“ನಾವು ಗುದೊಕ್ ತಯಾರಿಸದೆ ಹೋದರೆ ಬಹಳಷ್ಟು ಗ್ರಾಹಕರು ನಮ್ಮ ಹೋಟೆಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಡುತ್ತಾರೆ” ಎನ್ನುತ್ತಾರೆ ಚಂದನ್ ಚಕ್ಮಾ. ಕಳೆದ ಎಂಟು ವರ್ಷಗಳಿಂದ 37 ವರ್ಷದ ಚಂದನ್ ಚಕ್ಮಾ ಮತ್ತು ಅವರ ಪತ್ನಿ ಶಾಮಾರು (36) ತಮ್ಮ ಹೋಟೆಲ್ಲಿನಲ್ಲಿ ಗುದೊಕ್ ತಯಾರಿಸಿ ಬಡಿಸುತ್ತಿದ್ದಾರೆ. ಇದೊಂದು ಸ್ಥಳೀಯ ರುಚಿಕರ ಖಾದ್ಯವಾಗಿದ್ದು, ಈ ಹೊಟೆಲ್ಲಿನಲ್ಲಿ ಸಾಂಪ್ರದಾಯಿಕ ಚಕ್ಮಾ ಶೈಲಿಯಲ್ಲಿ ತಯಾರಿಸಿ ಬಡಿಸಲಾಗುತ್ತದೆ. ತ್ರಿಪುರಾ ರಾಜ್ಯದ ಉನಕೊತಿ ಜಿಲ್ಲೆ ಚಕ್ಮಾ ಸಮುದಾಯದ ಮೂಲ ನೆಲೆ.
ಪತಿ-ಪತ್ನಿ ತಮ್ಮ ಊರಾದ ಶಾಂತಿನಗರದಲ್ಲಿ ಜೆಸ್ಸಿಕಾ ಹೋಟೆಲ್ ನಡೆಸುತ್ತಿದ್ದು, ಅವರಿಬ್ಬರಿಗೆ ಮದುವೆಯಾಗಿ 20 ವರ್ಷಗಳು ಸಂದಿವೆ. ಅವರಿಗೆ ಜೆಸ್ಸಿಕಾ ಮತ್ತು ಚೆವೊನ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ಕ್ರಮವಾಗಿ 12 ಮತ್ತು 8 ನೇ ತರಗತಿಯಲ್ಲಿ ಓದುತ್ತಿದ್ದಾರೆ.
“ಗುದೋಕ್ ನಮ್ಮ ಅಸ್ಮಿತೆಯ ಮುಖ್ಯ ಭಾಗ” ಎನ್ನುತ್ತಾರೆ ಚಂದನ್. ತ್ರಿಪುರಾದಲ್ಲಿ, ಇತ್ತೀಚಿನ ಜನಗಣತಿಯ ಪ್ರಕಾರ ಸುಮಾರು 80,000 ಜನಸಂಖ್ಯೆಯನ್ನು ಹೊಂದಿರುವ ಚಕ್ಮಾ ಸಮುದಾಯವನ್ನು ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ.
ಗುದೋಕ್ ವರ್ಷವಿಡೀ ನಮ್ಮ ಹೋಟೆಲ್ಲಿನಲ್ಲಿ ಬೇಡಿಕೆ ಹೊಂದಿರುವ ತಿನಿಸು ಎನ್ನುತ್ತಾರೆ ದಂಪತಿ. ಮೂರು ವಿಭಾಗಗಳನ್ನು ಹೊಂದಿರುವ ಜೆಸ್ಸಿಕಾ ಹೋಟೆಲ್ ಕಕಾಲದಲ್ಲಿ 40 ಜನರಿಗೆ ಸೇವೆ ಸಲ್ಲಿಸಬಲ್ಲದು ಮತ್ತು ಊಟಕ್ಕೆ 100ರಿಂದ 160 ರೂಪಾಯಿಯ ತನಕ ಇರುತ್ತದೆ. ಈ ಊಟಗಳ ಜೊತೆಗೆ ಗುದೋಕ್ ಜನಪ್ರಿಯ ಖಾದ್ಯವಾಗಿ ಮಾರಾಟವಾಗುತ್ತದೆ.
“ಜನರು ಯಾವಾಗಲೂ ಗುದೋಕ್ ಒಂದನ್ನೇ ಬೇರೆಯಾಗಿ ಮಾರುವಂತೆ ಕೇಳುತ್ತಾರೆ. ಆಗ ಅವರಿಗೆ ಅದನ್ನು ಮನೆಗೂ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎನ್ನುವುದು ಅವರ ಆಲೋಚನೆ. ಇಲ್ಲಿನ ಎಲ್ಲ ಸಮುದಾಯಗಳಿಗೂ ಗುದೋಕ್ ಎಂದರೆ ಅಚ್ಚುಮೆಚ್ಚು” ಎನ್ನುತ್ತಾರೆ ಚಂದನ್. ಈ ಗ್ರಾಹಕರಲ್ಲಿ ಹಲಾಮ್, ಮೊಗ್, ದೆಬ್ಬರ್ಮಾ ಮುಂತಾದ ಬುಡಕಟ್ಟು ಜನಾಂಗದವರು ಮತ್ತು ಶಾಂತಿನಗರದ ಬಂಗಾಳಿ ಮಾತನಾಡುವ ನಿವಾಸಿಗಳು ಸೇರಿದ್ದಾರೆ.
ಈ ಜನಪ್ರಿಯ ಗುದೋಕ್ ತರಕಾರಿ ಮತ್ತು ಹುದುಗಿಸಿದ ಮೀನನ್ನು ಹೊಂದಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ಬೆರ್ಮಾ ಅಥವಾ ಶಿಡೋಲ್, ಮತ್ತು ಪುಂಟಿ (ಪುಂಟಿಯಸ್ ಸೋಫೋರ್) ಮತ್ತು ಫೈಸ್ಸಾ (ಸೆಪ್ಟಿಪಿನ್ನಾ ಫಾಸಾ) ಪ್ರಬೇಧದ ಮೀನುಗಳನ್ನು ಈ ತಿನಿಸಿಗೆ ಬಳಸಲಾಗುತ್ತದೆ. “ಪೈಸ್ಸಾ ಶಿಡೋಲ್ ಮೀನನ್ನು ಹೆಚ್ಚು ಬಳಸುತ್ತೇವೆ. ಇದರ ಹಿಂದಿನ ಕಾರಣವೆಂದರೆ ಅದರ ಅದ್ಭುತವಾದ ರುಚಿ” ಎನ್ನುತ್ತಾರೆ ಚಂದನ್. ಈ ಮೀನು ಸ್ಥಳೀಯ ಮಾರುಕಟ್ಟೆಯಲ್ಲಿ 500 ರೂಪಾಯಿಗೆ ಒಂದು ಕೇಜಿಯಂತೆ ದೊರೆಯುತ್ತದೆ










