ಅಂಜುರಾಣಿಯವರಿಗೆ 2012ರಲ್ಲಿ ಮದುವೆಯಾಯಿತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಅವರ ಬದುಕು ಅಸ್ತವ್ಯಸ್ತಗೊಂಡಿತು. ಇಬ್ಬರು ಹೆಣ್ಣುಮಕ್ಕಳ ತಾಯಿಯಾದ ಅಂಜು (34), "ನನ್ನ ಗಂಡನ ಕುಡಿತದ ಚಟದಿಂದಾಗಿ ಮನೆಯಲ್ಲಿ ದಿನವೂ ಜಗಳ ನಡೆಯುತ್ತಿತ್ತು. ಪರಿಣಾಮವಾಗಿ ನಾನು ಒಳಗೊಳಗೇ ಕುಸಿದು ಹೋಗುತ್ತಿದ್ದೆ" ಎಂದು ಹೇಳುತ್ತಾರೆ.
ಅಂಜು ಅವರ ಗಂಡ ಮನೆ ನಡೆಸುವುದಕ್ಕೆ ದುಡ್ಡು ಕೊಡುತ್ತಿರಲಿಲ್ಲ. ಮಗಳನ್ನು ನೋಡಿಕೊಳ್ಳುವುದಕ್ಕೂ ಹಣವಿರುತ್ತಿರಲಿಲ್ಲ. "ಮನೆಯ ಕರೆಂಟ್ ಬಿಲ್ ಕಟ್ಟುತ್ತಲೇ ಇರಲಿಲ್ಲ. ಸಾಲದ ಬಾಧೆ ಎಷ್ಟಾಯಿತೆಂದರೆ ಸಾಲ ಕೊಟ್ಟವರು ದಿನಾಲೂ ಮನೆಗೆ ಬಂದು ಪೀಡಿಸುತ್ತಿದ್ದರು. ಆ ದಿನಗಳನ್ನು ನಾನು ಭಯದಿಂದಲೇ ಕಳೆಯುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಅಂಜು ಅವರ ಗಂಡನ ಮನೆ ಪಶ್ಚಿಮ ಉತ್ತರ ಪ್ರದೇಶದ ಸ್ಯಾನಾ ಪಟ್ಟಣದಲ್ಲಿತ್ತು. ಜಗಳವಾದಾಗಲೆಲ್ಲಾ ಅಂಜು ಸ್ಯಾನಾದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಅಯದ್ನಗರ ಗ್ರಾಮದಲ್ಲಿರುವ ತಮ್ಮ ತವರಿಗೆ ಮರಳುತ್ತಿದ್ದರು. ಆದರೆ ಅವರ ಅಕ್ಕಪಕ್ಕದವರು ಹಾಗೂ ಸಂಬಂಧಿಕರು ಇದನ್ನೊಂದು ಸಮಸ್ಯೆಯಾಗಿ ನೋಡದೆ, ಮದುವೆ ಎಂದ ಮೇಲೆ ಇದೆಲ್ಲಾ ಇದ್ದಿದ್ದೇ ಎಂದು ನಿರ್ಲಕ್ಷಿಸುತ್ತಿದ್ದರು. ಪ್ರತಿ ಬಾರಿಯೂ ಅವರು ಅಂಜು ಅವರನ್ನು ಗಂಡನ ಮನೆಗೆ ವಾಪಸ್ ಕಳುಹಿಸುತ್ತಿದ್ದರು. ಹಲವು ವರ್ಷಗಳ ಕಾಲ ಹೀಗೆ ಅಂಜು ಅನಿವಾರ್ಯವಾಗಿ ಮಗಳೊಂದಿಗೆ ಮತ್ತೆ ಗಂಡನ ಮನೆ ಸೇರಿಕೊಳ್ಳುತ್ತಿದ್ದರು.
ಸುಮಾರು 15 ವರ್ಷಗಳ ಹಿಂದೆ ಅಂಜು ಅವರ ಅಪ್ಪ ಕ್ಯಾನ್ಸರ್ ಕಾಯಿಲೆಗೆ ತುತ್ತಾದರು. ಅಂದಿನಿಂದ ಅವರ ತಾಯಿ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಮುರಕಲು ಸ್ಥಿತಿಯಲ್ಲಿದ್ದ ಹಗ್ಗದ ಮಂಚದ ಮೇಲೆ ತಾಯಿಯ ಪಕ್ಕ ಕುಳಿತಿದ್ದ ಅಂಜು, " ಒಂದು ದಿನ ಇನ್ನು ಸಾಕೆನ್ನಿಸಿ ಶಾಶ್ವತವಾಗಿ ತವರು ಸೇರಿಕೊಂಡೆ. ಅವರೂ ನನ್ನನ್ನ ಕರೆಯಲು ಬರಲಿಲ್ಲ. ನನಗೂ ಹೋಗಬೇಕು ಎನ್ನಿಸಲಿಲ್ಲ" ಎಂದರು.
ತವರುಮನೆ ಸೇರಿಕೊಂಡ ಅಂಜು ಮನೆ ನಡೆಸಲು ಹೊಲಗಳಲ್ಲಿ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬೆಳೆಗಳ ಹಂಗಾಮು ಮತ್ತು ಕೆಲಸದ ಲಭ್ಯತೆಯ ಆಧಾರದ ಮೇಲೆ, ಅವರಿಗೆ ದಿನವಹಿ 200ರಿಂದ 250 ರೂಪಾಯಿಗಳವರೆಗೆ ಕೂಲಿ ಸಿಗುತ್ತಿತ್ತು.
2017ರಲ್ಲಿ ಅಂಜು ಎರಡನೇ ಮದುವೆಯಾಗಲು ನಿರ್ಧರಿಸಿದರು. ನಂತರ ಅವರಿಗೆ ಮತ್ತೊಬ್ಬಳು ಮಗಳು ಜನಿಸಿದಳು. "ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದೆ, ಆದರೆ ಎರಡನೇ ಮದುವೆ ಇನ್ನೂ ಕೆಟ್ಟದಾಗಿತ್ತು. ಎರಡನೇ ಗಂಡನಿಗೂ ಕುಡಿಯುವ ಚಟವಿತ್ತು ಮತ್ತು ಕುಡಿದು ಬಂದು ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ಕುಡಿಯಲು ಹಣಕ್ಕಾಗಿ ಮನೆಯಲ್ಲಿರುವ ಅಗತ್ಯ ವಸ್ತುಗಳನ್ನು ಮಾರುತ್ತಿದ್ದ. ಧಾನ್ಯ ಮತ್ತು ಕೂಲರ್ ಅಲ್ಲದೆ, ನನ್ನ ಹೊಲಿಗೆ ಯಂತ್ರವನ್ನೂ ಸಹ ಮಾರಿದ್ದ. ಮುಂದೆ ಅವನು ಬೇರೆಯವರ ಮನೆಗಳಿಂದ ವಸ್ತುಗಳನ್ನು ಕದಿಯಲು ಶುರುಮಾಡಿದ. ಇದರಿಂದ ನಾನು ಸಮಾಜದ ಮುಂದೆ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು" ಎಂದು ಅಂಜು ಹೇಳುತ್ತಾರೆ.









