“ಲಾಕ್ಡೌನ್ ಸಮಯದಲ್ಲಿ ವಿಶಾಖಪಟ್ಟಣದಿಂದ ಪೂರ್ತಿ 12 ದಿನಗಳ ಕಾಲ ನಡೆದು ಮನೆ ತಲುಪಿಕೊಂಡಿದ್ದೆವು” ಎನ್ನುತ್ತಾ 2020ರ ಕೋವಿಡ್ - 19 ಕಾಲದ ಭಯಾನಕ ನೆನಪುಗಳನ್ನು ಹಂಚಿಕೊಂಡರು 45 ವರ್ಷದ ಕಯಲ್ ಭುಯಾನ್. ಆ ಸಮಯದಲ್ಲಿ ಅವರು ಅಗನಂಪುಡಿ ಎನ್ನುವಲ್ಲಿನ ಲಾರ್ಸನ್ ಮತ್ತು ಟೂಬ್ರೊ ನಿರ್ಮಾಣ ಸ್ಥಳದಲ್ಲಿ ದಿನಗೂಲಿ ಕಾರ್ಮಿಕರಾಗಿದ್ದರು.
ಅಂದು 10 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಸುಮಾರು 80 ಮಂದಿ 1,000 ಕಿಲೋಮೀಟರ್ ನಡೆಯುವ ಮೂಲಕ ಜಾರ್ಖಂಡ್ ರಾಜ್ಯದ ಪಲಾಮು ಜಿಲ್ಲೆಯ ರಬ್ದಾ ಗ್ರಾಮವನ್ನು ತಲುಪಿದ್ದರು. ತಲುಪಿಕೊಂಡಿದ್ದರು. “ಹಗಲು ರಾತ್ರಿ ನೋಡದೆ ನಡೆದಿದ್ದೆವು. ದಣಿವೆನ್ನಿಸಿದರೆ ಕೇವಲ ಒಂದು ಗಂಟೆ ಮಲಗಿ ಮತ್ತೆ ನಡೆಯಲಾರಂಭಿಸುತ್ತಿದ್ದೆವು.”
ಕಯಲ್ ಆರು ವರ್ಷಗಳ ನಂತರ ಮತ್ತೆ ಅಂತಹದ್ದೇ ಒಂದು ಪ್ರಯಾಣವನ್ನು ಕೈಗೊಂಡರು. ಈ ಬಾರಿ ಅವರು ರಾಷ್ಟ್ರದ ರಾಜಧಾನಿಯಿಂದ ದುರಂತ ವಾಸ್ತವದ ಕಡೆಗೆ ಹೊರಟಿದ್ದರು.
ಅವರು ಕುತ್ತಿಗೆ ತನಕದ ಸಾಲದಲ್ಲಿ ಮುಳುಗಿದ್ದಾರೆ.
ಇರಾನ್ ವಿರುದ್ಧ ಅಮೇರಿಕ ಮತ್ತು ಇಸ್ರೇಲ್ ಯುದ್ಧದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಉಂಟಾಗಿದೆ. ಇದರಿಂದಾಗಿ ವಲಸೆ ಕಾರ್ಮಿಕರ ಬದುಕು ಅಲ್ಲೋಲಕಲ್ಲೋಲವಾಗಿದೆ.
ಮಾರ್ಚ್ ತಿಂಗಳ ಮೊದಲ ವಾರದಲ್ಲಿ, “ಎಲ್ಲರೂ ಇನ್ನೊಂದು ಲಾಕ್ಡೌನ್ ಶುರುವಾಗಿ ಎನ್ನುತ್ತಿದ್ದರು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಕೈಲ್ ಎಲ್ ಅಂಡ್ ಟಿ ಸಂಸ್ಥೆಯ ನಿರ್ಮಾಣ ಸ್ಥಳವೊಂದರಲ್ಲಿ 500 ರೂಪಾಯಿ ಕೂಲಿಗೆ ಮೇಸ್ತ್ರಿಯಾಗಿ ದುಡಿಯುತ್ತಿದ್ದರು.
ನಂತರ ಅಡುಗೆ ಅನಿಲದ ದರ 90 ರೂಪಾಯಿಯಿಂದ 300 ರೂಪಾಯಿಗೆ ಏರಿತು. “ನಾವು ಮರದ ಚೂರುಗಳು ಮತ್ತು ಪ್ಲೈವುಡ್ ಚೂರುಗಳನ್ನು ಅಡುಗೆ ಒಲೆ ಉರಿಸಲು ಬಳಸುತ್ತಿದ್ದೆವು. ಇದೇ ರೀತಿ ಹೇಗೋ 10 ದಿನ ದೂಡಿದೆವು.”








