅವರ ಕುಟುಂಬದ ಮನೆ ಉತ್ತರ ಕಾಶ್ಮೀರದ ಬಂಡಿಪೋರ್ ಜಿಲ್ಲೆಯ ಪೆತ್ಕೂಟ್ ಪ್ರದೇಶದಲ್ಲಿದೆ, ಇದು ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ತ್ರಾಗ್ಬಾಲ್ನಲ್ಲಿ ಮಿರ್ಜಾ ಅಂಗಡಿಯಲ್ಲೇ ಮಲಗುತ್ತಾರೆ. ಈ ಅಂಗಡಿಯು ಒಂದು ಸ್ಟೋರ್ ರೂಮ್ ಮತ್ತು 3 x 6 ಅಡಿ ಮಲಗುವ ಕೋಣೆಯನ್ನು ಹೊಂದಿದೆ.








