ಮೇ 20ರಂದು, ಅಂಫಾನ್ ಚಂಡಮಾರುತದಿಂದ ಉಂಟಾದ ಭೀಕರ ಗಾಳಿ ಮತ್ತು ರಭಸದ ಮಳೆಯಿಂದಾಗಿ, ಸಬಿತಾ ಅವರ ಸುತ್ತಮುತ್ತಲಿನಲ್ಲಿ ಉಂಟಾದ ವ್ಯಾಪಕ ಹಾನಿಗೂ ಅವರು ಹೆದರಲಿಲ್ಲ. “ಪ್ರತಿಕೂಲ ಹವಾಮಾನವನ್ನು ನಿಭಾಯಿಸಿ ನಮಗೆ ಅಭ್ಯಾಸವಿದೆ. ನನಗೆ ಹೆದರಿಕೆಯಾಗಲಿಲ್ಲ. ವಾಸ್ತವವಾಗಿ, ಕಾಂಕ್ರೀಟಿನ ಮನೆಗಳಲ್ಲಿ ವಾಸಿಸುವವರು ಹೆಚ್ಚು ಭೀತರಾಗಿದ್ದಾರೆ” ಎಂದರಾಕೆ.
40 ವರ್ಷಗಳಿಂದಲೂ, ಸಬಿತಾ, ದಕ್ಷಿಣ ಕೊಲ್ಕತ್ತಾದ ಜನಪ್ರಿಯ ಮಾರುಕಟ್ಟೆ ಪ್ರದೇಶವೆನಿಸಿದ ಗರಿಯಹಾಟ್ನ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ.
ಅಂದು, ಮಹಾನ್ ಚಂಡಮಾರುತವು ಪಶ್ಚಿಮ ಬಂಗಾಳದ ರಾಜಧಾನಿಯ ಮೂಲಕ ಸಾಗಿದಾಗ, ಸಬಿತಾ ಮತ್ತು ಇತರೆ ಕೆಲವು ನಿರಾಶ್ರಿತ ಹೆಂಗಸರು ಗರಿಯಹಾಟ್ ಮೇಲ್ಸೇತುವೆಯ ಕೆಳಗೆ, ಆಕೆಯ ಮೂರು ಚಕ್ರದ ಗಾಡಿಯಲ್ಲಿ ಮುದುರಿಕೊಂಡು ಒತ್ತೊತ್ತಾಗಿ ಕುಳಿತುಕೊಂಡೇ ರಾತ್ರಿಯನ್ನು ಕಳೆದರು. “ಸುತ್ತಮುತ್ತ ಗಾಜಿನ ಚೂರುಗಳು ಹಾರಾಡುತ್ತಿದ್ದು, ಮರಗಳು ಉರುಳುತ್ತಿದ್ದಾಗಲೂ ನಾವು ಅಲ್ಲೇ ಕುಳಿತಿದ್ದೆವು. ಗಾಳಿಯಿಂದಾಗಿ ಮಳೆಯು ನಮ್ಮತ್ತ ರಾಚುತ್ತಿದ್ದಾಗ ನೆಂದುಹೋದೆವು. ಧೂಮ್ ಧಾಮ್ ಎಂಬ ಜೋರಿನ ಶಬ್ದವು ಕಿವಿಗೆ ಬಿತ್ತು” ಎಂಬುದಾಗಿ ಸಬಿತಾ ನೆನಪಿಸಿಕೊಂಡರು.”
ಸುಮಾರು 47ರ ವಯಸ್ಸಿನ ಸಬಿತಾ, ಹಿಂದಿನ ದಿನವಷ್ಟೇ ಮೇಲ್ಸೇತುವೆಯ ಕೆಳಗಿನ ತಮ್ಮ ಜಾಗಕ್ಕೆ ವಾಪಸ್ಸಾಗಿದ್ದರು. “ಅಂಫಾನ್ ಚಂಡಮಾರುತವು ಅಪ್ಪಳಿಸಿದ ಒಂದು ದಿನದ ಹಿಂದೆ ನಾನು ಮಗನ ಮನೆಯಿಂದ ಗರಿಯಹಾಟ್ಗೆ ಮರಳಿದ್ದೆ. ನನ್ನ ಪಾತ್ರೆ ಮತ್ತು ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವನ್ನು ಯಾರೋ ಕೆದಕಿದಂತಿತ್ತು” ಎಂದರಾಕೆ. ಟಾಲಿಗಂಜ್ನ ಝಲ್ದರ್ ಮಠ್ ಕೊಳೆಗೇರಿ ಪ್ರದೇಶದಲ್ಲಿ ಈಕೆಯ 27ರ ವಯಸ್ಸಿನ ಮಗ ರಾಜು ಸರ್ದಾರ್, ಆತನ ಪತ್ನಿ 25ರ ರೂಪ ಮತ್ತು ರೂಪ ಅವರ ಕಿರಿಯ ಸಹೋದರಿಯು ವಾಸವಾಗಿರುವ ಬಾಡಿಗೆ ಕೋಣೆಯಿಂದ ಸಬಿತಾ ನಾಲ್ಕು ಕಿ.ಮೀ. ದೂರವನ್ನು ಕ್ರಮಿಸಿ ಇಲ್ಲಿಗೆ ಬಂದಿದ್ದರು.
ಲಾಕ್ಡೌನ್ ಪ್ರಾರಂಭವಾದ ನಂತರದಲ್ಲಿ, ಮಾರ್ಚ್ 25ರಂದು ಕೊಲ್ಕತ್ತಾದ ಪೊಲೀಸರು ಗರಿಯಹಟ್ನ ಕಾಲುದಾರಿಯ ನಿವಾಸಿಗಳನ್ನು ಕರೆದೊಯ್ದಿದ್ದ ಆಶ್ರಯ ತಾಣವನ್ನು ತೊರೆದು ಅವರು ಝಲ್ದರ್ ಮಠ್ಗೆ ತೆರಳಿದ್ದರು. ಆ ರಾತ್ರಿ, ಮೇಲ್ಸೇತುವೆಯಡಿಯಲ್ಲಿ ನೆಲೆಸಿದ್ದ ಸಬಿತಾ ಮತ್ತು ಇತರರನ್ನು ಪೊಲೀಸರು ಸಂಪರ್ಕಿಸಿದ್ದರು. “ಕರೊನ ವೈರಸ್ನಿಂದಾಗಿ ನಾವು ಬೀದಿಗಳಲ್ಲಿ ವಾಸಿಸುವುದು ಸಾಧ್ಯವಿಲ್ಲದ ಕಾರಣ, ಆಶ್ರಯ ಕೇಂದ್ರಕ್ಕೆ ತೆರಳುವಂತೆ ಅವರು ನಮಗೆ ತಿಳಿಸಿದರು” ಎಂದರು ಸಬಿತಾ. ಕೊಲ್ಕತ್ತಾದ ಮುನಿಸಿಪಲ್ ಕಾರ್ಪೊರೇಷನ್ನ ವಾರ್ಡ್ ಸಂಖ್ಯೆ 85ರ ಸಮುದಾಯ ಭವನಕ್ಕೆ ಅವರನ್ನು ಕರೆದೊಯ್ಯಲಾಯಿತು.






