ಅದೊಂದು ಮಣ್ಣಿನ ಗೋಡೆಗಳಿಂದ ಕೂಡಿದ ಒಂದು ನಿರ್ಜನವಾದ ಪುಟ್ಟ ಚಹಾ ಅಂಗಡಿ. ಅದರ ಮುಂಭಾಗದಲ್ಲಿ ಬಿಳಿ ಕಾಗದವೊಂದನ್ನು ಅಂಟಿಸಲಾಗಿದ್ದು, ಅದರ ಮೇಲೆ ಕೈಬರಹದಲ್ಲಿ ಹೀಗೆ ಬರೆಯಲಾಗಿದೆ:


Idukki, Kerala
|MON, MAR 02, 2026
ದಟ್ಟ ಕಾನನದ ಒಳಗೊಂದು ಲೈಬ್ರರಿ
ಕೇರಳದ ಇಡುಕ್ಕಿ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಒಂದು ಒಂಟಿ ಗ್ರಂಥಾಲಯವಿದೆ. ಇದನ್ನು ನಡೆಸುವವರು 73 ವರ್ಷದ ಚಿನ್ನತಂಬಿ. ಇಲ್ಲಿರುವ 160 ಪುಸ್ತಕಗಳು ಜಗತ್ಪ್ರಸಿದ್ಧ ಶ್ರೇಷ್ಠ ಕೃತಿಗಳಾಗಿದ್ದು, ಇಲ್ಲಿ ಬಡ ಮುತುವನ್ ಆದಿವಾಸಿ ಜನರು ನಿಯಮಿತವಾಗಿ ಎರವಲು ಕೊಂಡೊಯ್ದು, ಓದಿ ನಂತರ ವಾಪಸ್ ಮಾಡುತ್ತಾರೆ
Author
Translator
ಅಕ್ಷರ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್
ಲೈಬ್ರರಿ
ಇರುಪ್ಪುಕ್ಕಲ್ಲಕುಡಿ
ಎಡಮಲಕುಡಿ

P. Sainath
ಇಡುಕ್ಕಿ ಜಿಲ್ಲೆಯ ಈ ನಿರ್ಜನ ಕಾಡಿನ ನಡುವೆ ಲೈಬ್ರರಿಯೇ? ಭಾರತದ ಅತ್ಯಂತ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯವಾದರೂ, ಕೇರಳದ ಈ ಭಾಗದಲ್ಲಿ ಶಿಕ್ಷಣ ಅತಿ ಕಡಿಮೆ ಮಟ್ಟದಲ್ಲಿ ಪ್ರಸಾರದಲ್ಲಿದೆ. ರಾಜ್ಯದ ಮೊಟ್ಟಮೊದಲ ಚುನಾಯಿತ ಆದಿವಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಕೇವಲ 25 ಕುಟುಂಬಗಳು ವಾಸಿಸುತ್ತಿವೆ. ಇವರನ್ನು ಹೊರತುಪಡಿಸಿ ಬೇರೆ ಯಾರಾದರೂ ಇಲ್ಲಿಂದ ಪುಸ್ತಕ ಪಡೆಯಬೇಕೆಂದರೆ, ಅವರು ದಟ್ಟವಾದ ಕಾಡಿನ ನಡುವೆ ಕಾಲ್ನಡಿಗೆಯಲ್ಲೇ ಪ್ರಯಾಣಿಸಬೇಕು. ಇಷ್ಟೊಂದು ದೂರ ನಡೆಯಲು ನಿಜವಾಗಿಯೂ ಯಾರಾದರೂ ಬಯಸುತ್ತಾರೆಯೇ?
ಪಿ. ವಿ. ಚಿನ್ನತಂಬಿ (73 ವರ್ಷ), ಚಹಾ ವ್ಯಾಪಾರಿ, ಸ್ಪೋರ್ಟ್ಸ್ ಕ್ಲಬ್ ಸಂಘಟಕ ಮತ್ತು ಗ್ರಂಥಪಾಲಕರೂ ಹೌದು. ಅವರು ಹೇಳುತ್ತಾರೆ, "ಹೌದು, ಖಂಡಿತವಾಗಿಯೂ... ಜನರು ಬರುತ್ತಾರೆ." ಅವರ ಈ ಪುಟ್ಟ ಅಂಗಡಿ - ಅಲ್ಲಿ ಅವರು ಚಹಾ, ಖಾರಾ ತಿಂಡಿ, ಬಿಸ್ಕತ್ತು, ಬೆಂಕಿಕಡ್ಡಿ ಮತ್ತು ಇತರ ಅಗತ್ಯ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ - ಇಡಮಲಕುಡಿಯ ಗುಡ್ಡಗಾಡು ದಾರಿಗಳ ನಡುವೆ ಇದೆ. ಇದು ಕೇರಳದ ಅತ್ಯಂತ ದುರ್ಗಮ ಪಂಚಾಯತುಗಳಲ್ಲಿ ಒಂದಾಗಿದ್ದು, ಇಲ್ಲಿ 'ಮುತುವನ್' ಹೆಸರಿನ ಕೇವಲ ಒಂದು ಬುಡಕಟ್ಟು ಸಮುದಾಯ ಮಾತ್ರವೇ ವಾಸಿಸುತ್ತಿದೆ. ಅಲ್ಲಿಗೆ ಹೋಗುವುದೆಂದರೆ ಮುನ್ನಾರ್ ಹತ್ತಿರದ ಪೆಟ್ಟಿಮುಡಿ ಎಂಬ ಸ್ಥಳದಿಂದ 18 ಕಿ.ಮೀ. ಕಾಲ್ನಡಿಗೆಯ ಪ್ರಯಾಣ. ಚಿನ್ನತಂಬಿಯವರ ಚಾದಂಗಡಿ ಮತ್ತು ಲೈಬ್ರರಿಯನ್ನು ತಲುಪಲು ಇನ್ನೂ ಹೆಚ್ಚಿನ ದೂರ ನಡೆಯಬೇಕಾಗುತ್ತದೆ. ಏದುಸಿರು ಬಿಡುತ್ತಾ, ಕಷ್ಟಪಟ್ಟು ಅವರ ಮನೆ ತಲುಪಿದಾಗ ಅವರ ಪತ್ನಿ ಕೆಲಸಕ್ಕಾಗಿ ಹೊರಗೆ ಹೋಗಿರುವುದು ನಮಗೆ ತಿಳಿಯಿತು. ಅವರ ಕುಟುಂಬವೂ ಮುತುವನ್ ಬುಡಕಟ್ಟು ಸಮುದಾಯಕ್ಕೆ ಸೇರಿದೆ.
ನಾನು ಗೊಂದಲದಿಂದಲೇ ಕೇಳಿದೆ, “ಚಿನ್ನತಂಬಿ, ಚಹಾ ಕುಡಿದೆ. ದಿನಸಿ ಸಾಮಾನುಗಳನ್ನೂ ನೋಡುತ್ತಿದ್ದೇನೆ. ಆದರೆ ನಿಮ್ಮ ಲೈಬ್ರರಿ ಎಲ್ಲಿದೆ?” ತಮ್ಮ ಫಳಫಳ ಹೊಳೆಯುವ ನಗುವಿನೊಂದಿಗೆ ಅವರು ನನ್ನನ್ನು ಆ ಪುಟ್ಟ ಕಟ್ಟಡದ ಒಳಗೆ ಕರೆದೊಯ್ದರು. ಅಲ್ಲಿನ ಒಂದು ಕತ್ತಲೆಯ ಮೂಲೆಯಿಂದ, ಕನಿಷ್ಠ 25 ಕಿಲೋ ಅಕ್ಕಿ ಹಿಡಿಯುವಂತಹ ಎರಡು ಚೀಲಗಳನ್ನು ಹೊತ್ತು ತಂದರು. ಈ ಚೀಲಗಳಲ್ಲಿ 160 ಪುಸ್ತಕಗಳಿವೆ, ಇದೇ ಅವರ ಒಟ್ಟಾರೆ ಸಂಗ್ರಹ. ಪ್ರತಿದಿನ ಗ್ರಂಥಾಲಯಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ಮಾಡುವಂತೆಯೇ, ಅವರು ಆ ಪುಸ್ತಕಗಳನ್ನು ಜಾಗರೂಕತೆಯಿಂದ ಚಾಪೆಯ ಮೇಲೆ ಹರಡಿಟ್ಟರು.
ನಮ್ಮ ಎಂಟು ಜನರ ತಂಡವು ಈ ಪುಸ್ತಕಗಳನ್ನು ವಿಸ್ಮಯದಿಂದ ತಿರುವಿ ಹಾಕತೊಡಗಿತು. ಇವುಗಳಲ್ಲಿ ಪ್ರತಿಯೊಂದು ಪುಸ್ತಕವೂ ಸಾಹಿತ್ಯಿಕ ಕೃತಿ, ಶ್ರೇಷ್ಠ ರಚನೆ ಅಥವಾ ರಾಜಕೀಯ ವಿಚಾರಗಳ ಸಂಕಲನವಾಗಿತ್ತು. ಇವುಗಳಲ್ಲಿ ಯಾವುದೇ ಪತ್ತೇದಾರಿ, ಬೆಸ್ಟ್ ಸೆಲ್ಲರ್ ಅಥವಾ ಜನಪ್ರಿಯ ಸಾಹಿತ್ಯದ ಪುಸ್ತಕಗಳು ಇರಲಿಲ್ಲ. ಇವುಗಳಲ್ಲಿ ತಮಿಳು ಮಹಾಕಾವ್ಯ 'ಶಿಲಪ್ಪದಿಗಾರಂ'ನ ಮಲಯಾಳಂ ಅನುವಾದವೂ ಒಂದಾಗಿತ್ತು. ಪುಸ್ತಕಗಳ ಸಂಗ್ರಹದಲ್ಲಿ ವೈಕೊಮ್ ಮೊಹಮ್ಮದ್ ಬಷೀರ್, ಎಂ.ಟಿ. ವಾಸುದೇವನ್ ನಾಯರ್, ಕಮಲಾ ದಾಸ್ ಮುಂತಾದವರ ಕೃತಿಗಳೂ ಸೇರಿದ್ದವು. ಇವುಗಳಲ್ಲಿ ಎಂ. ಮುಕುಂದನ್, ಲಲಿತಾಂಬಿಕಾ ಅಂತರ್ಜನಮ್ ಮುಂತಾದವರ ಪುಸ್ತಕಗಳಿದ್ದವು. ಮಹಾತ್ಮ ಗಾಂಧೀಜಿಯವರ ಸಾಹಿತ್ಯದ ಹೊರತಾಗಿ, ಪ್ರಸಿದ್ಧ ಕ್ರಾಂತಿಕಾರಿ ಲೇಖಕ ಥೊಪ್ಪಿಲ್ ಭಾಸಿ ಅವರ 'ನೀನು ನನ್ನನ್ನು ಕಮ್ಯುನಿಸ್ಟ್ ಆಗಿಸಿದೆ' ರೀತಿಯ ಪುಸ್ತಕಗಳನ್ನೂ ಒಳಗೊಂಡಿದ್ದವು.
“ಆದರೆ ಚಿನ್ನತಂಬಿ, ಜನರು ನಿಜವಾಗಿಯೂ ಇವನ್ನೆಲ್ಲ ಓದುತ್ತಾರೆಯೇ?” ಎಂದು ನಾವು ಹೊರಗೆ ಕುಳಿತುಕೊಳ್ಳುತ್ತಾ ಕೇಳಿದೆವು. ಮುತುವನ್ ಸಮುದಾಯವು ಇತರ ಬುಡಕಟ್ಟು ಸಮುದಾಯಗಳಂತೆಯೇ ಸೌಲಭ್ಯಗಳಿಂದ ವಂಚಿತ ಸಮುದಾಯ ಮತ್ತು ಇತರ ಕೇರಳೀಯರಿಗೆ ಹೋಲಿಸಿದರೆ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಇದಕ್ಕೆ ಉತ್ತರವಾಗಿ ಅವರು ಗ್ರಂಥಾಲಯದ ರಿಜಿಸ್ಟರ್ ಒಂದನ್ನು ಅವರು ಹೊರತಂದರು. ಅದರಲ್ಲಿ ಪುಸ್ತಕಗಳ ನೀಡಿಕೆ ಮತ್ತು ಮರಳಿಸುವಿಕೆಯ ಲೆಕ್ಕಾಚಾರವನ್ನು ಅತ್ಯಂತ ಅಚ್ಚುಕಟ್ಟಾಗಿ ಬರೆಯಲಾಗಿತ್ತು. ಈ ಗ್ರಾಮದಲ್ಲಿ ಕೇವಲ 25 ಕುಟುಂಬಗಳು ವಾಸಿಸುತ್ತಿದ್ದರೂ, 2013ನೇ ವರ್ಷದಲ್ಲಿ 37 ಪುಸ್ತಕಗಳನ್ನು ಓದಲು ಒಯ್ಯಲಾಗಿತ್ತು. ಇದು ಒಟ್ಟು 160 ಪುಸ್ತಕಗಳ ಸುಮಾರು ನಾಲ್ಕನೇ ಒಂದು ಭಾಗದಷ್ಟಾಗುತ್ತದೆ - ಇದನ್ನೊಂದು ಉತ್ತಮ ಅನುಪಾತವೆಂದೇ ಕರೆಯಬಹುದು. ಈ ಲೈಬ್ರರಿಯ ಒಂದು ಬಾರಿಯ ಸದಸ್ಯತ್ವ ಶುಲ್ಕ 25 ರೂಪಾಯಿ ಮತ್ತು ಮಾಸಿಕ ಶುಲ್ಕ 2 ರೂಪಾಯಿ. ಯಾವುದೇ ಪುಸ್ತಕವನ್ನು ಪಡೆಯಲು ಬೇರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಅಲ್ಲಿ ಚಹಾ ಉಚಿತವಾಗಿ ಸಿಗುತ್ತದೆ; ಸಕ್ಕರೆ ಇಲ್ಲದ ಕಪ್ಪು ಚಹಾ. “ಜನರು ಬೆಟ್ಟಗಳನ್ನು ಹತ್ತಿ ಸುಸ್ತಾಗಿ ಬರುತ್ತಾರೆ” ಎನ್ನುತ್ತಾರೆ ಅವರು. ಕೇವಲ ಬಿಸ್ಕತ್ತು, ಖಾರಾ ತಿಂಡಿ ಮತ್ತು ಇತರ ವಸ್ತುಗಳಿಗೆ ಮಾತ್ರ ಹಣ ನೀಡಬೇಕಾಗುತ್ತದೆ. ಕೆಲವೊಮ್ಮೆ ಅಲ್ಲಿಗೆ ಬರುವವರಿಗೆ ಸಾಧಾರಣ ಊಟವೂ ಉಚಿತವಾಗಿ ದೊರೆಯುತ್ತದೆ.

P. Sainath
ಪುಸ್ತಕಗಳನ್ನು ಕೊಂಡೊಯ್ಯುವವರ ಹೆಸರು, ಅವುಗಳನ್ನು ಪಡೆದ ಮತ್ತು ಮರಳಿಸಿದ ದಿನಾಂಕಗಳನ್ನು ರಿಜಿಸ್ಟರಿನಲ್ಲಿ ಅತ್ಯಂತ ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಇಳಂಗೋ ಅಡಿಗಳ್ ಅವರ ‘ಶಿಲಪ್ಪದಿಗಾರಂ’ ಕೃತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಲು ಪಡೆಯಲಾಗಿದೆ. ಈ ವರ್ಷದ ಆರಂಭದಲ್ಲೇ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಓದುಗರು ಕೊಂಡೊಯ್ದಿದ್ದಾರೆ. ದಟ್ಟ ಅರಣ್ಯದ ನಡುವೆ ಉನ್ನತ ಮಟ್ಟದ ಸಾಹಿತ್ಯ ಪ್ರಸಾರವಾಗುತ್ತಿರುವುದು ಮತ್ತು ಈ ವಂಚಿತ ಆದಿವಾಸಿ ಸಮುದಾಯದ ಜನರು ಅದನ್ನು ಅಷ್ಟೊಂದು ಆಸಕ್ತಿಯಿಂದ ಓದುತ್ತಿರುವುದು ಮನಸ್ಸಿಗೆ ನೆಮ್ಮದಿ ನೀಡುವ ವಿಷಯವಾಗಿತ್ತು. ನಮ್ಮಲ್ಲಿ ಕೆಲವರು ಬಹುಶಃ ನಗರ ಪ್ರದೇಶಗಳಲ್ಲಿ ಓದುವ ಹವ್ಯಾಸವು ಕಡಿಮೆಯಾಗುತ್ತಿರುವ ಬಗ್ಗೆ ಯೋಚಿಸತೊಡಗಿದ್ದೆವು.
ನಮ್ಮ ತಂಡದಲ್ಲಿದ್ದ ಬಹುತೇಕರು ಬರವಣಿಗೆಯನ್ನೇ ಜೀವನೋಪಾಯವಾಗಿಸಿಕೊಂಡವರು, ಆದರೆ ಈ ಪುಟ್ಟ ಗ್ರಂಥಾಲಯ ನಮ್ಮೆಲ್ಲರ ಅಹಂಕಾರವನ್ನು ಅಡಗಿಸಿತ್ತು. ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಕೇರಳ ಪ್ರೆಸ್ ಅಕಾಡೆಮಿಯ ಪತ್ರಿಕೋದ್ಯಮದ ಮೂವರು ಯುವ ವಿದ್ಯಾರ್ಥಿಗಳಲ್ಲಿ ಒಬ್ಬನಾದ ವಿಷ್ಣು ಎಸ್., ಆ ಪುಸ್ತಕಗಳ ನಡುವೆ ಒಂದು ‘ವಿಭಿನ್ನವಾದ’ ಪುಸ್ತಕವನ್ನು ಪತ್ತೆಹಚ್ಚಿದ. ಅದೊಂದು ನೋಟ್ಬುಕ್ ಆಗಿತ್ತು, ಅದರ ಅನೇಕ ಪುಟಗಳಲ್ಲಿ ಕೈಬರಹವಿತ್ತು. ಅದಕ್ಕೆ ಯಾವುದೇ ಹೆಸರಿರಲಿಲ್ಲ, ಆದರೆ ಅದು ಚಿನ್ನತಂಬಿಯವರ ಆತ್ಮಕಥೆಯಾಗಿತ್ತು. ಇನ್ನೂ ಹೆಚ್ಚೇನೂ ಬರೆಯಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದದಿಂದ ಹೇಳಿದರು. ಆದರೆ ಆ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. “ಚಿನ್ನತಂಬಿಯವರೇ... ಇದರಲ್ಲಿ ಇರೋದನ್ನ ಸ್ವಲ್ಪ ಓದಿ ತಿಳಿಸಿ” ಎಂದೆವು. ಅದು ಬಹಳ ಉದ್ದವಿರಲಿಲ್ಲ ಮತ್ತು ಅಪೂರ್ಣವಾಗಿತ್ತು, ಆದರೆ ಅದರಲ್ಲಿನ ಜೀವಂತಿಕೆ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಅದು ಅವರ ಆರಂಭಿಕ ದಿನಗಳ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯ ದಾಖಲೆಯಾಗಿತ್ತು. ಲೇಖಕರಿಗೆ ಕೇವಲ ಏಳು ವರ್ಷ ವಯಸ್ಸಾಗಿದ್ದಾಗ ನಡೆದ ಮಹಾತ್ಮ ಗಾಂಧೀಜಿಯವರ ಹತ್ಯೆಯೊಂದಿಗೆ ಇದು ಆರಂಭವಾಗುತ್ತದೆ ಮತ್ತು ಆ ಘಟನೆ ಅವರ ಮೇಲೆ ಬೀರಿದ ಪ್ರಭಾವವನ್ನು ಅವರ ಲೇಖನಿ ಅದ್ಭುತವಾಗಿ ವಿವರಿಸಿತ್ತು.
ಇಡಮಲಕುಡಿಗೆ ವಾಪಸ್ ಬಂದು ಈ ಗ್ರಂಥಾಲಯವನ್ನು ಸ್ಥಾಪಿಸಲು ಮುರಳಿ ‘ಮಾಶ್’ (ಮಾಸ್ಟರ್ ಅಥವಾ ಶಿಕ್ಷಕರು) ತಮಗೆ ಪ್ರೇರಣೆ ನೀಡಿದರು ಎಂದು ಚಿನ್ನತಂಬಿ ಹೇಳುತ್ತಾರೆ. ಮುರಳಿ ‘ಮಾಶ್’ ಈ ಭಾಗದ ಓರ್ವ ಆದರ್ಶ ವ್ಯಕ್ತಿ ಮತ್ತು ಶಿಕ್ಷಕರೆಂದೇ ಪರಿಗಣಿಸಲ್ಪಟ್ಟಿದ್ದಾರೆ. ಅವರೂ ಸಹ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದರೂ, ಬೇರೊಂದು ಪಂಗಡದವರು. ಅವರು ಈ ಪಂಚಾಯತಿಯ ಹೊರಗಿರುವ ಮಂಕುಳಂ ನಿವಾಸಿ. ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಮುತುವನ್ ಸಮುದಾಯಕ್ಕಾಗಿ ಕೆಲಸ ಮಾಡುತ್ತಾ ಕಳೆದಿದ್ದಾರೆ. ತಾನು ಯಾವುದೇ ವಿಶೇಷ ಕೆಲಸ ಮಾಡಿಲ್ಲವೆನ್ನುವುದು ಚಿನ್ನತಂಬಿಯವರ ಅಭಿಪ್ರಾಯ. ಅವರು ಹೇಳುತ್ತಾರೆ, “ಮಾಶ್ ಅವರೇ ನನಗೆ ದಾರಿ ತೋರಿಸಿಕೊಟ್ಟರು.” ತಮ್ಮ ವಿನಯದ ಕಾರಣಕ್ಕಾಗಿ ಅವರು ಇದನ್ನು ಒಪ್ಪಿಕೊಳ್ಳದೇ ಇರಬಹುದು, ಆದರೆ ಚಿನ್ನತಂಬಿಯವರು ನಿಜಕ್ಕೂ ದೊಡ್ಡ ಕೆಲಸವನ್ನೇ ಮಾಡುತ್ತಿದ್ದಾರೆ.
ಇಡಮಲಕುಡಿ ಎನ್ನುವುದು 2,500ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಒಟ್ಟು 28 ಕುಗ್ರಾಮಗಳಲ್ಲಿ ಒಂದು. ಇಡೀ ವಿಶ್ವದಲ್ಲಿ ಮುತುವನ್ ಜನಾಂಗದ ಒಟ್ಟು ಜನಸಂಖ್ಯೆಯೂ ಸರಿಸುಮಾರು ಇಷ್ಟೇ ಇರುವುದು. ಇರುಪ್ಪುಕ್ಕಲ್ಲಕುಡಿಯಲ್ಲಿ ಕೇವಲ 100 ಜನರು ವಾಸಿಸುತ್ತಿದ್ದಾರೆ. ಇಡಮಲಕುಡಿ 100 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಈ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯದ ಅತ್ಯಂತ ಕಡಿಮೆ ಸಂಖ್ಯೆಯ ಮತದಾರರು (1,500) ಇದ್ದಾರೆ. ನಾವು ಹಿಂತಿರುಗುವಾಗ ನಿಗದಿಪಡಿಸಿದ ಹಾದಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಕಾಡಾನೆಗಳ ಹಿಂಡು ತಮಿಳುನಾಡಿನ ವಾಲ್ಪಾರೈ ಕಡೆ ಹೋಗುವ ಈ ‘ಶಾರ್ಟ್-ಕಟ್’ ರಸ್ತೆಯನ್ನು ಆಕ್ರಮಿಸಿಕೊಂಡಿತ್ತು.
ಆದರೂ, ಬಹುಶಃ ಜಗತ್ತಿನ ಅತ್ಯಂತ ದುರ್ಗಮ ಗ್ರಂಥಾಲಯಗಳಲ್ಲಿ ಒಂದನ್ನು ನಡೆಸುತ್ತಾ ಚಿನ್ನತಂಬಿ ಇಲ್ಲಿ ಕುಳಿತಿದ್ದಾರೆ. ತಮ್ಮ ಬಡ ಗ್ರಾಹಕರ ಓದಿನ ಹಸಿವು ಮತ್ತು ಸಾಹಿತ್ಯದ ದಾಹವನ್ನು ತಣಿಸುತ್ತಾ ಅವರು ಈ ಗ್ರಂಥಾಲಯವನ್ನು ಸದಾ ಸಕ್ರಿಯವಾಗಿರಿಸಿದ್ದಾರೆ. ಅದರ ಜೊತೆಜೊತೆಗೇ ಅವರಿಗೆ ಚಹಾ, ‘ಮಿಕ್ಸ್ಚರ್’ ಮತ್ತು ಬೆಂಕಿಕಡ್ಡಿಗಳನ್ನೂ ಪೂರೈಸುತ್ತಿದ್ದಾರೆ. ಸಾಮಾನ್ಯವಾಗಿ ಸದಾ ಗದ್ದಲ ಮಾಡುತ್ತಿದ್ದ ನಮ್ಮ ತಂಡವು, ಈ ಭೇಟಿಯಿಂದ ಪ್ರಭಾವಿತಗೊಂಡು, ಭಾವುಕ ಹೃದಯದೊಂದಿಗೆ ಮೌನವಾಗಿ ಅಲ್ಲಿಂದ ಹೊರಟೆವು. ನಮ್ಮ ಕಣ್ಣುಗಳು ಮುಂದಿರುವ ದೀರ್ಘ ಪಯಣದ ಅಪಾಯಕಾರಿ ಹಾದಿಯ ಮೇಲಿದ್ದವು. ಆದರೆ ನಮ್ಮ ಮನಸ್ಸುಗಳು ಮಾತ್ರ ಆ ಅಸಾಧಾರಣ ಗ್ರಂಥಪಾಲಕ ಪಿ. ವಿ. ಚಿನ್ನತಂಬಿಯವರ ಬಳಿಯಿದ್ದವು.
ಈ ಲೇಖನವು ಮೊದಲು ಇಲ್ಲಿ ಪ್ರಕಟವಾಗಿತ್ತು: http://psainath.org/the-wilderness-library/
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/the-wilderness-library-kn

