ಕೊರೈ ಕತ್ತರಿಸುವ ಕೆಲಸದಲ್ಲಿ ಹೆಚ್ಚು ನುರಿತವರು, ಹದಿನೈದು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಗಿಡವನ್ನು ಕತ್ತರಿಸಿ, ಅರ್ಧ ನಿಮಿಷದಲ್ಲಿ ಅದನ್ನು ಝಾಡಿಸಿ, ಕೆಲವೇ ನಿಮಿಷಗಳಲ್ಲಿ ಕಂತೆ ಕಟ್ಟುತ್ತಾರೆ. ಹುಲ್ಲಿನಂತಿರುವ ಗಿಡವು ಅವರಿಗಿಂತಲೂ ಎತ್ತರವಿದ್ದು, ಪ್ರತಿಯೊಂದು ಕಂತೆಯೂ ಸುಮಾರು ಐದು ಕೆ.ಜಿ.ಯಷ್ಟು ತೂಗುತ್ತದೆ. ಪ್ರತಿ ಕಂತೆಗೆ ಕೇವಲ ಎರಡು ರೂ.ಗಳನ್ನು ಗಳಿಸುವ ಸಲುವಾಗಿ, ಒಂದು ಬಾರಿಗೆ 12-15 ಕಟ್ಟುಗಳನ್ನು ತಲೆಯ ಮೇಲೆಹೊತ್ತು, ಸುಡುವ ಬಿಸಿಲಿನಲ್ಲಿ ಅರ್ಧ ಕಿ.ಮೀ. ನಡೆಯುವ ಇವರು ಈ ಕೆಲಸವನ್ನು ಅನಾಯಾಸವಾಗಿ ಮಾಡುತ್ತಿದ್ದಾರೆಯೋ ಅನಿಸುತ್ತದೆ.
ಪ್ರತಿಯೊಬ್ಬರೂ ದಿನದ ಕೊನೆಗೆ ಕೊರೈನ ಸುಮಾರು ನೂರೈವತ್ತು ಕಂತೆಗಳನ್ನು ತಯಾರಿಸುತ್ತಾರೆ. ಇದು ತಮಿಳುನಾಡಿನ ಕರೂರ್ ಜಿಲ್ಲೆಯ ನದಿಯ ದಡದ ಜಮೀನುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.
ಕರೂರ್ನ ಮನವಾಸಿ ಹಳ್ಳಿಯ ನಾಥಮೇಡು ಕೊಪ್ಪಲಿನ ಕಾವೇರಿ ನದಿಯ ದಡದಲ್ಲಿ ಕೊರೈ ಅನ್ನು ಕತ್ತರಿಸುವ ಬಹುತೇಕರು ಮಹಿಳೆಯರು. ದಿನಕ್ಕೆ ಎಂಟು ಗಂಟೆಗಳ ಕಾಲ ವಿರಾಮವಿಲ್ಲದೆ ಇವರು ದುಡಿಯುತ್ತಾರೆ. ನಡು ಬಗ್ಗಿಸಿ ದಟ್ಟವಾಗಿ ಬೆಳೆದ ಎಲೆಗೊಂಚಲನ್ನು ಕತ್ತರಿಸಿ, ಬರಿ ಕೈಗಳಿಂದ ಕಾಂಡಗಳನ್ನು ಝಾಡಿಸಿದ ನಂತರ ಕಟ್ಟಿದ ಕಂತೆಗಳನ್ನು ಸಂಗ್ರಹಣಾ ಸ್ಥಳಗಳಿಗೆ ತಲುಪಿಸುತ್ತಾರೆ. ಈ ಶ್ರಮದಾಯಕ ಕೆಲಸಕ್ಕೆ ಪರಿಣತಿ ಮತ್ತು ಶಕ್ತಿಯು ಅವಶ್ಯ.
ಬಹುತೇಕರು ಬಾಲಕಿಯಾಗಿದ್ದಾಗಿನಿಂದಲೂ ಕೊರೈಯನ್ನು ಕತ್ತರಿಸುತ್ತಿದ್ದೇವೆಂದು ಹೇಳುತ್ತಾರೆ. ಐವತ್ತೊಂಬತ್ತು ವರ್ಷದ ಎ. ಸೌಭಾಗ್ಯಮ್, ಹೀಗೆನ್ನುತ್ತಾರೆ: “ಹುಟ್ಟಿದಾರಭ್ಯ ಕೊರೈ ಕಾಡೇ ನನ್ನ ಪ್ರಪಂಚವೆನಿಸಿದೆ. ಹತ್ತು ವರ್ಷದವಳಿದ್ದಾಗ ಹೊಲಗಳಲ್ಲಿ ಕೆಲಸಮಾಡಲು ಪ್ರಾರಂಭಿಸಿದ ನಾನು, ದಿನವೊಂದಕ್ಕೆ ಮೂರು ರೂ.ಗಳನ್ನು ಗಳಿಸುತ್ತಿದ್ದೆ. ಈ ಗಳಿಕೆಯು ಅವರ ಪರಿವಾರದ ಐವರನ್ನು ಈಗ ಸಲಹುತ್ತಿದೆ.”
33ರ ಎಂ. ಮಾಗೇಶ್ವರಿ ವಿಧವೆ. ಈಕೆಗೆ ಶಾಲೆಗೆ ಹೋಗುವ ಇಬ್ಬರು ಗಂಡುಮಕ್ಕಳಿದ್ದಾರೆ. ಹಸುಗಳನ್ನು ಮೇಯಿಸಿ, ಕೊರೈ ಅನ್ನು ಕತ್ತರಿಸಲು ತಂದೆಯು ನನ್ನನ್ನು ಕಳುಹಿಸುತ್ತಿದ್ದರೆಂದು ಆಕೆ ನೆನಪಿಸಿಕೊಳ್ಳುತ್ತಾರೆ. “ನಾನು ಶಾಲೆಗೆ ಕಾಲಿಟ್ಟಿಲ್ಲ. ಈ ಹೊಲಗಳು ನನ್ನ ಎರಡನೆಯ ಮನೆಯಂತೆ” ಎನ್ನುತ್ತಾರವರು. 39ರ ಆರ್. ಸೆಲ್ವಿ, ತಾಯಿಯನ್ನೇ ಅನುಸರಿಸಿದರು. “ಆಕೆಯು ಸಹ ಕೊರೈ ಅನ್ನು ಕತ್ತರಿಸುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಈ ಕೆಲಸವನ್ನು ಪ್ರಾರಂಭಿಸಿದೆ” ಎಂದರವರು.























