ಐದೂವರೆ ದಶಕಗಳ ಕಾಲ, ಸಂಗತ್ ರಾಮ್ ಪಾಲಿಗೆ ಬದುಕು ಮತ್ತು ಸಾವಿನ ನಡುವಿನ ಅಂತರ ಕೇವಲ ಕೂದಲೆಳೆಯಷ್ಟೇ ಆಗಿತ್ತು. ಅವರು ತಮ್ಮ ಹೆಬ್ಬೆರಳಿನ ಉಗುರನ್ನು ತೋರುಬೆರಳಿನ ಉಗುರಿಗೆ ತಾಗಿಸುತ್ತಾ ಆ ಅಂತರವನ್ನು ವಿವರಿಸುತ್ತಾರೆ, "ಒಂದು ವೇಳೆ ಕೂದಲಿನ ಎಳೆಯಷ್ಟು ಸಮತೋಲನ ತಪ್ಪಿದರೂ ಮುಳುಗುವುದು ಖಾತರಿ." ಭೋರ್ಗರೆಯುವ, ಮಂಜಿನಂತೆ ತಣ್ಣಗಿರುವ ಬಿಯಾಸ್ ನದಿಯ ನೀರನ್ನು ದಾಟುವುದು ಎಲ್ಲರಿಂದಲೂ ಸಾಧ್ಯವಿರುವ ಕೆಲಸವಾಗಿರಲಿಲ್ಲ. ಶತಮಾನಗಳಿಂದ ಇಲ್ಲಿ ನದಿ ದಾಟಲು ಇದ್ದ ಏಕೈಕ ಸಾಧನವೆಂದರೆ ಗಾಳಿ ತುಂಬಿದ ಎತ್ತಿನ ಚರ್ಮ. ಇದನ್ನು ನಂಬಿ ನದಿ ದಾಟುವುದು ಖಂಡಿತವಾಗಿಯೂ ಸುಲಭದ ಆಟವಾಗಿರಲಿಲ್ಲ.
ಹಿಮಾಚಲ ಪ್ರದೇಶದ ಕುಲು ಕಣಿವೆಯ ಕೊನೆಯ ಜೀವಂತ ತಾರುಗಳಲ್ಲಿ (ನದಿ ದಾಟಿಸುವವರು) ಒಬ್ಬರಾದ ಸಂಗತ್ ರಾಮ್ ಅವರಿಗೆ ಈಗ 89 ವರ್ಷ. ಅವರ ಈ ವೃತ್ತಿ ಬಹಳ ಹಿಂದೆಯೇ ಅಂತ್ಯಗೊಂಡಿದೆ. ಈ ಶತಮಾನದ ಆರಂಭದಲ್ಲಿ ವಿವಿಧೆಡೆ ಸೇತುವೆಗಳು ಮತ್ತು ಜೂಲಾ (ಕೈಯಿಂದ ಎಳೆಯುವ ಹಗ್ಗದ ಟ್ರಾಲಿಗಳು) ನಿರ್ಮಾಣವಾದವು. ಇದರ ನಂತರ ಅವರ ವೃತ್ತಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳತೊಡಗಿತು. ಅದಕ್ಕೂ ಮೊದಲು, ಅವರು ತಮ್ಮ 'ದಿರಿಯಾ' (ಗಾಳಿ ತುಂಬಿದ ಚರ್ಮದ ತೆಪ್ಪ) ಮೇಲೆ ಸ್ಥಳೀಯ ದೇವರುಗಳಿಂದ ಹಿಡಿದು ರಾಜರವರೆಗೆ, ಮದುವೆಯ ಮೆರವಣಿಗೆಯಿಂದ ಹಿಡಿದು ಶವಗಳವರೆಗೆ ಮತ್ತು ಫಸಲಿನಿಂದ ಹಿಡಿದು ಮರದ ದಿಮ್ಮಿಗಳವರೆಗೆ ಈ ಭೂಮಿ ಮೇಲಿನ ಯಾವುದನ್ನೇ ಆಗಲಿ ನದಿಯ ಆಚೀಚೆ ದಾಟಿಸುತ್ತಿದ್ದರು.
ದಿರಿಯಾ ಎನ್ನುವುದು ಬಿಯಾಸ್ ನದಿಯನ್ನು ದಾಟಲು ಬಳಸಲಾಗುತ್ತಿದ್ದ ಗಾಳಿ ತುಂಬಿದ ಎತ್ತಿನ ಚರ್ಮದಿಂದ ತಯಾರಿಸಿದ ಒಂದು ಸಾಧನವಾಗಿತ್ತು. ದಿರಿಯಾಕ್ಕೆ ಸಂಬಂಧಿಸಿದ ದಂತಕಥೆಗಳಿಗೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ; ಅಲೆಕ್ಸಾಂಡರನ ಸೈನ್ಯವು ಭಾರತದಲ್ಲಿ ಮುಂದೆ ಸಾಗಲು ನಿರಾಕರಿಸುವುದಕ್ಕೂ ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎನ್ನುವ ನಂಬಿಕೆಯಿದೆ. ಸ್ಥಳೀಯರು ಆ ಕಾಲದಲ್ಲೂ ದಿರಿಯಾಗಳನ್ನು ನಡೆಸುತ್ತಿದ್ದರು ಎಂದು ಜಾನಪದ ಕಥೆಗಳು ಹೇಳುತ್ತವೆ. ಮತ್ತೊಂದೆಡೆ, ಗ್ರೀಕರು ಈ ಭೋರ್ಗರೆಯುವ ನದಿಯನ್ನು ದಾಟುವುದು ಅಸಾಧ್ಯವೆಂದು ಭಾವಿಸಿದ್ದರು. ಅಲೆಕ್ಸಾಂಡರ್ ಎದುರಿಸಿದ ಅತ್ಯಂತ ಕಠಿಣ ಅಡೆತಡೆಗಳಲ್ಲಿ ಬಿಯಾಸ್ ನದಿ ಕೂಡ ಒಂದಾಗಿತ್ತು. ಕೆಲವು ಇತಿಹಾಸಕಾರರ ಪ್ರಕಾರ, ಇದು ಭಾರತದಲ್ಲಿ ಅಲೆಕ್ಸಾಂಡರ್ ನಡೆಸಿದ ಆಕ್ರಮಣಗಳ ಪೂರ್ವದ ಗಡಿಯಾಗಿತ್ತು ಮತ್ತು ಇದನ್ನು ದಾಟಿ ಅವನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಶತಮಾನಗಳ ಕಾಲ, ಈ ನದಿ ದಾಟಿಸುವವರಿಂದ ನಡೆಸಲ್ಪಡುತ್ತಿದ್ದ ದಿರಿಯಾಗಳು ಬಿಯಾಸ್ ನದಿಯ ಎಡ ಮತ್ತು ಬಲ ದಂಡೆಗಳ ನಡುವಿನ ಏಕೈಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಬಹುಶಃ ಸಂಗತ್ ರಾಮ್ ಅವರ ಪೂರ್ವಜರು ಕೂಡ ಇದೇ ಕೆಲಸ ಮಾಡುತ್ತಿದ್ದಿರಬಹುದು. ಈ ನದಿ ಎತ್ತರದ ಆಲ್ಪೈನ್ ಸರೋವರವಾದ ಬಿಯಾಸ್ ಕುಂಡದಿಂದ ಉಗಮಿಸುತ್ತದೆ ಮತ್ತು ಪಂಜಾಬ್ ಪ್ರಾಂತ್ಯದ ಬಯಲು ಸೀಮೆಯಲ್ಲಿ ಹರಿಯುವ ಸಟ್ಲೇಜ್ ನದಿಯೊಂದಿಗೆ ವಿಲೀನಗೊಳ್ಳುವ ಮೊದಲು 470 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.










