ಕಳೆದ ಏಳು ವರ್ಷಗಳಿಂದ ನಾನು ಫೋಟೋಗಳ ಮೂಲಕ ನೈರ್ಮಲ್ಯ ಕಾರ್ಮಿಕರ ಬದುಕು ಮತ್ತು ಹೋರಾಟಗಳನ್ನು ದಾಖಲಿಸುತ್ತಿದ್ದೇನೆ. ಈ ವರ್ಷಗಳಲ್ಲಿ, ನೈರ್ಮಲ್ಯ ಕಾರ್ಮಿಕರು ಸರಿಯಾದ ಮಾಸ್ಕ್ ಅಥವಾ ರಕ್ಷಣಾತ್ಮಕ ಸಾಧನಗಳನ್ನು ಧರಿಸಿ ಕೆಲಸ ಮಾಡುವುದನ್ನು ನಾನು ಎಂದೂ ನೋಡಿಲ್ಲ. ಅವರು ತಮ್ಮ ಕೆಲಸದಲ್ಲಿ ಬಳಸುವ ಅಲ್ಪ ಉಪಕರಣಗಳನ್ನು ಅವರೇ ಸಿದ್ಧಪಡಿಸಿಕೊಳ್ಳುತ್ತಾರೆ ಮತ್ತು ನಿರ್ವಹಿಸುತ್ತಾರೆ.
ಭಾರತದಲ್ಲಿ ವೈಜ್ಞಾನಿಕ ಪ್ರಗತಿಯು ವಿಷಯದಲ್ಲಿ ದೊಡ್ಡ ಮಟ್ಟವನ್ನೇ ತಲುಪಿದ್ದರೂ, ಮನುಷ್ಯರನ್ನು ಒಳಚರಂಡಿಗಳಿಗೆ ಇಳಿಸಿ ಅವರ ಜೀವಕ್ಕೆ ಅಪಾಯ ತಂದೊಡ್ಡುವುದನ್ನು ನಿಲ್ಲಿಸಿಲ್ಲ. ಇದು ವಿಜ್ಞಾನ ಮುಂದುವರೆದಿದ್ದರೂ, ಜಾತಿ ತಾರತಮ್ಯ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಈ ಸಮಾಜ ನೈರ್ಮಲ್ಯ ಕಾರ್ಮಿಕರನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ "ಮುಂಚೂಣಿ ಕಾರ್ಯಕರ್ತರು" ಎಂದು ನೆನಪು ಮಾಡಿಕೊಳ್ಳುತ್ತದೆ. ಉದಾಹರಣೆಗೆ ಕೋವಿಡ್ ಮಹಾಮಾರಿ ಅಥವಾ ನೈಸರ್ಗಿಕ ವಿಕೋಪಗಳ ಸಮಯದಲ್ಲಿ. ಉಳಿದಂತೆ ಅವರನ್ನು ಕಸ ಗುಡಿಸೋರು ಎಂದಷ್ಟೇ ನೆನಪಿಸಿಕೊಳ್ಳಲಾಗುತ್ತದೆ.
ಆಗಸ್ಟ್ 1ರಿಂದ 13, 2025ರವರೆಗೆ, ನೈರ್ಮಲ್ಯ ಕಾರ್ಮಿಕರು ತಮ್ಮ ಕೆಲಸದ ಖಾಸಗೀಕರಣದ ವಿರುದ್ಧ ಚೆನ್ನೈಯ ರಿಪನ್ ಕಟ್ಟಡದ ಹೊರಗೆ ಸತತವಾಗಿ ಧರಣಿ ಪ್ರತಿಭಟನೆ ನಡೆಸಿದರು. ಇದು ಮಹಾನಗರದ ಮುನ್ಸಿಪಲ್ ಸಂಸ್ಥೆಯಾದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ನ ಪ್ರಧಾನ ಕಚೇರಿ. ಹದಿಮೂರನೇ ದಿನದಂದು, ತಮಿಳುನಾಡು ಸರ್ಕಾರವು ಪೊಲೀಸರ ಸಹಾಯದಿಂದ ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿತು.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ ತನ್ನ ವಲಯ 5 (ರಾಯಪುರಂ) ಮತ್ತು ವಲಯ 6 (ತಿರು ವಿ ಕಾ ನಗರ) ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ಹಸ್ತಾಂತರಿಸಲು ನಿರ್ಧರಿಸಿದ ಕಾರಣ, ಈ ವಲಯಗಳ ಕಾರ್ಮಿಕರು ಆಗಸ್ಟ್ 1ರಿಂದ ಪ್ರತಿಭಟಿಸುತ್ತಿದ್ದಾರೆ.
ಈ ಕಾರ್ಮಿಕರಲ್ಲಿ ಹೆಚ್ಚಿನವರು ದಲಿತ ಮಹಿಳೆಯರು ಮತ್ತು ಅವರು ಹಲವು ವರ್ಷಗಳಿಂದ ನಗರ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪಾಲಿಗೆ, ಖಾಸಗೀಕರಣ ಕೇವಲ ಸಂಬಳದ ಪ್ರಶ್ನೆಯಲ್ಲ, ಅದು ಘನತೆ ಮತ್ತು ಬದುಕಿನ ಪ್ರಶ್ನೆ. ಪಾಲಿಕೆ (ಕಾರ್ಪೊರೇಷನ್) ಯಿಂದ ನೇರ ಉದ್ಯೋಗವನ್ನು ಕಳೆದುಕೊಂಡರೆ, ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಖಾಯಂ ಸ್ಥಾನದ ಸಾಧ್ಯತೆಯನ್ನೂ ಕಳೆದುಕೊಳ್ಳುತ್ತಾರೆ. ಅವರ ಪ್ರತಿರೋಧವು ಕೇವಲ ಜೀವನೋಪಾಯಕ್ಕಾಗಿ ಮಾತ್ರವಲ್ಲ, ಇದು ದಕ್ಷತೆಯ ಹೆಸರಿನಲ್ಲಿ ತಮ್ಮ ಅಗೋಚರ ಶ್ರಮವನ್ನು ಮತ್ತಷ್ಟು ಕಡೆಗಣಿಸುವುದನ್ನು ವಿರೋಧಿಸುವ ಹೋರಾಟವೂ ಹೌದು.


























