ನಮ್ಮ ಕೊರ್ಕು ಬುಡಕಟ್ಟಿನಲ್ಲಿ, ಹುಲಿ ಬಂದಿತೆಂದರೆ, ಅದು ಶುಭದ ಸಂಕೇತವೆಂದು ಭಾವಿಸುತ್ತೇವೆ. ಅದರ ಹೆಜ್ಜೆಗುರುತುಗಳು ರೈತನಿಗೆ ಸಂಪತ್ತನ್ನು ಸೂಚಿಸುತ್ತದೆಯಲ್ಲದೆ, ಸುತ್ತಮುತ್ತಲಿನಲ್ಲಿ ಸಮೃದ್ಧಿಯು ನೆಲೆಸುತ್ತದೆ.
ನನ್ನ ಹೆಸರು ರಾಮ್ಲಾಲ್. ನಾನು ಮಹಾರಾಷ್ಟ್ರದ ಮೇಲ್ಘಾಟ್ ಹುಲಿ ಮೀಸಲಿನ (MTR) ಬಫರ್ ಕ್ಷೇತ್ರದ ಪೇವಿಹಿರ್ ಹಳ್ಳಿಯಲ್ಲಿ ಜನಿಸಿದೆ. ನಾನು ಮತ್ತು ವಸಂತ್, MTRನ ಪ್ರಮುಖ ಕ್ಷೇತ್ರವೆನಿಸಿದ ಬೊರ್ತಖೇಡ ಹಳ್ಳಿಯಲ್ಲಿ ನೆಲೆಸಿದ್ದೇವೆ. ನಾವಿಬ್ಬರೂ ಕೊರ್ಕು ಬುಡಕಟ್ಟಿನವರು. ನಮ್ಮ ಪರಿವಾರಗಳು ಅನೇಕ ಪೀಳಿಗೆಗಳಿಂದಲೂ ಈ ಕಾಡುಗಳಲ್ಲಿ ವಾಸಿಸುತ್ತಿವೆ.
ಹಸು ಹಾಗೂ ಎತ್ತುಗಳ ಸಗಣಿಯಲ್ಲಿ ಹುಲಿಯ ಉಗುರುಗಳ ಗುರುತುಗಳು ಕಂಡುಬಂದಲ್ಲಿ ಶುಭದ ಸಂಕೇತವೆಂಬ ಪಾರಂಪರಿಕ ಜ್ಞಾನದೊಂದಿಗೆ ನಾನು ಬೆಳೆದಿದ್ದೇನೆ. ಆ ಚಿಹ್ನೆಗಳಿರುವ ಸಗಣಿಯ ತುಂಡನ್ನು ಧಾನ್ಯದ ಗೋದಾಮಿನಲ್ಲಿಡಲಾಗುತ್ತದೆ. ಇದರ ಉಪಸ್ಥಿತಿಯಿಂದಾಗಿ ಮನೆಗೆ ಧಾನ್ಯಗಳ ಕೊರತೆಯಾಗುವುದಿಲ್ಲ.
ನಾವು ಮೆಕ್ಕೆಜೋಳ, ಜೋಳ, ಗೋಧಿ, ಭತ್ತ, ಸಿರಿಧಾನ್ಯಗಳು, ಸೋಯಾಬಿನ್, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ತೊಗರಿ, ಹೆಸರುಕಾಳು, ಕಡಲೆ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯುತ್ತೇವೆ. ಇವುಗಳ ಬಹುಪಾಲನ್ನು ನಾವು ಬಳಸಿ ಸ್ವಲ್ಪ ಭಾಗವನ್ನು ಮಾರುತ್ತೇವೆ. ನಮ್ಮ ಸಮುದಾಯದ ಬಹುತೇಕ ರೈತರು ಅರಣ್ಯದ ಭೂಮಿಯಲ್ಲಿ ಕೃಷಿಯನ್ನು ಕೈಗೊಳ್ಳಲು ವ್ಯಕ್ತಿಗತ ಅರಣ್ಯ ಹಕ್ಕುಗಳನ್ನು ಹೊಂದಿದ್ದಾರೆ. ನಾವು ಮಳೆಯನ್ನು ಆಶ್ರಯಿಸಿದ್ದರೂ, ನೀರಾವರಿಗಾಗಿ ಹತ್ತಿರದ ಹೊಳೆಗಳು ಮತ್ತು ಬಾವಿಗಳನ್ನು ಅವಲಂಬಿಸಿದ್ದೇವೆ.
















