ಅಲ್ಲಿನ ಗಾಳಿಯಲ್ಲಿ ಜೇಡಿ ಮಣ್ಣು ಮತ್ತು ಸೌದೆ ಸುಟ್ಟ ಹೊಗೆಯ ವಾಸನೆ ತೇಲಿ ಬರುತ್ತಿತ್ತು. ಸಿಮೆಂಟ್ ನೆಲದ ಮೇಲೆಲ್ಲ ದೊಡ್ಡ ದೊಡ್ಡ ಬಾನೆಗಳಲ್ಲಿ ತುಂಬಿಟ್ಟ ಜೇಡಿ ಮಣ್ಣು ಚೆಲ್ಲಿದ ಕಲೆಯಿತ್ತು. ಅಲ್ಲದೆ ಅಲ್ಲಿ ಅಚ್ಚುಗಳು ಮತ್ತು ಅರ್ಧ ಮುಗಿದ ಕುಂಬಾರಿಕೆಯ ವಸ್ತುಗಳೂ ಎಲ್ಲೆಂದರಲ್ಲಿ ಕಾಲಿಡಲು ಸಾಧ್ಯವಾಗದ ಹಾಗೆ ಹರಡಿಕೊಂಡಿದ್ದವು. “ನೋಡಿಕೊಂಡು ನಡೆಯಿರಿ” ಎಂದು ಹಮೀದ್ ಅಹ್ಮದ್ ಎಲ್ಲರನ್ನೂ ಪದೇ ಪದೇ ಎಚ್ಚರಿಸುತ್ತಿದ್ದರು.
12 ವರ್ಷದ ಬಾಲಕನೊಬ್ಬ ತಿರುಗಣೆ ಚಕ್ರದಲ್ಲಿ ಅದರ ಗತಿಗಳನ್ನು ಕಲಿಯುತ್ತಿದ್ದ. ಅವನು ಹಮೀದ್ ಅಹ್ಮದ್ ಅವರ ಮಗ ಮೊಹಮ್ಮದ್ ಸಲ್ಮಾನ್. 12 ವರ್ಷದ ಈ ಬಾಲಕ ತನ್ನ ಕಾಲಿನಿಂದ ನೆಲದಡಿಯಿದ್ದ ತಿರುಗಣೆ ಚಕ್ರವನ್ನು ತಿರುಗಿಸುತ್ತಿದ್ದ. ಅವನ ಮೈ ತುಂಬಾ ಜೇಡಿ ಮಣ್ಣಿನ ಧೂಳು ತುಂಬಿಕೊಂಡಿತ್ತು.
“[ಮಡಕೆಯನ್ನು] ನಿಧಾನವಾಗಿ ತೆಗಿ” ಎಂದು ಹಮೀದ್ ಅವನಿಗೆ ಸೂಚನೆ ನೀಡಿದರು. ಅಲ್ಲಿ ಇತಿಹಾಸ ಮರುಕಳಿಸಿತ್ತು. 49 ವರ್ಷದ ಅನುಭವಿ ಕುಶಲಕರ್ಮಿ ಹಮೀದ್ ಕೂಡಾ ತಾನು 9 ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯಿಂದ ಇದೇ ರೀತಿಯಾಗಿ ಕೆಲಸ ಕಲಿತಿದ್ದರು. “ಆರಂಭದಲ್ಲಿ ಮಡಕೆ ಮಾಡಲು ಹೋಗಿ ಒಡೆದುಹಾಕಿದ್ದೆ” ಎಂದು ಮುಗುಳ್ನಕ್ಕ ಅವರು “ನಂತರ ದಿನ ಕಳೆದಂತೆ ಅಭ್ಯಾಸವಾಗುತ್ತದೆ” ಎಂದರು.
10 ಜನ ಅಣ್ಣ ತಮ್ಮಂದಿರಲ್ಲಿ ಒಬ್ಬರಾದ ಅವರು ಏಳನೇ ತಲೆಮಾರಿನ ಕುಂಬಾರಿಕೆ ಕಸುಬುದಾರ. ಇಂದು ಅವರ ಕುಟುಂಬ ಮಾತ್ರವೇ ಉತ್ತರ ಪ್ರದೇಶದ ʼಸೆರಾಮಿಕ್ ನಗರʼ ಎಂದು ಕರೆಯಿಸಿಕೊಳ್ಳುವ ಖುರ್ಜಾದಲ್ಲಿ ಈ ವಿಧಾನದಲ್ಲಿ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ. ಈ ಊರು ಮಣ್ಣಿನ ಪಾತ್ರೆಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಈ ಕೆಲಸವನ್ನು ಹೆಚ್ಚಾಗಿ ಮುಸ್ಲಿಮರೇ ಮಾಡುತ್ತಾರೆ.



















