ಅರಬ್ಬಿ ಕಡಲಿನ ನೀರು ಮತ್ತೆ ಒಳನಾಡಿಗೆ ನುಗ್ಗುತ್ತಿತ್ತು. ಈ ಕಡಲಿನ ಅಲೆಗಳು ಪಾಲ್ಘರ್ ಜಿಲ್ಲೆಯ ಡಹಣೂ ಕೊಲ್ಲಿಗಳ ಮರಳು ದಿಬ್ಬಗಳು ಮತ್ತು ಅಷ್ಟೇನೂ ಆಳವಿಲ್ಲದ ಕಾಲುವೆಗಳನ್ನು ನುಂಗಿಹಾಕುತ್ತಿದ್ದವು. ಅಮಿತಾ ತಾಂಡೇಲ್ ಅವರಿಗೆ ನಿದ್ದೆ ಹತ್ತಲಿಲ್ಲ. ಅವರು ಅಲೆಗಳ ಉಬ್ಬರ ಹೆಚ್ಚಾಗಿ ಕೊಲ್ಲಿಯಲ್ಲಿ ನೀರು ಹರಿದು ಬರಲು ಕಾಯುತ್ತಿದ್ದರು. ಅದಕ್ಕಾಗಿ ಎಚ್ಚರಗೊಳ್ಳಲು ಅಲರಾಂ ಇಟ್ಟುಕೊಂಡಿದ್ದರು. ಹಣೆಯ ಮೇಲೆ ಬ್ಯಾಟರಿಯ ಲೈಟ್ ಕಟ್ಟಿಕೊಂಡು, ಹೆಗಲ ಮೇಲೆ 10–15 ಕೆಜಿ ತೂಕದ ಬಲೆಯನ್ನು ಹಾಕಿಕೊಂಡು, ಮಧ್ಯರಾತ್ರಿಯ ಆ ಕತ್ತಲಲ್ಲಿ ಅವರು ಹೊರಟರು. ಸುಮಾರು 400 ಮೀಟರ್ ದೂರದಲ್ಲಿರುವ ಕೊಲ್ಲಿಯನ್ನು ತಲುಪಿದರು. ಅಲ್ಲಿ ಕೆಲವು ಹೆಂಗಸರು ಅವರಿಗಾಗಿ ಕಾಯುತ್ತಿದ್ದರು. “ಚಂದ್ರನ ಬೇರೆ ಬೇರೆ ಹಂತಗಳನ್ನು ಅರಿತುಕೊಳ್ಳಲು ಕಲಿಸಿದ್ದು ನನ್ನ ಇಷ್ಟು ವರ್ಷಗಳ ಅನುಭವ. ಹಾಗಾಗಿ ಯಾವಾಗ ಅಲೆಗಳಲ್ಲಿ ಉಬ್ಬರವಿಳಿತ ಉಂಟಾಗುತ್ತದೆ ಎಂಬುದು ನಂಗೆ ಗೊತ್ತಾಗುತ್ತದೆ,” ಎಂದರು ಅಮಿತಾ.
“ನಮ್ಮ ಸಮುದಾಯದ ಮಕ್ಕಳು ಅವರ ಅಪ್ಪ ಅಮ್ಮ ಮೀನು ಹಿಡಿಯೋದನ್ನು ನೋಡುತ್ತಾ ಬೆಳೆಯುತ್ತಾರೆ. ನಂಗೆ 15 ವರ್ಷ ಪ್ರಾಯ ಇದ್ದಾಗ ನನ್ನ ಅಪ್ಪ ನನ್ನನ್ನೂ, ನನ್ನ ತಮ್ಮನನ್ನೂ ಕರೆದುಕೊಂಡು ಹೋಗುತ್ತಿದ್ದರು. ಅವರೇ ನಂಗೆ ಅಲೆಗಳ ಏರಿಳಿತ, ಚಂದ್ರನ ಚಲನೆ, ಕೊಲ್ಲಿಯಲ್ಲಿರುವ ಮೀನುಗಳು ಸಂಚರಿಸುವ ಜಾಗಗಳ ಬಗ್ಗೆ ಕಲಿಸಿದ್ದು,” ಎಂದು 60 ವರ್ಷ ಪ್ರಾಯದ ಅಮಿತಾ ಹೇಳಿದರು. ತಂದೆ ಕಲಿಸಿದ ರೀತಿಯಲ್ಲೇ ಅಲೆಗಳ ಏರಳಿತವನ್ನು ಸುಮಾರು ಐದು ದಶಕಗಳಿಂದ ಗಮನಿಸುತ್ತಾ ಬಂದಿದ್ದಾರೆ.
ಕೊಲ್ಲಿಯ ಅಂಚಿಗೆ ಬಂದು, ಅವರು ಮತ್ತು ಮತ್ತೊಬ್ಬ ಹೆಂಗಸು 100x20 ಅಡಿ ಅಗಲದ ಬಲೆಯನ್ನು ಬಿಡಿಸಿ ಹರಡಿದರು. ಅಮೇಲೆ ಇಬ್ಬರೂ ಬಲೆಯ ತುದಿಗಳನ್ನು ಹಿಡಿದು ಸಮುದ್ರಕ್ಕೆ ಇಳಿದಿರು. ಸುಮಾರು 30 ಅಡಿ ಅಂತರದಲ್ಲಿ ಒಬ್ಬರಿಗೊಬ್ಬರು ನಡೆದುಕೊಂಡು, ಬಲೆಯನ್ನು ನೀರಿನಲ್ಲಿ ಮುಳುಗಿಸಿ ಎಳೆಯುತ್ತಾ ಹೋದರು. ಬಲೆಯಲ್ಲಿ ಏನಾದರೂ ಸಿಕ್ಕಿದೆಯೇ ಎಂಬುದನ್ನು ಬಲೆಯನ್ನು ಎತ್ತಿ ನೋಡುವ ಬದಲು, ಸ್ಪರ್ಶ ಮಾತ್ರದಿಂದಲೇ ಅವರಿಗೆ ಗೊತ್ತಾಗುತ್ತಿತ್ತು.
“ರಾತ್ರಿ ಹೊತ್ತು ನಮ್ಮ ಕಾಲಡಿಯಲ್ಲಿ ಏನಿದೆ ಎಂಬುದೂ ಕಾಣೋದಿಲ್ಲ. ಆಮ್ಚ್ಯಾ ಕಪಾಲಾಲಾ ಬ್ಯಾಟರಿ ಆಸ್ತೇ. ಫಕ್ತ್ ಲೈಟ್ಚ್ಯಾ ಸಿಗ್ನಲ್ವರ್ ಚಾಲ್ತಾತ್ [ಹಣೆಗೆ ಲೈಟ್ ಕಟ್ಟಿಕೊಂಡಿರುತ್ತೇವೆ. ಅವುಗಳ ಬೆಳಕಿನಿಂದಲೇ ನಾವು ಪರಸ್ಪರ ಸಂವಹನ ನಡೆಸುತ್ತೇವೆ]. ಇಲ್ಲಿ ಅಲೆಗಳು ತುಂಬಾ ರಭಸವಾಗಿರುತ್ತವೆ. ಸಣ್ಣ ತಪ್ಪಾದರೂ ಸಮತೋಲನ ಕಳೆದುಕೊಳ್ಳಬಹುದು. ಸೇಪ್ ಇಲ್ಲ ಇಲ್ಲಿ. ಒಮ್ಮೊಮ್ಮೆ ಕುತ್ತಿಗೆ ತನಕ ನೀರಿನಲ್ಲಿ ಮುಳುಗಿರುತ್ತೇವೆ. ಮೀನು ಸಿಗದೆ ವಾಪಾಸ್ ಬಂದರೆ ಆ ಇಡೀ ದಿನ ಒಂದು ರುಪಾಯಿ ಸಂಪಾದನೆಯೂ ಇಲ್ಲವಾಗುತ್ತದೆ. ಹಾಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ,” ಎಂದರು ಅಮಿತಾ. ಕೆಲವೊಮ್ಮೆ ಅವರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನೀರಿನಲ್ಲೇ ಇರುತ್ತಾರೆ. ಕೈಯಲ್ಲಿ ಇರುವ ಬಲೆ ಮೀನುಗಳಿಂದ ತುಂಬದೆ ಅವರು ಖಾಲಿ ಕೈಯಲ್ಲಿ ಮನೆಗೆ ಹಿಂತಿರುಗುವುದಿಲ್ಲ.
ಅಮಿತಾ ಅವರಂತೆ ಇಲ್ಲಿ ಅನೇಕ ಮಂದಿ ಗಂಡಸರು ಮತ್ತು ಹೆಂಗಸರ ಬಳಿ ಸ್ವಂತ ದೋಣಿಗಳಿಲ್ಲ. ಇವರೆಲ್ಲಾ ಡಹಣೂ ತಾಲೂಕಿನ ವರೋರ್ ಗ್ರಾಮದಿಂದ ಕೆಲವೇ ಮೀಟರ್ ದೂರದಲ್ಲಿರುವ ಸುಮಾರು 20 ಕಿಲೋಮೀಟರ್ ಉದ್ದದ ಕೊಲ್ಲಿಯಲ್ಲಿಯೇ ಮೀನು ಹಿಡಿಯುತ್ತಾರೆ. ಇದು ಕಡಲಿನ ಅಲೆಗಳ ಉಬ್ಬರ-ಇಳಿತದ ಪ್ರದೇಶ. ಉಬ್ಬರ ಇಳಿದಾಗ, ನೀರು ಖಾಲಿಯಾಗಿ ಕೊಲ್ಲಿ ಹೊರಗೆ ಕಾಣಿಸಿಕೊಳ್ಳುತ್ತದೆ, ಸಮುದ್ರದ ನೀರು ಮತ್ತೆ ಬಂದಾಗ ಕೊಲ್ಲಿ ಮುಳುಗುತ್ತದೆ. “ನಾವು ಕಡಲಿಗೆ ಹೋಗದಿದ್ದರೆ, ಏನನ್ನು ತಿನ್ನಬೇಕು ಹೇಳಿ?” ಎಂದು ಅಮಿತಾ ಕೇಳುತ್ತಾರೆ.




















